
ಶಿವಮೊಗ್ಗ, ಜೂನ್ 28: ಮದುವೆಗೂ ಮುನ್ನವೇ ಗರ್ಭಿಣಿಯಾದ ಮಗಳನ್ನು ತಂದೆ ಕೊಲೆ ಮಾಡಲು ಯತ್ನಿಸಿರುವ ಘಟನೆ ಸೊರಬ (Soraba) ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ನಡೆದಿದೆ. ಮಗಳನ್ನು ಕೊಲೆ ಮಾಡಲು ಯತ್ನಿಸಿದ ತಂದೆ ಧರ್ಮನಾಯ್ಕ್ನನ್ನು ಸೊರಬ ಪೊಲೀಸರು ಬಂಧಿಸಿದ್ದಾರೆ. ಮಳವಳ್ಳಿ ಗ್ರಾಮದ ನಿವಾಸಿಯಾದ ಆರೋಪಿ ಧರ್ಮನಾಯ್ಕ್ಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದೊಡ್ಡ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದು ಕನಸು ಕಂಡಿದ್ದ ಧರ್ಮನಾಯ್ಕ್ ಈ ಸಲುವಾಗಿ ಹಗಲು ರಾತ್ರಿ ಕಷ್ಟಪಟ್ಟು ದುಡಿಯುತ್ತಿದ್ದನು. ಆದರೆ, ಮಗಳು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಾಳೆ.
ಈ ವಿಷಯ ತಿಳಿದು ಧರ್ಮನಾಯ್ಕ್ ಆಘಾತಗೊಂಡಿದ್ದಾನೆ. ಆಕಾಶವೇ ಕಳಚಿ ಬಿದ್ದಂತಾಗಿದೆ. ಈ ವಿಚಾರ ಊರಿನವರಿಗೆ ಗೊತ್ತಾದರೆ ತಾನು ಮುಖ ಎತ್ತಿಕೊಂಡು ಓಡಾಡುವುದು ಹೇಗೆ ಎಂಬ ಪ್ರಶ್ನೆ ಧರ್ಮನಾಯ್ಕ್ಗೆ ಕಾಡಿದೆ. ನನ್ನ ಮಾನ, ಮರ್ಯಾದೆ ಹೋಗುತ್ತದೆ ಎಂದು ಧರ್ಮನಾಯ್ಕ್ ಚಿಂತೆಗೆ ಈಡಾಗಿದ್ದಾನೆ.
ಬಳಿಕ, ಧರ್ಮನಾಯ್ಕ್ ಆಸ್ಪತ್ರೆಗೆ ಹೋಗೋಣವೆಂದು ಜೂ. 27 ರಂದು ಮಗಳು ಮತ್ತು ಪತ್ನಿಯನ್ನು ಕರೆದುಕೊಂಡು ಉಳವಿ ಸಮೀಪದ ಕಣ್ಣೂರು ಕಾಡಿನೊಳಗೆ ಕರೆದುಕೊಂಡು ಹೋಗಿದ್ದಾನೆ. ಕಾಡಿನಲ್ಲಿ ಧರ್ಮನಾಯ್ಕ್ ಮಗಳ ಕುತ್ತಿಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಪತ್ನಿ, ಮಗಳನ್ನು ಸಾಯಿಸಬೇಡಿ ಅಂತ ಪತಿ ಧರ್ಮನಾಯ್ಕ್ ಬಳಿ ಬೇಡಿಕೊಂಡರೂ ಮಾತು ಕೇಳದೇ ಕೊಲೆ ಮಾಡಲು ಯತ್ನಿಸಿದ್ದಾನೆ.
ಈ ವೇಳೆ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಗ, ಧರ್ಮನಾಯ್ಕ್ ಮಗಳು ಸತ್ತು ಹೋದಳು ಅಂತ ಭಾವಿಸಿ ಪತ್ನಿಯನ್ನು ಕರೆದುಕೊಂಡು ವಾಪಸ್ ಮನೆಗೆ ಹೋಗಿದ್ದಾನೆ. ಆದರೆ, ಸ್ವಲ್ಪ ಹೊತ್ತಿನ ಬಳಿಕ ಯುವತಿಗೆ ಎಚ್ಚರವಾಗಿದೆ. ಬಳಿಕ ಸ್ಥಳೀಯರ ಸಹಾಯದಿಂದ ಯುವತಿ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾಳೆ.
ಯುವತಿ ತನ್ನ ಸಂಬಂಧಿಯಾದ ಓರ್ವ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದುಬಂದಿದೆ. ಇದರಿಂದ ಯುವತಿ ಗರ್ಭಿಣಿಯಾಗಿದ್ದಾಳೆ ಎಂದು ಮಾಹಿತಿ ಲಭ್ಯವಾಗಿದೆ. ಮಗಳನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಧರ್ಮನಾಯ್ಕ್ ಜೈಲು ಸೇರಿದ್ದಾನೆ. ಇತ್ತ ತಾಯಿ, ಮಗಳನ್ನು ಬದುಕಿಸಲು ಹೋರಾಟ ನಡೆಸುತ್ತಿದ್ದಾರೆ. ಯುವತಿ ಸ್ಥಿತಿ ಗಂಭೀರವಾಗಿದೆ.
ಧರ್ಮನಾಯ್ಕ್ ಪತ್ನಿ ಮತ್ತು ಎರಡನೇ ಮಗಳು ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ. ದೊಡ್ಡ ಮಗಳು ಮಾನಸಿಕ ಅಸ್ವಸ್ಥೆ, ಅವಳೇ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಳು ಎಂದು ಹೇಳುತ್ತಿದ್ದಾರೆ. ಆದರೆ, ಚಿಕಿತ್ಸೆ ಪಡೆಯುತ್ತಿರುವ ಯುವತಿ ತಂದೆ ವಿರುದ್ಧ ಕೊಲೆ ಯತ್ನ ದೂರು ನೀಡಿದ್ದಾರೆ. ಪೊಲೀಸರು ಧರ್ಮನಾಯ್ಕ್ನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.