ತೀರ್ಥಹಳ್ಳಿ: ಸ್ಥಳೀಯರ ವಿರೋಧದ ನಡುವೆಯೂ ಕಲ್ಲು ಗಣಿಗಾರಿಗೆ; ಗುಡ್ಡ ಕುಸಿತ, ಅನಾಹುತದ ಮುನ್ಸೂಚನೆ
ಕಳೆದ ಕೆಲ ದಿನಗಳಿಂದ ತೀರ್ಥಹಳ್ಳಿ ತಾಲ್ಲೂಕಿನಾದ್ಯಂದ ಭಾರೀ ಮಳೆ ಸುರಿದಿದ್ದು ಪರಿಣಾಮ ತೀರ್ಥಹಳ್ಳಿ ತಾಲ್ಲೂಕಿನ ಕಸಬಾ ಹೋಬಳಿಯ ಅಂಬಳಿಕೆ ಗ್ರಾಮದ ಗುರುಮೂರ್ತಿ ಎನ್ನುವವರಿಗೆ ಸೇರಿದ ಎರಡು ಎಕರೆ ಅಡಿಕೆ ತೋಟ ಸಂಪೂರ್ಣ ನಾಶವಾಗಿದೆ.
ತೀರ್ಥಹಳ್ಳಿ: ಒಂದೆಡೆ ವಿಪರೀತ ಮಳೆ. ಮತ್ತೊಂದೆಡೆ ಎಗ್ಗಿಲ್ಲದೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆ. ಕಲ್ಲು ಗಣಿಗಾರಿಕೆ ಕಾರಣದಿಂದ ಗುಡ್ಡಗಳು ಸಡಿಲಗೊಂಡು ಮಳೆಗಾಲದ ಸಂದರ್ಭದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಅಂಬಳಿಕೆ ಗ್ರಾಮ ಭಾರೀ ಅನಾಹುತಗಳಿಗೆ ತುತ್ತಾಗುತ್ತಿದೆ.
ಗ್ರಾಮದ ಗುಡ್ಡಗಳಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಪದೇ ಪದೇ ನಡೆಸಲಾಗುವ ಬ್ಲಾಸ್ಟಿಂಗ್ ಪರಿಣಾಮ ಗುಡ್ಡವು ಸಡಿಲಗೊಂಡಿದ್ದು, ಮುಂಬರುವ ದಿನಗಳಲ್ಲಿ ಭಾರೀ ಅನಾಹುತದ ಸೂಚನೆಗಳು ಸಿಗುತ್ತಿವೆ. ಕಳೆದ ಕೆಲ ದಿನಗಳಿಂದ ತೀರ್ಥಹಳ್ಳಿ ತಾಲ್ಲೂಕಿನಾದ್ಯಂದ ಭಾರೀ ಮಳೆ ಸುರಿದಿದ್ದು ಪರಿಣಾಮ ತೀರ್ಥಹಳ್ಳಿ ತಾಲ್ಲೂಕಿನ ಕಸಬಾ ಹೋಬಳಿಯ ಅಂಬಳಿಕೆ ಗ್ರಾಮದ ಗುರುಮೂರ್ತಿ ಎನ್ನುವವರಿಗೆ ಸೇರಿದ ಎರಡು ಎಕರೆ ಅಡಿಕೆ ತೋಟ ಸಂಪೂರ್ಣ ನಾಶವಾಗಿದೆ. ಅಲ್ಲದೆ ಹಳ್ಳ ತೊರೆಗಳು ಗುಡ್ಡ ಕುಸಿತದಿಂದಾಗಿ ತೋಟಗಳ ಮೇಲೆ ಹರಿದಿದ್ದು ಸುಮಾರು ಇಪ್ಪತೈದು ಎಕರೆಗೂ ಹೆಚ್ಚಿನ ಕೃಷಿ ಜಮೀನಿನಲ್ಲಿ ಹತ್ತಾರು ಅಡಿ ನೀರು ನಿಂತು ಬೆಳೆ ನಾಶವಾಗಿದೆ.
ಘಟನೆ ತಿಳಿದ ನಂತರ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ತೀರ್ಥಹಳ್ಳಿಯ ತಹಸೀಲ್ದಾರ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಎರಡು ತಿಂಗಳುಗಳಿಂದ ಗಣಿಗಾರಿಗೆ ನಿಲ್ಲಿಸಿದ್ದೇವೆ ಎಂದು ಅಧಿಕಾರಿಗಳು ತೇಪೆಹಚ್ಚುವ ಕೆಲಸ ಮಾಡುತ್ತಿದ್ದು ತೆರೆಮರೆಯಲ್ಲಿ ಕಣ್ಣು ತಪ್ಪಿಸಿ ಬ್ಲಾಸ್ಟಿಂಗ್ ಮುಂದುವರೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿ ಭೇಟಿಯ ಬಳಿಕವಾದರೂ ಶಾಶ್ವತ ಪರಿಹಾರ ಜತೆಗೆ ಗುಡ್ಡ ಕುಸಿತದ ಆತಂಕದಿಂದ ಮುಕ್ತಿ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ.
ವರದಿ: ಮಾಲ್ತೇಶ್ ಜನಗಲ್, ಆಂಕರ್ ಟಿವಿ9 ಕನ್ನಡ
ಇದನ್ನೂ ಓದಿ:
Uttara Kannada Flood: ಚಿತ್ರನೋಟ: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟ ಭೂಕುಸಿತಕ್ಕೊಳಗಾದ ಕಳಚೆ ಗ್ರಾಮ ಹೇಗಿದೆ?
Published On - 10:09 pm, Thu, 29 July 21