ಖಾಸಗಿ ವಲಯದಲ್ಲೂ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಬೇಕು: ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ಎನ್.ಮಹೇಶ್ ಆಗ್ರಹ
ಈಗ ಮೀಸಲಾತಿಗೆ ಬೇಡಿಕೆ ಹೆಚ್ಚು ಕೇಳಿ ಬರುತ್ತಿದ್ದರೂ, ಖಾಸಗೀಕರಣ ಹೆಚ್ಚಾದ ಹಾಗೆ ಮೀಸಲಾತಿ ಕಡಿಮೆ ಆಗುತ್ತದೆ. ಕೇಂದ್ರ ಸರ್ಕಾರ ಹೀಗೆಯೇ ಖಾಸಗೀಕರಣಕ್ಕೆ ಮಹತ್ವ ನೀಡುತ್ತಾ ಹೋದರೆ ಕ್ರಮೇಣವಾಗಿ ಮೀಸಲಾತಿ ಮರೀಚಿಕೆಯಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸಬೇಕೆಂದರೆ ಖಾಸಗಿ ವಲಯದಲ್ಲಿಯೂ ಮೀಸಲಾತಿ ತರಬೇಕು.
ಬೆಂಗಳೂರು: ಮೀಸಲಾತಿಯ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಮೀಸಲಾತಿ ಪರ ಇದ್ದೇನೆ. ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಇರಬೇಕು. ಈ ವರ್ಷ 1.5 ಲಕ್ಷ ಕೋಟಿ ರೂ. ಖಾಸಗಿ ವಲಯದಲ್ಲಿ ಹೂಡಿಕೆ ಆಗುತ್ತಿದೆ. ಅಲ್ಲದೇ ಬೇರೆ ಬೇರೆ ಕ್ಷೇತ್ರಗಳು ಖಾಸಗೀಕರಣ ಆಗುತ್ತಿವೆ. ಕೇಂದ್ರವೇ ಹಲವು ಸಂಸ್ಥೆಗಳನ್ನು ಖಾಸಗಿಯವರಿಗೆ ಕೊಡುತ್ತಿದ್ದು, ಹೀಗೇ ಮುಂದುವರೆದರೆ ಮೀಸಲಾತಿ ಎನ್ನುವುದು ಕ್ರಮೇಣ ಮರೀಚಿಕೆ ಆಗುತ್ತದೆ. ಹೀಗಾಗಿ ಖಾಸಗಿ ವಲಯದಲ್ಲಿ ಮೀಸಲಾತಿ ಸಿಗಲು ಕೇಂದ್ರ ಸರ್ಕಾರ ನಿಯಮಗಳಲ್ಲಿ ತಿದ್ದುಪಡಿ ತರಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗ ಮೀಸಲಾತಿಗೆ ಬೇಡಿಕೆ ಹೆಚ್ಚು ಕೇಳಿ ಬರುತ್ತಿದ್ದರೂ, ಖಾಸಗೀಕರಣ ಹೆಚ್ಚಾದ ಹಾಗೆ ಮೀಸಲಾತಿ ಕಡಿಮೆ ಆಗುತ್ತದೆ. ಕೇಂದ್ರ ಸರ್ಕಾರ ಹೀಗೆಯೇ ಖಾಸಗೀಕರಣಕ್ಕೆ ಮಹತ್ವ ನೀಡುತ್ತಾ ಹೋದರೆ ಕ್ರಮೇಣವಾಗಿ ಮೀಸಲಾತಿ ಮರೀಚಿಕೆಯಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸಬೇಕೆಂದರೆ ಖಾಸಗಿ ವಲಯದಲ್ಲಿಯೂ ಮೀಸಲಾತಿ ತರಬೇಕು ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಬಜೆಟ್ ಮೇಲೆ ಚರ್ಚೆ ಮಾಡುತ್ತಿದ್ದ ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಕೊರೊನಾ ಕಾಲದಲ್ಲಿ ನಾವೆಲ್ಲರೂ ಮನೆಯಲ್ಲಿ ಕೂತಿದ್ದೆವು. ಆದರೆ ನಮ್ಮ ರೈತರು ಮಾತ್ರ ಗಣನೀಯ ಪ್ರಮಾಣದ ಬೆಳೆ ಬೆಳೆದಿದ್ದಾರೆ. ರೈತರಿಗೆ ಕೊಡುವ ಕೃಷಿ ಸಮ್ಮಾನ್ ಪರಿಹಾರ ₹10 ಸಾವಿರ ಇದೆ ಅದನ್ನು ₹12 ಸಾವಿರಕ್ಕೇರಿಸಿ. ಗೋವಧೆ ನಿಷೇಧಿಸಿದ್ದೀರಿ, ಹೀಗಾಗಿ ಗೋವುಗಳ ಖರೀದಿ ಸರ್ಕಾರವೇ ಮಾಡಲಿ, ತಾಲ್ಲೂಕಿಗೊಂದು ಗೋಶಾಲೆ ಮಾಡಬೇಕು. ಜೊತೆಗೆ, ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಕೊಡಬೇಕು. ಈ ಬೆಂಬಲ ಬೆಲೆಗೆ ಕಾನೂನಿನ ಸ್ಪರ್ಶ ಇರಬೇಕು ಎಂದು ಹೇಳುತ್ತಾ ಖಾಸಗೀಕರಣದೊಳಗೆ ಮೀಸಲಾತಿ, ಎಸ್ಸಿ, ಎಸ್ಟಿ ಸಮುದಾಯದ ಹಕ್ಕುಗಳನ್ನು ಉಳಿಸಿಕೊಳ್ಳಬೇಕಿದೆ ಎಂದು ಪ್ರತಿಪಾದಿಸಿದರು.
ಬಿಜೆಪಿ ಬಂದ ಮೇಲೆ ಎಸ್ಸಿ, ಎಸ್ಟಿ ಅಭಿವೃದ್ಧಿ ನಿಗಮಗಳಿಂದ 3,060 ಎಕರೆ ಖರೀದಿಸಿ ಎಸ್ಸಿ, ಎಸ್ಟಿ ರೈತರಿಗೆ ಕೊಡಲಾಗಿದೆ. ಇದೇವೇಳೆ ಎಸ್ಸಿ, ಎಸ್ಟಿ ರೈತರು ವಿವಿಧ ಕೋರ್ಟುಗಳ ವ್ಯಾಜ್ಯಗಳಲ್ಲಿ 3,000 ಎಕರೆ ಜಮೀನು ಕಳೆದುಕೊಂಡಿದ್ದಾರೆ. ಈ ಜಮೀನನ್ನು ಸರ್ಕಾರ ಉಳಿಸಿಕೊಡಬೇಕು. ಅಲ್ಲದೇ, ಖಾಸಗಿ ವಲಯದಲ್ಲೂ ಮೀಸಲಾತಿ ಕೊಡಬೇಕಿದೆ. ಅದಕ್ಕೊಂದು ನಿಯಮ ತರಬೇಕು ಎಂದು ಅಭಿಪ್ರಾಯ ತಿಳಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಈ ಮಾತಿಗೆ ನನ್ನದೂ ಸಹಮತವಿದೆ. ಖಾಸಗಿ ವಲಯದಲ್ಲಿ ಮೀಸಲಾತಿ ಬೇಕು ಎಂದು ದನಿಗೂಡಿಸಿದರು.
ಇದನ್ನೂ ಓದಿ: ಶೇ.50ರಷ್ಟು ಮೀಸಲಾತಿಯನ್ನು ಲಕ್ಷ್ಮಣರೇಖೆಯಂತೆ ಪಾಲಿಸಬೇಕು; ಮರಾಠಾ ಮಿಸಲಾತಿ ಕುರಿತು ಹಿರಿಯ ವಕೀಲ ಅರವಿಂದ ದಾತಾರ್ ವಾದ
ಇದನ್ನೂ ಓದಿ: ಸಂವಿಧಾನದ ಚೌಕಟ್ಟಿನಲ್ಲಿ ಮೀಸಲಾತಿಗೆ ಕ್ರಮ: ಗೃಹ ಸಚಿವ ಬಸವರಾಜ ಬೊಮ್ಮಾಯಿ