Shuchi Scheme: 19 ಲಕ್ಷ ವಿದ್ಯಾರ್ಥಿನಿಯರಿಗೆ ಶುಭ ಸುದ್ದಿ: ಕರ್ನಾಟಕದಲ್ಲಿ ಮತ್ತೆ ಆರಂಭವಾಯ್ತು ಶುಚಿ ಯೋಜನೆ
ರಾಜ್ಯದ ಹದಿ ಹರೆಯದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವ `ಶುಚಿ ಯೋಜನೆ’ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬುಧವಾರ ಮರು ಚಾಲನೆ ನೀಡಿದ್ದಾರೆ. ಮುಟ್ಟಿನ ನೈರ್ಮಲ್ಯಕ್ಕಾಗಿ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿತರಿಸುವ ಈ ಯೋಜನೆಯಿಂದ ಸುಮಾರು 19 ಲಕ್ಷ ವಿದ್ಯಾರ್ಥಿನಿಯರಿಗೆ ಪ್ರಯೋಜನವಾಗಲಿದೆ.
ಬೆಂಗಳೂರು, ಫೆಬ್ರವರಿ 29: ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ, ಮುಟ್ಟಿನ ನೈರ್ಮಲ್ಯಕ್ಕೆ ಸಂಬಂಧಿಸಿದ ‘ಶುಚಿ ಯೋಜನೆ’ಯನ್ನು (Shuchi Scheme) ಕರ್ನಾಟಕ ಸರ್ಕಾರ (Karnataka Government) ಬುಧವಾರ ಪುನರಾರಂಭ ಮಾಡಿದೆ. ಇದರೊಂದಿಗೆ, ಶಾಲಾ ಮತ್ತು ಕಾಲೇಜುಗಳ ಸುಮಾರು 19 ಲಕ್ಷ ಹದಿಹರೆಯದ ವಿದ್ಯಾರ್ಥಿನಿಯರಿಗೆ ಸರ್ಕಾರ ಶುಭ ಸುದ್ದಿ ನೀಡಿದೆ. ಮುಟ್ಟಿನ ನೈರ್ಮಲ್ಯಕ್ಕಾಗಿ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು (Sanitary Napkins) ವಿತರಿಸುವ, ಕರ್ನಾಟಕ ಸರ್ಕಾರ ಹಮ್ಮಿಕೊಂಡ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ.
ಅಧಿಕಾರಿಗಳ ಪ್ರಕಾರ, ಯೋಜನೆಯ ಮೂಲಕ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಶಾಲೆಗಳು ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಸುಮಾರು 19 ಲಕ್ಷ ವಿದ್ಯಾರ್ಥಿನಿಯರಿಗೆ (10 ರಿಂದ 18 ವರ್ಷ ವಯಸ್ಸಿನ) ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒದಗಿಸುತ್ತದೆ. ಆರೋಗ್ಯ ಇಲಾಖೆಯು ನೇರವಾಗಿ ಶಾಲೆಗಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ತಲುಪಿಸುತ್ತದೆ. ಅದನ್ನು ಶಾಲೆಗಳು ವಿದ್ಯಾರ್ಥಿನಿಯರಿಗೆ ವಿತರಿಸಲಿವೆ. ಪ್ರತಿ ಕಿಟ್‌ನಲ್ಲಿ 10 ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಇರುತ್ತವೆ. ವಿದ್ಯಾರ್ಥಿನಿಯರಿಗೆ ಒಂದು ವರ್ಷಕ್ಕೆ ಅಗತ್ಯವಿರುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಯೋಜನೆಯು ವಿದ್ಯಾರ್ಥಿನಿಯರ ನೈರ್ಮಲ್ಯ ಮತ್ತು ಆರೋಗ್ಯಕ್ಕೆ ಮುಖ್ಯವಾಗಿದೆ. ಈ ಹಿಂದೆ ಈ ಯೋಜನೆಯನ್ನು ಹಿಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪ್ರಾರಂಭಿಸಿತ್ತು. ಆದರೆ, ನಂತರದ (ಬಿಜೆಪಿ ನೇತೃತ್ವದ) ಸರ್ಕಾರವು ಅಂತಹ ಮಹತ್ವದ ಯೋಜನೆಯನ್ನು ಏಕೆ ನಿಲ್ಲಿಸಿತು ಎಂಬುದು ತಿಳಿದಿಲ್ಲ ಎಂದು ರಾವ್ ಹೇಳಿದ್ದಾರೆ.
ಯೋಜನೆಗೆ ಮರುಚಾಲನೆ ಬಗ್ಗೆ ಆರೋಗ್ಯ ಇಲಾಖೆ ಸಂದೇಶ
ಮಾನ್ಯ ಆರೋಗ್ಯ ಸಚಿವರಾದ ಶ್ರೀ @dineshgrao ಅವರು ಇಂದು, ರಾಜ್ಯದ ಹದಿ ಹರೆಯದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವ `ಶುಚಿ ಯೋಜನೆ’ಗೆ, ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರ ಜೊತೆಗೂಡಿ ಮರುಚಾಲನೆ ನೀಡಿದರು.
1/2 pic.twitter.com/7Zys7MjdgM
— K’taka Health Dept (@DHFWKA) February 28, 2024
ನಾನು ಆರೋಗ್ಯ ಸಚಿವನಾದ ನಂತರ, ಶುಚಿ ಯೋಜನೆಯನ್ನು ಪುನರಾರಂಭಗೊಳಿಸುವುದಾಗಿ ಘೋಷಿಸಿದ್ದೆ. ಕಾಂಗ್ರೆಸ್ ಸರ್ಕಾರವು ಮಹಿಳೆಯರ ಪರವಾಗಿ ಶಕ್ತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಹೆಣ್ಣುಮಕ್ಕಳ ಆರೋಗ್ಯಕ್ಕಾಗಿ ಸಾಮೂಹಿಕ ದೃಷ್ಟಿಕೋನದಿಂದ ಪ್ರಾರಂಭಿಸಲಾಗಿದ್ದ ಶುಚಿ ಯೋಜನೆಯನ್ನು ನಿರ್ಲಕ್ಷಿಸುವುದಿಲ್ಲ ಎಂದು ಗುಂಡೂರಾವ್ ಹೇಳಿದ್ದಾರೆ.
ನಾವು ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ನೀಡುತ್ತೇವೆ. 47 ಕೋಟಿ ವೆಚ್ಚದಲ್ಲಿ ಈ ಯೋಜನೆ ಸಾಕಾರಗೊಳ್ಳುತ್ತಿದೆ. ಇದರಿಂದ ಬಡ ಕುಟುಂಬಗಳ ವಿದ್ಯಾರ್ಥಿನಿಯರಿಗೆ ನೆರವಾಗಲಿದೆ. ಋತುಸ್ರಾವವು ಸಹಜ ಪ್ರಕ್ರಿಯೆಯಾಗಿದ್ದು, ಈ ಬಗ್ಗೆ ಹೆಣ್ಣುಮಕ್ಕಳು ಹಿಂಜರಿಯುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: 1ನೇ ತರಗತಿ ಪ್ರವೇಶಕ್ಕೆ 6 ವರ್ಷ ವಯೋಮಿತಿ ನಿಗದಿ: ಶಿಕ್ಷಣ ಇಲಾಖೆ ಆದೇಶ
ಋತುಸ್ರಾವದ ಬಗ್ಗೆ ಕೆಲವು ಮೂಢನಂಬಿಕೆಗಳು ಸಮಾಜದಲ್ಲಿ ಹಾಸುಹೊಕ್ಕಾಗಿವೆ. ಅವುಗಳನ್ನು ತೊಲಗಿಸಿ, ಸ್ವಚ್ಛತೆ ಮತ್ತು ಸ್ಯಾನಿಟರಿ ನ್ಯಾಪ್ಕಿನ್ಗಳ ಬಳಕೆ ಕುರಿತು ಜಾಗೃತಿ ಮೂಡಿಸಬೇಕು. ಹೆಣ್ಣು ಮಕ್ಕಳ ಆರೋಗ್ಯಕ್ಕೆ ಸ್ವಚ್ಛತೆ ಮತ್ತು ಮುಟ್ಟಿನ ವೈಜ್ಞಾನಿಕ ನಿರ್ವಹಣೆ ಮುಖ್ಯವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಎರಡು ಜಿಲ್ಲೆಗಳಲ್ಲಿ ಮುಟ್ಟಿನ ಕಪ್ ವಿತರಣೆ
ಸ್ಯಾನಿಟರಿ ಪ್ಯಾಡ್‌ಗಳಿಗೆ ಪರ್ಯಾಯವಾಗಿ ನಾವು ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದೇವೆ. ಈ ಜಿಲ್ಲೆಗಳಲ್ಲಿ ಶುಚಿ ಯೋಜನೆ ಅಡಿಯಲ್ಲಿ ಮುಟ್ಟಿನ ಕಪ್‌ಗಳನ್ನು ಅಥವಾ ಮೆನ್ಸ್ಟ್ರುವಲ್ ಕಪ್‌ಗಳನ್ನು ವಿತರಿಸಲು ನಿರ್ಧರಿಸಿದ್ದೇವೆ. ಮೆನ್ಸ್ಟ್ರುವಲ್ ಕಪ್‌ಗಳು ಪರಿಸರ ಸ್ನೇಹಿಯಾಗಿದ್ದು, ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ರಾವ್ ಹೇಳಿದ್ದಾರೆ. ಆರೋಗ್ಯ ಇಲಾಖೆಯು ಸ್ಯಾನಿಟರಿ ಪ್ಯಾಡ್‌ಗಳ ಬದಲಿಗೆ ಮೆನ್ಸ್ಟ್ರುವಲ್ ಕಪ್‌ಗಳ ಬಳಕೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಕಾರ್ಯಕ್ರಮವನ್ನು ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ