ಜೋಗದ ಜುಳುಜುಳು ನಾದ: ಸಾವಿರಾರು ಕಂಠಗಳಿಂದ ಜೋಗದ ಝರಿಯಲಿ ಜೋಗದ ಸಿರಿ ಹಾಡಿನ ಕನ್ನಡ ಉತ್ಸವ, ವಿಡಿಯೋ ಇದೆ

| Updated By: ಆಯೇಷಾ ಬಾನು

Updated on: Oct 29, 2021 | 11:49 AM

ಶಿವಮೊಗ್ಗ ಜಿಲ್ಲೆಯ ಬಂಡೆಗಳ ಮೇಲಿಂದ 253 ಮೀಟರ್ ಆಳಕ್ಕೆ ಧುಮ್ಮಿಕ್ಕುವ ಜೋಗ ಜಲಪಾತದೆದುರು ಕೆ. ಎಸ್. ನಿಸಾರ್ ಅಹಮದ್ರ ನಿತ್ಯೋತ್ಸವ ಹಾಡನ್ನು ಹಾಡಿ ಕನ್ನಡ ಉತ್ಸವ ಆಚರಿಸಲಾಗಿದೆ.

ಜೋಗದ ಜುಳುಜುಳು ನಾದ: ಸಾವಿರಾರು ಕಂಠಗಳಿಂದ ಜೋಗದ ಝರಿಯಲಿ ಜೋಗದ ಸಿರಿ ಹಾಡಿನ ಕನ್ನಡ ಉತ್ಸವ, ವಿಡಿಯೋ ಇದೆ
ಸಾವಿರಾರು ಕಂಠಗಳಿಂದ ಜೋಗದ ಮುಂದೆ ಜೋಗದ ಸಿರಿ ಹಾಡಿನ ಕನ್ನಡ ಉತ್ಸವ
Follow us on

ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ, ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣವನದ, ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ, ತಾಯಿ ನಿತ್ಯೋತ್ಸವ
– ಹಿರಿಯ ಕವಿ ಕೆ. ಎಸ್. ನಿಸಾರ್ ಅಹಮದ್​ ಅವರ ಈ ಸಾಲುಗಳು ಕನ್ನಡಿಗರನ್ನು ಸದಾ ಬಡಿದೆಬ್ಬಿಸಿ, ಕನ್ನಡಾಂಬೆಯ ಹಾಗೂ ಜೋಗದ ಸಿರಿವಂತಿಕೆಯನ್ನು ಸದಾ ಕಾಲ ಸಾರಿ ಸಾರಿ ಹೇಳುವಂತಿದೆ. ಪ್ರಸ್ತುತ ಈ ಸಾಲುಗಳನ್ನು ಮೆಲುಕು ಹಾಕಲು ಕಾರಣವಿದೆ. ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಆಯೋಜಿಸಿರುವ ಲಕ್ಷ ಕಂಠಗಳ ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ನೂರಾರು ಕಂಠಗಳ ಮೂಲಕ ಈ ತಾಯಿಯ ಉತ್ಸವ ನಡೆದಿದೆ.

ಹೌದು ಶಿವಮೊಗ್ಗ ಜಿಲ್ಲೆಯ ಬಂಡೆಗಳ ಮೇಲಿಂದ 253 ಮೀಟರ್ ಆಳಕ್ಕೆ ಧುಮ್ಮಿಕ್ಕುವ ಜೋಗ ಜಲಪಾತದೆದುರು ಕೆ. ಎಸ್. ನಿಸಾರ್ ಅಹಮದ್​ ಅವರ (KS Nissar Ahmed) ನಿತ್ಯೋತ್ಸವ ಹಾಡನ್ನು ಹಾಡಿ ಕನ್ನಡ ಉತ್ಸವ ಆಚರಿಸಲಾಗಿದೆ. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಸಾವಿರಾರು ಜನ ಜೋಗದ ಮುಂದೆ ನಿಂತು ನಿತ್ಯೋತ್ಸವ ಹಾಡನ್ನು ಹಾಡಿದ್ದಾರೆ. ಇಡೀ ನಾಡನ್ನು ಈ 66ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡಮಯವನ್ನಾಗಿ ಮಾಡಲು, ಕನ್ನಡದ ಭಾವಲಹರಿ ಜನಮನದ ನರನಾಡಿಗಳಲ್ಲಿ ಸಂಚರಿಸುವ ರೋಮಾಂಚನವನ್ನು ಉಂಟು ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಲಕ್ಷ ಕಂಠಗಳ ಕನ್ನಡ ಗೀತಗಾಯನ ರೂಪುಗೊಂಡಿದೆ. ಸಾವಿರ ಜನರ ಕಂಠದಲ್ಲಿ ಜೋಗದ ಮುಂದೆ ಜೋಗದ ಸಿರಿ ಬೆಳಕಿನಲ್ಲಿ ಎಂಬ ಕನ್ನಡ ಗೀತೆ ಮೊಳಗಿದೆ.

ವಿವಿಧ ಜಿಲ್ಲೆಗಳಲ್ಲಿ ಗೀತಗಾಯನದ ಪ್ರಮುಖ ತಾಣಗಳು:
•ಜೋಗದ ಮುಂದೆ ಜೋಗದ ಸಿರಿ ಬೆಳಕಿನಲ್ಲಿ. ಈ ಗೀತಗಾಯನದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಜೋಗದ ಜಲಪಾತದ ಮುಂದೆ ಸಾವಿರ ಜನರ ಕಂಠದಲ್ಲಿ ಈ ಕನ್ನಡ ಗೀತೆಗಳನ್ನು ಹಾಡಲು ಯೋಜಿಸಲಾಗಿದೆ
•ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಕವಿಶೈಲದಲ್ಲಿ ಈ ಗೀತೆಗಳು ಮೊಳಗಲಿವೆ
•ಚಿತ್ರದುರ್ಗದ ಸುಪ್ರಸಿದ್ಧ ಕೋಟೆಯ ಮುಂಭಾಗದಲ್ಲಿ
•ಮಂಗಳೂರು ಸಮುದ್ರತೀರ
•ಉಡುಪಿಯ ಶ್ರೀ ಕೃಷ್ಣದೇಗುಲದ ಮುಂಭಾಗದಲ್ಲಿ ಕೂಡ ಈ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ
•ಮೂಡಬಿದರೆಯ ಸಾವಿರ ಕಂಬದ ಬಸದಿ ಹಾಗೂ ಮಂಗಳೂರು ಬಂದರಿನ ಮೀನುಗಾರರ ಮಧ್ಯೆ ಈ ಗೀತೆಗಾಯನ ನಡೆಯಲಿದೆ
•ಮೈಸೂರಿನ ಅರಮನೆ ಮುಂಭಾಗ ಹಾಗೂ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಗಾಯನ ತಂಡಗಳು ಈ ಗೀತೆಗಳನ್ನು ಹಾಡಲಿದೆ
•ಬೆಳಗಾವಿಯ ಸುವರ್ಣಸೌಧದ ಮುಂದೆ ಹಾಗೂ ಬೆಳಗಾವಿ ಗಡಿ ಪ್ರದೇಶಗಳಲ್ಲಿ
•ಹಂಪಿಯ ವಿರೂಪಾಕ್ಷ ದೇಗುಲದ ಮುಂದೆ, ಮಹಾನವಮಿ ದಿಬ್ಬ, ವಿಜಯವಿಠ್ಠಲ ದೇವಸ್ಥಾನದ ಆವರಣ, ಕಲ್ಲಿನ ರಥದ ಮುಂಭಾಗ
•ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ಒಂಭತ್ತು ಸಾವಿರ ವಿದ್ಯಾರ್ಥಿಗಳು ಈ ಗೀತಗಾಯನದಲ್ಲಿ ಪಾಲ್ಗೊಳ್ಳಲಿದ್ದಾರೆ
•ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇಗುಲದ ಮುಂಭಾಗ
•ಕೊಡಗಿನ ಭಾಗಮಂಡಲ ಹಾಗೂ ಇತರ ಪ್ರವಾಸಿ ತಾಣಗಳ ಮುಂದೆ
•ಹಾಸನದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಹಾಗೂ ಕನ್ನಡದ ಪ್ರಥಮ ಶಾಸನ ದೊರೆತ ಹಲ್ಮಿಡಿ ಗ್ರಾಮದಲ್ಲಿ ಈ ಗೀತಗಾಯನದ ಕಂಪು ಪಸರಿಸಲಿದೆ
•ಚಿಕ್ಕಬಳ್ಳಾಪುರದ ಭೋಗ ನಂದೀಶ್ವರ ದೇವಸ್ಥಾನದ ಮುಂಭಾಗ
•ಯಾದಗಿರಿಯ ಬಂದೀಖಾನೆ ಮುಂಭಾಗ
•ಹಾವೇರಿಯ ಸುಪ್ರಸಿದ್ಧ ಕಾಗಿನೆಲೆ, ಶಿಶುನಾಳ, ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯ ಹಾಗೂ ಕನಕದಾಸರ ಜನ್ಮಸ್ಥಳ ಬಾಡಾದಲ್ಲಿ ಈ ಗೀತಗಾಯನ ಆಯೋಜಿಸಲಾಗುತ್ತಿದೆ
•ವಿಜಯಪುರದ ಅಕ್ಕಮಹಾದೇವಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಆವರಣ ಹಾಗೂ ಗಡಿಭಾಗಗಳಲ್ಲಿ
•ರಾಯಚೂರಿನ ಹಟ್ಟಿ ಚಿನ್ನದಗಣಿ ಆವರಣ, ಆರ್.ಟಿ.ಪಿ.ಎಸ್. ವಿದ್ಯುತ್ ಉತ್ಪಾದನಾ ಘಟಕದ ಮುಂಭಾಗದಲ್ಲಿಯೂ ಕನ್ನಡ ಗೀತೆಯ ಗಾಯನ ಗಂಗೆ ಪ್ರವಹಿಸಲಿದೆ

ಇದನ್ನೂ ಓದಿ: ಸಾವಿರಕ್ಕೂ ಹೆಚ್ಚು ಸ್ಥಳ, ಐದು ಲಕ್ಷ ಕಂಠಗಳಲ್ಲಿ ಕನ್ನಡ ಗೀತೆ ಗಾಯನ! ಅಭೂತಪೂರ್ವ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ