ಬೆಂಗಳೂರು, ಮಾ.1: ಹಿಂದುಳಿದ ವರ್ಗಗಳ ಆಯೋಗವು ಜಾತಿಗಣತಿ ಸಮೀಕ್ಷೆ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ವಿವಿಧ ಜಾತಿ, ರಾಜಕೀಯ ನಾಯಕರು, ಸ್ವಪಕ್ಷದ ಶಾಸಕರ ವಿರೋಧದ ನಡುವೆಯೂ ನಿನ್ನೆ ವರದಿ ಸ್ವೀಕರಿಸಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವರದಿಯನ್ನು ಬಹಿರಂಗಪಡಿಸಿಲ್ಲ. ಆದರೆ, ವರದಿ ಸ್ವೀಕಾರ ಮಾಡುವ ಮೂಲಕ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಅಲ್ಲಾಡಿಸುತ್ತಿರುವ ಡಿಕೆ ಶಿವಕುಮಾರ್, ಶಾಮನೂರು ಶಿವಶಂಕರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಬಿಜೆಪಿ (BJP) ಎಂಎಲ್ಸಿ ಎಎಸ್ ಪಾಟೀಲ್ ನಡಹಳ್ಳಿ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಗಣತಿ ವರದಿ ಸ್ವೀಕರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಕುರ್ಚಿಗೆ ಕೈಹಾಕಿದರೆ ಹುಷಾರ್ ಎಂಬ ಸಂದೇಶವನ್ನು ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಯಾರು ಸಿಎಂ ಕುರ್ಚಿ ಅಲ್ಲಾಡಿಸುತ್ತಿದ್ದಾರೋ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಅದನ್ನ ಬಿಟ್ಟು ಹಿಂದುಳಿದವರಿಗೆ ನ್ಯಾಯ ಕೊಡಬೇಕು ಎಂಬ ಯಾವುದೇ ಉದ್ದೇಶ ಇವರಲ್ಲಿ ಇಲ್ಲ ಎಂದರು.
ಇದನ್ನೂ ಓದಿ: ಜಾತಿ ಗಣತಿ ವರದಿಗೆ ಬಾರಿ ಅಪಸ್ವರ: ಸಿದ್ದರಾಮಯ್ಯ ನಡೆಗೆ ಸ್ವಪಕ್ಷದ ಕೆಲ ನಾಯಕರು ಅಸಮಾಧಾನ
ಸಮಾಜಿಕವಾಗಿ ಎಲ್ಲರಿಗೂ ಮನ್ನಣೆ ನೀಡಬೇಕು ಎಂಬುದು ನಮ್ಮ ನಿಲುವಾಗಿದೆ. ಹಿಂದುಳಿದ ಆಯೋಗವನ್ನು ಗುರುತಿಸಿ ಸಾಂವಿಧಾನಿಕ ಮನ್ನಣೆ ಕೊಟ್ಟಿದ್ದೇ ನಾವು ಎಂದರು. ನಿಮ್ಮ (ಕಾಂಗ್ರೆಸ್) ಮೂರು ಬಾಗಿಲುಗಳನ್ನ ಮುಚ್ಚಿಕೊಳ್ಳಿ, ಡಿಕೆ ಶಿವಕುಮಾರ್ ಬಾಗಿಲು, ಶಾಮನೂರು ಬಾಗಿಲು, ಸಿದ್ದರಾಮಯ್ಯ ಬಾಗಿಲು ಮುಚ್ಚಿಕೊಳ್ಳಿ ಎಂದು ಸರ್ಕಾರಕ್ಕೆ ಸಲಹೆ ನೀಡುತ್ತೇನೆ ಎಂದರು.
ತೀವ್ರ ವಿರೋಧದ ನಡುವೆಯೂ ಜಾತಿಗಣತಿ ವರದಿಯನ್ನು ನಿನ್ನೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ನಡೆಗೆ ಸ್ವಪಕ್ಷದ ಶಾಮನೂರು ಶಿವಶಂಕರಪ್ಪ, ವಿನಯ್ ಕುಲಕರ್ಣಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾತಿ ಗಣತಿ ಜಾರಿ ಬಗ್ಗೆ ಯಾವಾಗ ಚರ್ಚೆ ಆರಂಭವಾಯಿತೋ ಅಂದಿನಿಂದ ಜಾತಿ ಮುಖಂಡರು ಮಾತ್ರವಲ್ಲದೆ, ರಾಜಕೀಯ ನಾಯಕರು ಕೂಡ ಪರ-ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದರಲ್ಲೂ ಕೆಲವು ಕಾಂಗ್ರೆಸ್ ನಾಯಕರು ಪರವಾಗಿ ಮಾತನಾಡಿದರೆ, ಇನ್ನೂ ಕೆಲವರು ವರದಿ ಜಾರಿ ಮಾಡದಂತೆ ಒತ್ತಾಯಿಸಿದ್ದರು. ಈ ಸಾಲಿನಲ್ಲಿ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಒಬ್ಬರು ಎಂಬದು ಗಮನಿಸಬೇಕಾದ ಸಂಗತಿ.
ಜಾತಿಗಣತಿ ವರದಿ ಬಿಡುಗಡೆ ವಿರೋಧಿಸಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಒಕ್ಕಲಿಗರ ಸಂಘವು ಮನವಿ ಪತ್ರ ಸಲ್ಲಿಸಿದ್ದರು. ಈ ಪತ್ರದಲ್ಲಿ ಡಿಕೆ ಶಿವಕುಮಾರ್ ಕೂಡ ಸಹಿ ಹಾಕಿದ್ದರು. ಇವರಲ್ಲದೆ, ವರದಿ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ, ನಮ್ಮ ಸಮುದಾಯದ ಮನೆ ಮನೆಗಳಿಗೆ ಹೋಗಿ ಸಮೀಕ್ಷೆ ನಡೆಸಿಲ್ಲ. ಮನೆಯಲ್ಲೇ ಕುಳಿತು ವರದಿ ಸಿದ್ಧಪಡಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದರು. ನಿನ್ನೆಯಷ್ಟೇ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದ ಶಾಮನೂರು ಇಂದು ಮತ್ತೆ ಗುಡುಗಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:10 pm, Fri, 1 March 24