ಜಾತಿ ಗಣತಿ ವರದಿಗೆ ಬಾರಿ ಅಪಸ್ವರ: ಸಿದ್ದರಾಮಯ್ಯ ನಡೆಗೆ ಸ್ವಪಕ್ಷದ ಕೆಲ ನಾಯಕರು ಅಸಮಾಧಾನ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆ ಇಂದು ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ್ದಾರೆ. ಇತ್ತ ಜಾತಿ ಗಣತಿ ವರದಿ ಸಲ್ಲಿಕೆ ಆಗುತ್ತಿದ್ದಂತೆ ಭಾರಿ ಅಪಸ್ವರ ಕೇಳಿಬಂದಿದ್ದು, ಸಿದ್ದರಾಮಯ್ಯ ನಡೆಗೆ ಸ್ವಪಕ್ಷದ ಶಾಸಕ ವಿನಯ್ ಕುಲಕರ್ಣಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 29: ತೀವ್ರ ವಿರೋಧದ ನಡುವೆಯೂ ಜಾತಿಗಣತಿ ವರದಿ (Caste Census Report) ಇಂದು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಜಾತಿಗಣತಿ ವರದಿ ಸಲ್ಲಿಸಿದ್ದಾರೆ. ಇತ್ತ ಜಾತಿ ಗಣತಿ ವರದಿ ಸಲ್ಲಿಕೆ ಆಗುತ್ತಿದ್ದಂತೆ ಭಾರಿ ಅಪಸ್ವರ ಕೇಳಿಬಂದಿದ್ದು, ಸಿದ್ದರಾಮಯ್ಯ ನಡೆಗೆ ಸ್ವಪಕ್ಷದ ಶಾಸಕ ವಿನಯ್ ಕುಲಕರ್ಣಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಯಕ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಈ ಬಗ್ಗೆ ಮತ್ತೆ ಕಿಡಿಕಾರಿದ್ದಾರೆ.
ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಮನೆ ಮನೆಗೆ ಭೇಟಿ ನೀಡದೆ ಅವೈಜ್ಞಾನಿಕವಾಗಿ ತಯಾರಿಸಲಾದ ವರದಿಯನ್ನು ಸಮಾಜ ಒಪ್ಪುವುದಿಲ್ಲ. ಜಾತಿ ಗಣತಿ ವರದಿ ವಿರೋಧಿಸಿ ಈಗಾಗಲೇ ಎರಡು ಬಾರಿ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಜಾತಿಗಣತಿಯಲ್ಲಿ ಕೆಲವು ಗೊಂದಲಗಳಿವೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ರಾಮನಗರ ಜಿಲ್ಲೆ ಮಾಗಡಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರ ಜಾತಿಗಣತಿ ವರದಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಎಲ್ಲಾ ಸಮುದಾಯಕ್ಕೂ ಸಮಾನವಾದ ಅವಕಾಶಗಳು ಸಿಗಬೇಕು. ಸದ್ಯ ಸ್ವೀಕರಿಸಲಾದ ಜಾತಿ ಗಣತಿ ವರದಿಯಲ್ಲಿ ಕೆಲ ದೋಷಗಳಿವೆ. 4 ಜನರ ಮನೆಗೆ ಹೋಗಿದ್ದರೆ, ಕೆಲವರ ಮನೆಗೆ ಸಮೀಕ್ಷೆಗೆ ಹೋಗಿಲ್ಲ. ನಮ್ಮ ಸಂಬಂಧಿಕರ ಹಲವು ಮನೆಗಳಿಗೆ ಹೋಗಿ ಮಾಹಿತಿ ಸಂಗ್ರಹಿಸಿಲ್ಲ. ಹೀಗಾಗಿ ಜಾತಿಗಣತಿಯಲ್ಲಿ ಕೆಲವು ಗೊಂದಲಗಳಿವೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಜಾತಿಗಣತಿ ವರದಿಯಲ್ಲಿ ಜನಸಂಖ್ಯೆ ಬಹಿರಂಗ: ಎಸ್ಸಿ ಫಸ್ಟ್, ಕುರುಬ ಜನಾಂಗವೇ ಅತಿ ಹಿಂದುಳಿದ ವರ್ಗ!
ವೀರಶೈವ ಲಿಂಗಾಯತ ಸಮುದಾಯದಲ್ಲಿ ಅನೇಕ ಉಪಪಂಗಡಗಳಿವೆ. 103 ಉಪ ಪಂಗಡಗಳಿರುವುದರಿಂದ ಅಧ್ಯಯನ ಮಾಡಬೇಕು. ವೈಜ್ಞಾನಿಕ ಸಮೀಕ್ಷೆ ನಡೆಸಿ ನಂತರ ಸ್ವೀಕರಿಸಬೇಕಿತ್ತು. ಇದರಲ್ಲಿ ನಾವು ರಾಜಕೀಯ ಮಾಡುವುದಿಲ್ಲ ಎಂದಿದ್ದಾರೆ.
ಜಾತಿಗಣತಿ ವರದಿ ಇನ್ನೂ ಅನುಷ್ಠಾನವಾಗಿಲ್ಲ ಮುಂದೆ ನೋಡೋಣ ಎಂದ ವಿನಯ್ ಕುಲಕರ್ಣಿ
ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮಾತನಾಡಿ, ಜಾತಿಗಣತಿ ವರದಿ ವೈಜ್ಞಾನಿಕವಾಗಿ ಮಾಡಬೇಕೆಂಬುದು ನಮ್ಮ ಬೇಡಿಕೆ. ಈಗಾಗಲೇ ಸಿಎಂ ಸಿದ್ದರಾಮಯ್ಯಗೂ ನಾವು ಮನವಿ ಮಾಡಿದ್ದೇವೆ. ವೀರಶೈವ ಮಹಾಸಭಾ ಕೂಡ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದೆ. ಸಮುದಾಯದ ಉಪ ಪಂಗಡಗಳನ್ನು ಸೇರಿಸಿ ಎಂಬುದು ನಮ್ಮ ವಾದ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಾತಿಗಣತಿ ವರದಿ ಸ್ವೀಕಾರ: ಈ ಬಗ್ಗೆ ತುಮಕೂರು ಸಿದ್ಧಗಂಗಾಶ್ರೀ ಹೇಳಿದ್ದಿಷ್ಟು
ಮಡಿವಾಳ, ಕುಂಬಾರರು ಸಹ ಲಿಂಗಾಯತ ಸಮುದಾಯದಲ್ಲಿದ್ದರು. ಮೀಸಲಾತಿ ವಿಚಾರದಲ್ಲಿ ಮಡಿವಾಳ, ಕುಂಬಾರರು ಹೊರಬಂದಿದ್ದಾರೆ. ಅವರನ್ನೂ ಸೇರಿಸಿ ಅನ್ನೋದು ನಮ್ಮ ಬೇಡಿಕೆ. ಜಾತಿಗಣತಿ ವರದಿ ಇನ್ನೂ ಅನುಷ್ಠಾನವಾಗಿಲ್ಲ ಮುಂದೆ ನೋಡೋಣ ಎಂದರು.
ಶಾಸಕ ವಿಜಯನಂದ ಕಾಶಪ್ಪ ವರದಿ ಸಲ್ಲಿಕೆಗೆ ಆಕ್ಷೇಪ
ಬೆಂಗಳೂರಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರತಿಕ್ರಿಯಿಸಿದ್ದು, ಕಾಂತರಾಜು ವರದಿ ಬಗ್ಗೆ ನನಗೆ ಸಮಾಧಾನ ಇಲ್ಲ. ಕಾಂತರಾಜು ವರದಿ ಅವೈಜ್ಞಾನಿಕ ವರದಿಯಾಗಿದೆ. ನಾವು ಸಿಎಂ ಸಿದ್ದರಾಮಯ್ಯಗೆ ಮನವರಿಕೆ ಮಾಡಿಕೊಡುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಅಂಕಿ ಅಂಶ ಸುಳ್ಳು ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.