
ಬೆಂಗಳೂರು/ನವದೆಹಲಿ, ಜುಲೈ 10: ಕರ್ನಾಟಕ ಕಾಂಗ್ರೆಸ್ (Congress) ಪಾಳಯದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ದಿನಕ್ಕೊಂದು ಹೇಳಿಕೆಗಳು ಹೊರಬೀಳುತ್ತಿವೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತು ಸಿಎಂ ಸಿದ್ದರಾಮಯ್ಯ (Siddaramaiah) ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಮೈಸೂರು ದಸರಾದಲ್ಲಿ ಈ ಬಾರಿ ಏರ್ ಶೋ ಆಯೋಜನೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದರು. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಇದಲ್ಲದೇ ರಾಜ್ಯದ ಎತ್ತಿನಹೊಳೆ, ಕೃಷ್ಣ, ಮಹದಾಯಿ ಕಳಸ ಬಂಡೂರಿ, ಅಪ್ಪರ್ ಭದ್ರ, ಮೇಕೆದಾಟು ಯೋಜನೆಗಳ ತೊಡಕು ನಿವಾರಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳುವ ಮುನ್ನವೇ, ಡಿಸಿಎಂ ಡಿಕೆಶಿ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರೊಂದಿಗೂ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಇಂದು ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲರನ್ನು ಸಿಎಂ ಮತ್ತು ಡಿಸಿಎಂ ಇಬ್ಬರೂ ಭೇಟಿ ಮಾಡಲಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ರಣದೀಪ್ ಸಿಂಗ್ ಸುರ್ಜೇವಾಲರ ಜೊತೆ ಇಂದು ಸಂಜೆ 6 ಗಂಟೆಗೆ ಸಿಎಂ, ಡಿಸಿಎಂ ಚರ್ಚೆ ನಡೆಸಲಿದ್ದಾರೆ. ಇದರ ನಡುವೆ ರಾಹುಲ್ ಗಾಂಧಿ ಭೇಟಿಗೆ ಸಿಎಂ ಮತ್ತು ಡಿಸಿಎಂ ಮುಂದಾಗಿರುವುದು ಕುತೂಹಲ ಮೂಡಿಸಿದೆ. ಆದರೆ, ಸಿದ್ದರಾಮಯ್ಯ ಮಾತ್ರ, ರಾಹುಲ್ ಗಾಂಧಿ ಭೇಟಿಗೆ ಇನ್ನೂ ಅವಕಾಶ ದೊರೆತಿಲ್ಲ ಎಂದಿದ್ದರೆ, ಸತೀಶ್ ಜಾರಕಿಹೊಳಿ ಪಕ್ಷ ಸಂಘಟನೆಯ ಬಗ್ಗೆ ಚರ್ಚೆಯಾಗಬಹುದು ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಶಾಸಕರೊಂದಿಗೆ ಒನ್ ಟು ಒನ್ ಸಭೆ ನಡೆಸುತ್ತಿದ್ದು, ಇದೇ ವೇಳೆ ಸಚಿವರ ಸಹಕಾರದ ಕೊರತೆಯ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಕೆಲವರು ನಾಯಕತ್ವ ಬದಲಾವಣೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸುರ್ಜೆವಾಲ, ನಾಯಕತ್ವ ಬದಲಾವಣೆ ಬಗ್ಗೆ ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರ ರೀತಿ ನಮ್ಮ ಪಕ್ಷದಲ್ಲಿ ಯಾರನ್ನೂ ಮೂಲೆಗುಂಪು ಮಾಡುವುದಿಲ್ಲ ಎಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಹಲವು ವ್ಯಕ್ತಿಗಳು ವಿಭಿನ್ನ ಅಪೇಕ್ಷೆಗಳನ್ನು ಹೊಂದಿರುತ್ತಾರೆ. ಅನೇಕ ಶಾಸಕರು ಸಚಿವರಾಗುವ ಆಸೆ ಹೊಂದಿದ್ದಾರೆ. ಅವರು ಯಾಕೆ ಆಗಬಾರದು? ಅವರೆಲ್ಲರಿಗೂ ಸಾಮರ್ಥ್ಯವಿದೆ. ಕಾಂಗ್ರೆಸ್ ಕಾರ್ಯಕರ್ತರು ಎಂಎಲ್‌ಸಿ ಆಗಬೇಕೆಂದು ಆಸೆಪಟ್ಟಿದ್ದು, ಯಾಕೆ ಆಗಬಾರದು? ಅವರೆಲ್ಲರಿಗೂ ಸಾಮರ್ಥ್ಯವಿದೆ. ಅವರ ಬೇರೆ ಬೇರೆ ಅಭಿಪ್ರಾಯಗಳನ್ನು ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ಪರಿಗಣಿಸುತ್ತೇವೆ. ಇದು ಕಾಂಗ್ರೆಸ್ ಪಕ್ಷದ ನಿಲುವಾಗಿದೆ. ನಾವು ಒಂದು ಪಕ್ಷವಾಗಿ ಎಲ್ಲ ರೀತಿಯ ಅಭಿಪ್ರಾಯಗಳನ್ನು ಆಲಿಸಿ, ಒಮ್ಮತದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ದೆಹಲಿ ಪ್ರಯಾಣಕ್ಕೆ ಬಿಜೆಪಿ ನಾಯಕರು ರಾಜಕೀಯ ರೂಪ ಕೊಟ್ಟಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿ, ಸಿದ್ದರಾಮಯ್ಯಗೆ ಬೋರ್ಡಿಂಗ್ ಪಾಸ್ ರೆಡಿಯಿದೆ ಎಂದಿದ್ದರೆ, ಡಿಕೆ ಶಿವಕುಮಾರ್ ಸಿಎಂ ಆಗಲ್ಲ ಎಂದು ಶ್ರೀರಾಮು ಹೇಳಿದ್ದಾರೆ.
ಇದನ್ನೂ ಓದಿ: ಸಂಪುಟ ವಿಸ್ತರಣೆ ಚರ್ಚೆಗಾಗಿ ದೆಹಲಿಗೆ ಬಂದಿಲ್ಲ! ಮತ್ಯಾಕೆ? ವಿವರಿಸಿದ ಡಿಸಿಎಂ ಡಿಕೆ ಶಿವಕುಮಾರ್
ಒಟ್ಟಿನಲ್ಲಿ ರಾಜ್ಯಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ಜೋರಾಗುತ್ತಿದ್ದು, ನಿಜಕ್ಕೂ ಸೆಪ್ಟೆಂಬರ್ ಕ್ರಾಂತಿ ನಡೆಯುತ್ತದೆಯಾ ಎಂಬ ಪ್ರಶ್ನೆ ಮೂಡಿದೆ.