ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೆ ಮುಹೂರ್ತ ಫಿಕ್ಸ್: ರಾಜ್ಯ ರಾಜಕಾರಣದಲ್ಲಿ ಈಶ್ವರಪ್ಪ ಸಂಚಲನ
ವಿಜಯಪುರದಲ್ಲಿ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಫೆಬ್ರವರಿ 4 ರಂದು ಬಸವನಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟಿಸುವುದಾಗಿ ಘೋಷಿಸಿದ್ದಾರೆ. ಒಂದು ಲಕ್ಷ ಜನರ ಭಾಗವಹಿಸುವಿಕೆಯೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗದ ಸ್ವಾಮೀಜಿಗಳ ಅಭಿವೃದ್ಧಿ ಮತ್ತು ಹಿಂದೂ ಸಮಾಜದ ಹಿತಾಸಕ್ತಿಗಳ ರಕ್ಷಣೆಗೆ ಬ್ರಿಗೇಡ್ ಕೆಲಸ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ವಿಜಯಪುರ, ಜನವರಿ 05: ಫೆಬ್ರವರಿ 4 ರಂದು ಬಸವನಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಮುಹೂರ್ತ ಫಿಕ್ಸ್ ಆಗಿದ್ದು, ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಲು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (KS Eshwarappa) ಮುಂದಾಗಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1008 ಸಾಧು ಸಂತರ ಪಾದ ಪೂಜೆ ಮೂಲಕ ಬ್ರಿಗೇಡ್ ಉದ್ಘಾಟನೆ ನಡೆಯಲಿದೆ. 1 ಲಕ್ಷ ಜನ ಸೇರಿಸಿ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕನ್ಹೇರಿ ಮಠದ ಶ್ರೀಗಳು ಹಾಗೂ ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರುಪೀಠದ ತಿಂಥಣಿ ಶಾಖಾ ಮಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಉದ್ಘಾಟನೆ ಮಾಡುತ್ತಾರೆ. ಜನವರಿ 12 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ. ಪ್ರವಾಸದ ಮೂಲಕ ಬ್ರಿಗೇಡ್ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಒಂದು ದೇಶ ಒಂದು ಚುನಾವಣೆ ಮಸೂದೆ ತರುವ ಪ್ರಯತ್ನ ನಡೆದಿದೆ: ಡಿಕೆ ಶಿವಕುಮಾರ್
ಹಿಂದೂ ಸಮಾಜದ ಪರವಾಗಿ ಬ್ರಿಗೇಡ್ ಹೋರಾಟ ಮಾಡಲಿದೆ. ಹಿಂದುಳಿದ ವರ್ಗದ ಸ್ವಾಮೀಜಿಗಳ ಪರ ಬ್ರಿಗೇಡ್ ಕೆಲಸ ಮಾಡಲಿದೆ. ಬ್ರಿಗೇಡ್ ಸ್ಥಾಪನೆ ಮಾಡುವುದಕ್ಕೆ ಮುಖ್ಯ ಉದ್ದೇಶ ಹಿಂದುಳಿದ ಮಠಗಳ ಅಭಿವೃದ್ಧಿ. ಹಿಂದೂಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಇರಲಿದೆ ಎಂದಿದ್ದಾರೆ.
ನನ್ನ ಜೀವನದಲ್ಲಿ ನಾನು ರಾಜಕಾರಣದ ಜೊತೆ ಜೊತೆಗೆ ಸಾಧು ಸಂತರ ಸೇವೆ ಮಾಡಿದ್ದೇನೆ. ರಾಜಕಾರಣದ ಜೊತೆ ಜೊತೆಗೆ ಧಾರ್ಮಿಕ ಕಾರ್ಯದಲ್ಲೂ ನಾನು ಭಾಗಿಯಾಗುತ್ತಿದ್ದೇನೆ. ಈ ಹಿಂದೆ ಮಠ ಮಂದಿರಗಳಿಗೆ ಹಣ ನೀಡುವಂತೆ ಮಾಡಿದ್ದು ನಾನೇ. ಹೀಗಾಗಿ ನಾನು ಧಾರ್ಮಿಕ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ನನ್ನ ವಿರುದ್ಧ ಆರೋಪ ಬಂದಾಗ ರಾಜೀನಾಮೆ ನೀಡಿದ್ದೆ
ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಹೋರಾಟ ವಿಚಾರವಾಗಿ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪ ಬಂದಾಗ ನಾನು ರಾಜೀನಾಮೆ ನೀಡಿದ್ದೆ. ನಾನು ಆರ್‌ಎಸ್‌ಎಸ್‌ನಿಂದ ಬೆಳೆದು ಬಂದವನು. ನನ್ನ ವಿರುದ್ಧ ಆರೋಪ ಬಂದ ತಕ್ಷಣವೇ ರಾಜೀನಾಮೆ ನೀಡಿದ್ದೆ. ಕೆಲವರು ನನ್ನ ವಿರುದ್ಧ ರಾಜಕೀಯ ಮಾಡಿದರು. ಅವರು ಈಗ ಅನುಭವಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನನ್ನ ವಿರುದ್ಧ ಕೆಲಸ ಮಾಡಿದವರು ಯಾರೆಂದು ಸಮಯ ಬಂದಾಗ ಗೊತ್ತಾಗುತ್ತೆ
ನನ್ನ ವಿರುದ್ಧ ಕೆಲವರು ಕೆಲಸ ಮಾಡಿದ್ದರು. ನನ್ನ ವಿರುದ್ಧ ಕೆಲಸ ಮಾಡಿದವರಿಗೆ ದೇವರೇ ಉತ್ತರ ನೀಡ್ತಿದ್ದಾನೆ. ಮುಂದಿನ ದಿನಗಳಲ್ಲಿ ಅವರಿಗೆ ದೇವರು ಒಳ್ಳೆಯದ್ದು ಮಾಡುತ್ತಾರೆ. ನನ್ನ ವಿರುದ್ಧ ಕೆಲಸ ಮಾಡಿದವರು ಯಾರು, ಯಾವ ಪಕ್ಷದವರು ಅನ್ನೋದು ಸಮಯ ಬಂದಾಗ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.