ಜ್ವರ, ನೆಗಡಿ ಇರುವ ವಿದ್ಯಾರ್ಥಿಗಳಿಗೆ ರಜೆ: ಕೋವಿಡ್ ಬಗ್ಗೆ ಸಭೆಯಲ್ಲಿ ಏನೆಲ್ಲಾ ಆಯ್ತು? ಇಲ್ಲಿದೆ ವಿವರ

5 ವರ್ಷಗಳ ಹಿಂದೆ ಪ್ರಪಂಚದಾದ್ಯಂತ ಲಕ್ಷಾಂತರ ಜೀವಗಳನ್ನ ಬಲಿ ಪಡೆದಿದ್ದ ರಣರಕ್ಕಸ ವೈರಸ್​​ ಈಗ ಮರುಜನ್ಮ ಪಡೆದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಕರ್ನಾಟಕ, ಕೇರಳದವರೆಗೂ ಮತ್ತೆ ಕೊರೊನಾ ತನ್ನ ರಣಕೇಕೆಯನ್ನ ಶುರು ಮಾಡಿದೆ. ಇನ್ನು ಕರ್ನಾಟಕದಲ್ಲಿ ಕೊವಿಡ್ ನಿಯಂತ್ರಣ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು ಎನ್ನುವ ವಿವರ ಇಲ್ಲಿದೆ.

ಜ್ವರ, ನೆಗಡಿ ಇರುವ ವಿದ್ಯಾರ್ಥಿಗಳಿಗೆ ರಜೆ: ಕೋವಿಡ್ ಬಗ್ಗೆ ಸಭೆಯಲ್ಲಿ ಏನೆಲ್ಲಾ ಆಯ್ತು? ಇಲ್ಲಿದೆ ವಿವರ
Siddaramaiah
Edited By:

Updated on: May 26, 2025 | 6:55 PM

ಬೆಂಗಳೂರು, (ಮೇ 26): ಕರ್ನಾಟಕದಲ್ಲಿ ಕೊವಿಡ್ (Covid) ನಿಯಂತ್ರಣ ಸಂಬಂಧ ಇಂದು (ಮೇ 26) ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ನೇತೃತ್ವದಲ್ಲಿ ನಡೆ ಸಭೆ ಅಂತ್ಯವಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಎಲ್ಲ ಸಿದ್ಧತೆಗಳನ್ನ ಮಾಡಿಕೊಳ್ಳಿ. ಕಳೆದ ಬಾರಿ ಆದಂತೆ ಸಮಸ್ಯೆ ಆಗಬಾರದು. ಕೊವಿಡ್​ ಸಹಾಯವಾಣಿ​​ ತೆರೆಯಿರಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಅಲ್ಲದೇ ಜ್ವರ, ನೆಗಡಿ ಇರುವ ಮಕ್ಕಳಿಗೆ ಶಾಲೆಗಳು ರಜೆ ನೀಡುವಂತೆ ಸೂಚಿಸಿದ್ದಾರೆ. ಪ್ರತಿ ವಾರ ಕೊವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆ.

ಇದನ್ನೂ ಓದಿ: ಶಾಲೆ ಪುನಾರಂಭದಲ್ಲೇಕೊರೊನಾ ಕಂಟಕ: ಆರೋಗ್ಯ ಇಲಾಖೆ ಅಲರ್ಟ್

ಕೋವಿಡ್ ಪರಿಸ್ಥಿತಿ ಅವಲೋಕಿಸಲು ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ಬಳಿಕ ಪರಿಸ್ಥಿತಿ ನಿರ್ವಹಣೆಯ ಸಂಬಂಧ ಈ ಕೆಳಗಿನ ಸೂಚನೆಗಳನ್ನು ನೀಡಿದ್ದಾರೆ.

ಇದನ್ನೂ ಓದಿ
ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ: ಇನ್ಮುಂದೆ ಕೋವಿಡ್ ಟೆಸ್ಟ್ ಕಡ್ಡಾಯ
ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋವಿಡ್: ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
ದೆಹಲಿಯಲ್ಲಿ ಕೊವಿಡ್ ಹೆಚ್ಚಳ; ಆಸ್ಪತ್ರೆಯಲ್ಲಿ ಸಜ್ಜಾಗಿರಲು ಸರ್ಕಾರ ಆದೇಶ
ಕರ್ನಾಟಕದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ವೈರಸ್ ಸೋಂಕು
  • ಸದ್ಯಕ್ಕೆ ಕೊರೊನಾ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಮುಂಚಿತವಾಗಿಯೇ ಮುಂದೆ ಸಂಭವಿಸಬಹುದಾದ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯವಾದ ಎಲ್ಲಾ ಸವಲತ್ತು, ಸಲಕರಣೆಗಳನ್ನು ಸಜ್ಜುಗೊಳಿಸಿಟ್ಟುಕೊಳ್ಳಬೇಕು.
  •  ಸದ್ಯಕ್ಕೆ ಗಂಭೀರ ಪರಿಸ್ಥಿತಿಗೆ ತಲುಪಿಲ್ಲವಾದರೂ ವೆಂಟಿಲೇಟರ್, ಆಕ್ಸಿಜನ್, ಔಷಧ ಸೇರಿ ಇತ್ಯಾದಿ ಅಗತ್ಯಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು.
  •  ವಯಸ್ಸಾದವರು, ಗರ್ಭಿಣಿಯರು, ಹೃದಯ ಸಂಬಂಧಿ, ಶ್ವಾಸಕೋಶ ಸಮಸ್ಯೆ ಇರುವವರು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವುದು ಒಳ್ಳೆಯದು. ಈ ಬಗ್ಗೆ ಅರಿವು ಮೂಡಿಸಬೇಕು.
  •  ಪ್ರತೀ ವಾರ ಅಥವಾ ಅಗತ್ಯ ಬಿದ್ದರೆ ಮೂರು ದಿನಕ್ಕೊಮ್ಮೆ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಾ ತೀವ್ರ ನಿಗಾ ಇಡಬೇಕು.
  •  ಗರ್ಭಿಣಿಯರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ ಅವರನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸುವುದನ್ನು ನಿಲ್ಲಿಸಿ, ಎಲ್ಲಾ ಆಸ್ಪತ್ರೆಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಿಕೊಂಡಿರಬೇಕು.
  •  ಶೀತ, ನೆಗಡಿ, ಜ್ವರ ಇರುವ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸದಿರುವುದು ಉತ್ತಮ. ಶಾಲೆಗಳೂ ಈ ಬಗ್ಗೆ ಗಮನ ಹರಿಸಿ ಶೀತ, ನೆಗಡಿ ಇರುವ ಮಕ್ಕಳನ್ನು ವಾಪಾಸ್ ಪೋಷಕರ ಮೂಲಕ ಮನೆಗೆ ಕಳುಹಿಸಬೇಕು.
  •  ಎಂತಹುದೇ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿರಬೇಕು.
  •  ಕಳೆದ ಜನವರಿಯಿಂದಲೂ ಕೊರೊನಾ ಪ್ರಕರಣಗಳು ಅಲ್ಲಲ್ಲಿ ಒಂದೊ – ಎರಡು ಕಾಣಬರುತ್ತಿದ್ದು, ಮೇ ತಿಂಗಳಲ್ಲಿ ಉಲ್ಬಣವಾಗಿದ್ದು ಮೇ ತಿಂಗಳ ನಾಲ್ಕನೇ ವಾರಕ್ಕೆ 62 ಪ್ರಕರಣಗಳು ವರದಿಯಾಗಿವೆ. ಆದರೆ ಗಂಭೀರ ಎನ್ನುವಂತಹ ಪ್ರಕರಣಗಳ ಸಂಖ್ಯೆ ಒಂದು ಮಾತ್ರ ಇದೆ.
  •  ಎಸ್‌ಎಆರ್‌ಐ ಪ್ರಕರಣಗಳಲ್ಲಿ ತಪಾಸಣೆ ಕಾರ್ಯ ಈಗಾಗಲೇ ನಡೆಯುತ್ತಿದೆ. ನೆರೆಯ ರಾಜ್ಯಗಳಾದ ಕೇರಳದಲ್ಲಿ 95, ತಮಿಳು ನಾಡಿನಲ್ಲಿ 66, ಮಹಾರಾಷ್ಟ್ರ ಗಳಲ್ಲಿ 56 ಪ್ರಕರಣಗಳು ವರದಿಯಾಗಿವೆ.
  •  ರಾಜ್ಯದಲ್ಲಿ ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.
  •  ಬಾಣಂತಿ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
  •  ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊರೊನಾ ಸಹಾಯವಾಣಿ ಪ್ರಾರಂಭಿಸಬೇಕು.
  •  ಮುಂದಿನ ದಿನಗಳಲ್ಲಿ ಅವಶ್ಯಕತೆ ಕಂಡು ಬಂದರೆ ವಿಮಾನ ನಿಲ್ದಾಣಗಳಲ್ಲಿ ಹೊರಗಡೆಯಿಂದ ಬರುವ ಪ್ರಯಾಣಿಕರಿಗೆ ತಪಾಸಣಾ ಘಟಕಗಳನ್ನು ಪ್ರಾರಂಭಿಸಬೇಕು.
  •  ಕೊರೊನಾ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು. ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಆಸ್ಪತ್ರೆಗಳೂ ಸರ್ವ ಸನ್ನದ್ಧವಾಗಿ ಇರಬೇಕು.
  •  ಆರೋಗ್ಯ ಇಲಾಖೆ ಸಿಬ್ಬಂದಿ ರಜಾ ಹಾಕಿ ತೆರಳದೆ ಕೇಂದ್ರ ಸ್ಥಾನದಲ್ಲಿಯೇ ಇದ್ದು ಕಾರ್ಯ ನಿರ್ವಹಿಸಬೇಕು.

ಆರೋಗ್ಯ ಸಚಿವರು ಹೇಳಿದ್ದೇನು?

ಸಭೆ ಬಳಿಕ ಸದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೇಂದ್ರದ ಅಭಿಪ್ರಾಯ ಪಡೆದು ವ್ಯಾಕ್ಸಿನ್​ ನೀಡಲಾಗುತ್ತದೆ. ಕೊವಿಡ್​ ಲಕ್ಷಣ ಇರುವ ಮಕ್ಕಳಿಗೆ ರಜೆ ನೀಡಲು ಸೂಚನೆ ನೀಡಲಾಗಿದೆ. ಶಾಲೆಯ ಆಡಳಿತ ಮಂಡಳಿ ಕೂಡ ಗಮನ ಹರಿಸಬೇಕು. ಟೆಸ್ಟಿಂಗ್​ ವಿಚಾರದಲ್ಲಿ ಹಳೆಯೆ ಪದ್ಧತಿ ಅನುಸರಿಸುತ್ತೇವೆ. ಅಗತ್ಯವಿರುವ ಎಲ್ಲ ಕ್ರಮಗಳನ್ನ ನಾವು ತೆಗೆದುಕೊಳ್ಳುತ್ತೇವೆ. ವ್ಯಾಕ್ಸಿನ್​ ಕೊಡುವ ಬಗ್ಗೆ ಸಿಎಂ ವರದಿ ನೀಡಿ ಎಂದಿದ್ದು, ಕೇಂದ್ರದ ಅಭಿಪ್ರಾಯ ಪಡೆದು ವರದಿ ನೀಡಲು ಹೇಳಿದ್ದಾರೆ.ಅಲ್ಲದೇ ವೈದ್ಯರು, ಸಿಬ್ಬಂದಿಗೂ ರಜೆ ಮೇಲೆ ಹೋಗದಂತೆ ಸೂಚಿಸಲಾಗಿದೆ ಎಂದು ಹೇಳಿದರು.

Published On - 6:44 pm, Mon, 26 May 25