ಲೆಕ್ಕಾಚಾರದ ಮೂಲಪಾಠವೇ ಗೊತ್ತಿಲ್ಲ: ನಿರ್ಮಲಾ ಸೀತಾರಾಮನ್​​ರನ್ನು ಸಂಪುಟದಿಂದ ಕೈಬಿಡುವಂತೆ ಸಿಎಂ ಒತ್ತಾಯ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮಾನ್ ಅವರು ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರದ ಬಜೆಟ್​ ಬಗ್ಗೆ ವಿವರಿಸಿದ್ದರು. ಅಲ್ಲದೇ ಬಜೆಟ್​ನಲ್ಲಿ ಕರ್ನಾಟಕಕ್ಕೆ ಏನಿಲ್ಲ ಎನ್ನುವ ಆರೋಪಕ್ಕೆ ಉತ್ತರಿಸುವ ಪ್ರತ್ನಿಸಿದ್ದಾರೆ. ಈ ವೇಳೆ ಕೆಲ ಅಂಕಿಸಂಖ್ಯೆಗಳನ್ನು ನೀಡಿದ್ದಾರೆ. ಇದಕ್ಕೆ ಆಕ್ರೋಶಗೊಂಡಿರುವ ಸಿದ್ದರಾಮಯ್ಯ, ಆಯವ್ಯಯದ ಲೆಕ್ಕಾಚಾರದ ಮೂಲಪಾಠವೇ ಗೊತ್ತಿಲ್ಲ, ನಿರ್ಮಲಾ ಸೀತಾರಾಮನ್ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕೈಬಿಡುವಂತೆ ಪ್ರಧಾನಿ ಮೋದಿಗೆ ಆಗ್ರಹಿಸಿದ್ದಾರೆ.

ಲೆಕ್ಕಾಚಾರದ ಮೂಲಪಾಠವೇ ಗೊತ್ತಿಲ್ಲ: ನಿರ್ಮಲಾ ಸೀತಾರಾಮನ್​​ರನ್ನು ಸಂಪುಟದಿಂದ ಕೈಬಿಡುವಂತೆ ಸಿಎಂ ಒತ್ತಾಯ
ನಿರ್ಮಲಾ ಸೀತಾರಾಮನ್, ಸಿದ್ದರಾಮಯ್ಯ
Follow us
ರಮೇಶ್ ಬಿ. ಜವಳಗೇರಾ
|

Updated on: Jul 29, 2024 | 8:39 PM

ಬೆಂಗಳೂರು, (ಜುಲೈ 29): ಆಯವ್ಯಯದ ಲೆಕ್ಕಾಚಾರದ ಮೂಲಪಾಠವೇ ಗೊತ್ತಿಲ್ಲದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.  ಪತ್ರಿಕಾ ಪ್ರಕಟಣೆ ಹೊರಡಿಸುರುವ ಸಿದ್ದರಾಮಯ್ಯ, ಇಂಥವರ ಕೈಯಲ್ಲಿ ಹಣಕಾಸು ಖಾತೆ ನೀಡಿರುವುದು ಅತ್ಯಂತ ಅಪಾಯಕಾರಿ ನಿರ್ಧಾರ ಎಂದು ಖಾರವಾಗಿ ಹೇಳಿದ್ದಾರೆ. ಇನ್ನು ಮುಖ್ಯಮಂತ್ರಿ ಪ್ರಕಟಣೆಯಲ್ಲಿ ಏನೆಲ್ಲಾ ಹೇಳಿದ್ದಾರೆ ಎನ್ನುವ ವಿವರ ಈ ಕೆಳಗಿನಂತಿದೆ.

ಭಾನುವಾರದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರ ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಮರೆಮಾಚುವ ಹತಾಶ ಪ್ರಯತ್ನ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಾವೇ ಹೆಣೆದ ಬಲೆಯಲ್ಲಿ ಸಿಕ್ಕಿ ಹಾಕಿಕೊಡಿರುವುದು ದುರಂತ. ಸಚಿವರ ಗೊಂದಲಮಯ ಹೇಳಿಕೆಗಳ ಸಿಕ್ಕುಗಳನ್ನೆಲ್ಲ ಬಿಡಿಸುತ್ತಾ ಹೋದರೆ ಕೊನೆಗೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿರುವುದು ಚೊಂಬು ಮಾತ್ರ ಎನ್ನುವುದು ಸಾಬೀತಾಗುತ್ತದೆ. ನಿರ್ಮಲಾ ಸೀತಾರಾಮನ್ ಅವರ ಪ್ರಕಾರ ಹಿಂದಿನ ಯುಪಿಎ ಸರ್ಕಾರ (2004-2014) ಹತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಿರುವ ಅನುದಾನ ರೂ.60,779 ಕೋಟಿ. ಎನ್‌ಡಿಎ ಸರ್ಕಾರ (2014-2024) ಹತ್ತು ವರ್ಷಗಳ ಅವಧಿಯಲ್ಲಿ ನೀಡಿದ್ದ ಹಣ ರೂ.2,36,955 ಕೋಟಿ ಎಂದು ಸಚಿವೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ: ಅಧಿವೇಶದಲ್ಲಿ ದೇವೇಗೌಡ ಅಬ್ಬರ ಹೇಗಿದೆ ನೋಡಿ

ಆದರೆ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ಎಷ್ಟು ಪಟ್ಟು ಹೆಚ್ಚಾಗಿದೆ ಎನ್ನುವುದನ್ನು ಅವರು ಮರೆತಿದ್ದಾರೆ. ಇದು ಅವರ ಅಜ್ಞಾನವೋ, ಇಲ್ಲವೇ ಜನತೆಯ ದಾರಿ ತಪ್ಪಿಸುವ ಹುನ್ನಾರವೋ? ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು. 2013-14ರ ಕೇಂದ್ರ ಸರ್ಕಾರದ ಬಜೆಟ್ ರೂ.16,06 ಲಕ್ಷ ಕೋಟಿ. ಆಗ ಕರ್ನಾಟಕಕ್ಕೆ ಅನುದಾನದ ರೂಪದಲ್ಲಿ ರೂ. 16,428 ಕೋಟಿ ಮತ್ತು ತೆರಿಗೆ ಹಂಚಿಕೆಯಲ್ಲಿ ರೂ.15,005 ಕೋಟಿ ಹೀಗೆ ಒಟ್ಟು ರೂ.31,483 ಕೋಟಿ ನೀಡಲಾಗಿತ್ತು. ಈ ನೆರವು ಒಟ್ಟು ಬಜೆಟ್ ನ ಶೇಕಡಾ 1.9ರಷ್ಟಾಗುತ್ತದೆ.

2024-25ರ ಅವಧಿಯ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ರೂ.48.02 ಲಕ್ಷ ಕೋಟಿಯಾಗಿದೆ. ಈ ಅವಧಿಯಲ್ಲಿ ನಮಗೆ ಕೇಂದ್ರ ಅನುದಾನದ ರೂಪದಲ್ಲಿ ರೂ.15,229 ಕೋಟಿ ಮತ್ತು ತೆರಿಗೆ ಹಂಚಿಕೆಯಲ್ಲಿ ರೂ.44.485 ಕೋಟಿ ನೀಡಲಾಗುತ್ತದೆ. ಇದು ಒಟ್ಟು ಬಜೆಟ್ ಗಾತ್ರದ ಶೇಕಡಾ 1.2 ರಷ್ಟಾಗುತ್ತದೆ. 2013-14ರ ಪ್ರಮಾಣದಲ್ಲಿ (ಶೇಕಡಾ 1.9)ಯೇ ಅನುದಾನ ಮತ್ತು ತೆರಿಗೆ ಹಂಚಿಕೆಯ ಹಣವನ್ನು 2024-25ರ ಅವಧಿಯಲ್ಲಿಯೂ ಕರ್ನಾಟಕಕ್ಕೆ ನೀಡಿದ್ದರೆ ಕೇಂದ್ರ ಸರ್ಕಾರದ ನೀಡುವ ಹಣದ ಮೊತ್ತ ರೂ.91,580 ಕೋಟಿಗಳಾಗುತ್ತಿತ್ತು. ಅಂದರೆ ನರೇಂದ್ರ ಮೋದಿ ಸರ್ಕಾರ ಮಾಡಿರುವ ಅನ್ಯಾಯದಿಂದಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕ 31,866 ಕೋಟಿ ರೂಪಾಯಿ ಕಳೆದುಕೊಂಡಿದೆ.

ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುಳ್ಳಿನ ದಾರಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಬರುವ ತೆರಿಗೆ ಹಂಚಿಕೆಯಲ್ಲಿ ವೃದ್ಧಿಯಾಗಿದೆ ಎನ್ನುವ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ ಯುಪಿಎ ಸರ್ಕಾರದ ಕಾಲದಲ್ಲಿ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದ ಪಾಲು ರೂ.81,791 ಕೋಟಿ ಮಾತ್ರ. 2014-24ರ ಅವಧಿಯ ಎನ್‌ಡಿ.ಎ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಪಡೆದಿರುವುದು ರೂ.2.9 ಲಕ್ಷ ಕೋಟಿ.

ಹದಿನಾಲ್ಕನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲು ಶೇ 4.72 ಎಂದು ನಿಗದಿಪಡಿಸಿತ್ತು, ಈಗಿನ 15ನೇ ಹಣಕಾಸು ಆಯೋಗ ಈ ಪಾಲನ್ನು ಕಡಿಮೆಗೊಳಿಸಿ ಶೇ 3.64ಕ್ಕೆ ಇಳಿಸಿತು. ಇದರಿಂದ ಕಳೆದ ಐದು ವರ್ಷಗಳಲ್ಲಿ ತೆರಿಗೆ ಪಾಲಿನಲ್ಲಿ ಅಂದಾಜು ರೂ.62,098 ಕೋಟಿಯನ್ನು ಕರ್ನಾಟಕ ಕಳೆದುಕೊಂಡಿದೆ. ಇದನ್ನು ನಿರ್ಮಲಾ ಸೀತಾರಾಮನ್ ಜಾಣತನದಿಂದ ಮರೆಮಾಚಲು ಪ್ರಯತ್ನಿಸಿದ್ದಾರೆ.

ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿ ರಾಜ್ಯ ಇದೆ. ಇನ್ನು ಜಿಎಸ್‌ಟಿ ಸಂಗ್ರಹದ ಬೆಳೆವಣಿಗೆ ದರವನ್ನು ಗಮನಿಸಿದರೆ ಶೇ.17ರ ಸಾಧನೆಯ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿ ಕರ್ನಾಟಕವಿದೆ. ವಿಪರ್ಯಾಸವೆಂದರೆ ಈ ಪ್ರಮಾಣದಲ್ಲಿ ಜಿಎಸ್‌ಟಿ ಹಣವನ್ನು ಕೇಂದ್ರಕ್ಕೆ ಸಂಗ್ರಹಿಸಿ ನೀಡಿದರೂ ಇದರಿಂದ ರಾಜ್ಯಕ್ಕೆ ಮರಳಿ ದೊರೆಯುತ್ತಿರುವುದು ಶೇ.52 ಪಾಲು ಮಾತ್ರ. ಜಿಎಸ್‌ಟಿಯ ಅವೈಜ್ಞಾನಿಕ ಅನುಷ್ಠಾನದಿಂದಾಗಿ ಕರ್ನಾಟಕವು 2017-18ರಿಂದ 2023-24ರ ವರೆಗೆ ಸುಮಾರು ರೂ. 59,274 ಕೋಟಿ ಹಣವನ್ನು ಕಳೆದುಕೊಂಡಿದೆ.

2023-24ರ ಅವಧಿಯಲ್ಲಿ ಕೇಂದ್ರವು ರಾಜ್ಯದಿಂದ ಕನಿಷ್ಠ ರೂ. 4.30 ಲಕ್ಷ ಕೋಟಿಗೂ ಹೆಚ್ಚು ಸಂಪನ್ಮೂಲವನ್ನು ತೆರಿಗೆ, ಸೆಸ್‌, ಸರ್‌ಚಾರ್ಜ್‌ ಮೂಲಕ ಸಂಗ್ರಹಿಸಿದೆ. ಆದರೆ, ಇದಕ್ಕೆ ಪ್ರತಿಯಾಗಿ ರೂ.50 ರಿಂದ 53 ಸಾವಿರ ಕೋಟಿ ಮಾತ್ರ ಕರ್ನಾಟಕಕ್ಕೆ ನೀಡಿದೆ. ನಾವು ನೂರು ರೂ. ಸಂಗ್ರಹಿಸಿ ಕೊಟ್ಟರೆ ನಮಗೆ ಮರಳಿ ದೊರೆಯುವುದು 12-13 ರೂಪಾಯಿ ಮಾತ್ರ. ಇದರಲ್ಲಿ ತೆರಿಗೆ ಪಾಲು 37,000 ಕೋಟಿ ರೂ. ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನೀಡಿದ ಪಾಲಿನ ಹಣ 13,005 ಕೋಟಿ ರೂ.

ಕಳೆದ ಆರು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಬಜೆಟ್‌ ಸರಿಸುಮಾರು ದುಪ್ಪಟ್ಟಾಗಿದೆ. 2018-19ರಲ್ಲಿ ಕೇಂದ್ರ ಬಜೆಟ್‌ ಗಾತ್ರ ರೂ. 24,42,213 ಕೋಟಿ ಇತ್ತು. ಆಗ ಕೇಂದ್ರದಿಂದ ರಾಜ್ಯಕ್ಕೆ ದೊರೆಯುತ್ತಿದ್ದ ತೆರಿಗೆ ಪಾಲು ರೂ.35,895 ಕೋಟಿ ಹಾಗೂ ರೂ.16,082 ಕೋಟಿ ಅನುದಾನ ಸೇರಿ ಒಟ್ಟು ರೂ.46,288 ಕೋಟಿ ಲಭ್ಯವಾಗಿತ್ತು. ಆದರೆ, 2023-24ರಲ್ಲಿ ಕೇಂದ್ರದ ಬಜೆಟ್‌ ಗಾತ್ರ ರೂ.45,03,097 ಕೋಟಿಗೆ ಏರಿಕೆಯಾಗಿದೆ. ವಿಪರ್ಯಾಸವೆಂದರೆ, ಕರ್ನಾಟಕ್ಕೆ ಕೇಂದ್ರದಿಂದ ತೆರಿಗೆ ಪಾಲು ಹಾಗೂ ಅನುದಾನಗಳೆರಡೂ ಸೇರಿ ಸಿಕ್ಕಿರುವುದು ರೂ.50,257 ಕೋಟಿ ಮಾತ್ರ. ಅಂದರೆ ಐದು ವರ್ಷದ ಅವಧಿಯಲ್ಲಿ ಬಜೆಟ್‌ ದುಪ್ಪಟ್ಟಾದರೂ ರಾಜ್ಯಕ್ಕೆ ದೊರೆಯುತ್ತಿರುವ ಪಾಲಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸಕ್ತ ಬಜೆಟ್‌ ಗಾತ್ರದ ಹೋಲಿಕೆಯಲ್ಲಿ ಕರ್ನಾಟಕಕ್ಕೆ ವಾರ್ಷಿಕ ಕನಿಷ್ಠ ರೂ.1 ಲಕ್ಷ ಕೋಟಿಯಷ್ಟು ಹಣ ತೆರಿಗೆಯ ಪಾಲು ಹಾಗೂ ಅನುದಾನದ ಮುಖೇನ ದೊರೆಯಬೇಕಿತ್ತು, ಆದರೆ ದೊರೆತಿಲ್ಲ.

ಕರ್ನಾಟಕಕ್ಕೆ ಈ ಪರಿಯ ದೊಡ್ಡ ಮಟ್ಟದ ಅನ್ಯಾಯ ಆಗಿರುವುದು ಮನವರಿಕೆಯಾದ ನಂತರವೇ ಹದಿನೈದನೇ ಹಣಕಾಸು ಆಯೋಗ ಕರ್ನಾಟಕಕ್ಕೆ ವಿಶೇಷ ಅನುದಾನದ ರೂಪದಲ್ಲಿ 5,495 ಕೋಟಿ ರೂ. ನೀಡಬೇಕೆಂದು ಶಿಫಾರಸು ಮಾಡಿತ್ತು. ಕನ್ನಡಿಗರ ಜನಪ್ರತಿನಿಧಿಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಈ ಶಿಫಾರಸನ್ನು ನಿರಾಕರಿಸಿರುವ ಕಾರಣ ಆ ದುಡ್ಡು ಕೂಡಾ ಬರಲಿಲ್ಲ.

ಕೇಂದ್ರ ಸರ್ಕಾರದ ಈ ತಾರತಮ್ಯ ನೀತಿ, ಮಲತಾಯಿ ಧೋರಣೆಯಿಂದಾಗಿ ಕರ್ನಾಟಕವು 2017-18ರಿಂದ ಈವರೆಗೆ ತನಗೆ ಸೇರಬೇಕಾದ ನ್ಯಾಯಯುತ ಪಾಲಾದ ರೂ. 1,87,867 ಕೋಟಿ ಹಣದಿಂದ ವಂಚಿತವಾಗಿದೆ. ಅಂದರೆ, ಕರ್ನಾಟಕದ ಪರಿಷ್ಕೃತ ಆಯವ್ಯಯದ ಗಾತ್ರ 3.24 ಲಕ್ಷ ಕೋಟಿಯ ಹೋಲಿಕೆಯಲ್ಲಿ ಅದರ ಅರ್ಧಕ್ಕಿಂತಲೂ ಹೆಚ್ಚು ಹಣ, ನಿಖರವಾಗಿ ಹೇಳಬೇಕೆಂದರೆ ಪ್ರಸಕ್ತ ಸಾಲಿನ ಬಜೆಟ್‌ನ‌ ಶೇ.57ರಷ್ಟು ಗಾತ್ರದ ಹಣ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯಕ್ಕೆ ನಷ್ಟವಾಗಿದೆ.

ಇದಲ್ಲದೆ, ಹದಿನೈದನೇ ಹಣಕಾಸು ಆಯೋಗವು ಬೆಂಗಳೂರಿನ ಫೆರಿಫೆರಲ್‌ ರಿಂಗ್‌ ರಸ್ತೆಗೆ ರೂ.3,000 ಕೋಟಿ ಮತ್ತು ಕೆರೆಗಳು ಸೇರಿದಂತೆ ಬೆಂಗಳೂರು ಜಲಮೂಲ ಅಭಿವೃದ್ಧಿಗೆ ರೂ. 3000 ನೀಡಲು ಶಿಫಾರಸ್ಸು ಮಾಡಿತ್ತು. ಆದರೆ, ಈ ಶಿಫಾರಸ್ಸುಗಳನ್ನು ತಿರಸ್ಕರಿಸಿದ ವಿತ್ತ ಸಚಿವರು ರಾಜ್ಯಕ್ಕೆ ಸುಮಾರು ರೂ.11,495 ಕೋಟಿ ದ್ರೋಹ ಮಾಡಿದ್ದಾರೆ.

ನರೇಂದ್ರ ಮೋದಿಯವರು ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡಿಕೊಂಡು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶದ ವಿರೋಧಪಕ್ಷಗಳ ಸರ್ಕಾರ ಇರುವ ಪ್ರತಿಯೊಂದು ರಾಜ್ಯಗಳಿಗೆ ತೆರಿಗೆ ಮತ್ತು ಅನುದಾನದ ಹಂಚಿಕೆಯಲ್ಲಿ ಅನ್ಯಾಯ ಮಾಡಿದ್ದಾರೆ. ಆದರೆ ದುರಂತವೆಂದರೆ ನಿರ್ಮಲಾ ಸೀತಾರಾಮನ್ ಅವರು ಉಂಡ ಮನೆಗೆ ಎರಡು ಬಗೆದಿದ್ದಾರೆ. ತಮ್ಮನ್ನು ರಾಜ್ಯಸಭೆಗೆ ಆರಿಸಿ ಕಳಿಸಿದ ಕರ್ನಾಟಕಕ್ಕೆ ಅನ್ಯಾಯ ಮಾಡಲು ಹೇಸದ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯದ ಹಣಕಾಸು ವ್ಯವಸ್ಥೆ ಬಗ್ಗೆ ಮಾತನಾಡುವ ಯಾವ ನೈತಿಕ ಅಧಿಕಾರ ಇದೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ