ಪಕ್ಷಾಂತರಗಳು ಇರುತ್ತವೆ, ರಾಜಕೀಯ ಪಕ್ಷಗಳು ಒಡೆಯುತ್ತವೆ, ಆದ್ರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ: ಕೋಡಿಶ್ರೀ ಮತ್ತೊಂದು ಭವಿಷ್ಯ
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಬಾರಿ ಅಧಿಕಾರಿದ ಚುಕ್ಕಾಣಿ ಹಿಡಿಯಲೇಬೇಕೆಂದು ಮತಬೇಟೆಗೆ ಇಳಿದಿವೆ. ಇನ್ನು ಈ ಬಾರಿ ಚುನಾವಣೆಯಲ್ಲಿ ಯಾವ ಪಕ್ಷವೂ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಇದರ ಮಧ್ಯೆ ಕೋಡಿಶ್ರೀ ರಾಜ್ಯ ರಾಜಕಾರಣದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆ: ರಾಜಕೀಯ ಅಸ್ಥಿರತೆ ಇದೆ. ಚುನಾವಣೆವರೆಗೂ ಪಕ್ಷಾಂತರಗಳು ಇರುತ್ತವೆ. ಪಕ್ಷಗಳು ಕೂಡಿ ಹೋಗುವುದು ಕಷ್ಟ. ಚುನಾವಣೆವರೆಗೂ ಏನು ಹೇಳುವುದಕ್ಕೆ ಆಗುವುದಿಲ್ಲ. ಎಲ್ಲ ಡಿವೈಡ್ ಆಗುವ ಲಕ್ಷಣ ಇದೆ. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಗಳು ಭವಿಷ್ಯ ನುಡಿದಿದ್ದಾರೆ (kodi mutt seer another predictions).
ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಇಂದು ಮಾತನಾಡಿರುವ ಕೋಡಿ ಶ್ರೀ, ಯುಗಾದಿ ನಂತರ ಪ್ರಕೃತಿ ವಿಕೋಪ ಆಗುತ್ತದೆ. ಆಗುವುದಿಲ್ಲ ಎಂದು ಹೇಳುವುದಿಲ್ಲ. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ. ಯಾರೇ ಆಗಲಿ ತಪ್ಪು ಇರಲಿ ಸರಿ ಇರಲಿ. ಬಿತ್ತಿದ್ದೆ ಬೆಳೆಯುವುದು. ನಾವು ಏನ್ ಬಿತ್ತುತ್ತೇವೆ ಅದೆ ಬೆಳೆಯುತ್ತದೆ. ಮಾಡಬಾರದು ಮಾಡಿದರೆ ಆಗಬಾರದ್ದು ಆಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದೆ. ಚುನಾವಣೆವರೆಗೂ ಪಕ್ಷಾಂತರಗಳು ಇರುತ್ತವೆ. ರಾಜಕೀಯ ಪಕ್ಷಗಳು ಒಡೆಯುತ್ತವೆ. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. ಮುಂದೆ ಎಷ್ಟು ಸುಖವಿದೆ ಅಷ್ಟೇ ಕಷ್ಟವಿದೆ. ಒಲೆ ಹತ್ತಿ ಉರಿದರೆ ನಿಂತುಕೊಳ್ಳಬಹುದು. ಧರೆ ಹೊತ್ತಿ ಉರಿದರೆ ನಿಲ್ಲೋಕಾಗೋದಿಲ್ಲ. ನಾನು ಹೇಳಿದ ಮರುದಿನವೇ ಪ್ಲೈಟ್ ಅಪಘಾತವಾಗಿ 50 ಜನ ಸತ್ತರು. ಯುಗಾದಿ ಬಂತರ ಎಲ್ಲ ಡಿಟೇಲ್ ಆಗಿ ಹೇಳುತ್ತೇನೆ ಎಂದರು.
ಈ ಹಿಂದೆಯೂ ಇದೇ ಹೇಳಿದ್ದ ಶ್ರೀಗಳು
ಹೌದು…ಕಳೆದ ತಿಂಗಳು ಜನವರಿಯಲ್ಲಿ ಹೊಸಪೇಟೆಯಲ್ಲಿ ಮಾತನಾಡಿದ್ದ ಕೋಡಿಶ್ರೀ, ಒಲೆ ಹೊತ್ತಿ ಉರಿದರೆ ನಿಲ್ಲಬಹುದು, ಧರೆ ಹೊತ್ತಿ ಉರಿದರೆ ನಿಲ್ಲದು ಎಂದಿದ್ದಾರೆ. ಇದೇ ವರ್ಷ 2023ಕ್ಕೆ ಜಾಗತಿಕ ಮಟ್ಟದಲ್ಲಿ ಈ ರೀತಿಯ ಸಮಸ್ಯೆ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಸಂಕ್ರಾಂತಿ ಹಬ್ಬದ ದಿನವೇ ನೇಪಾಳದ ಪೋಖರಾ ಪ್ರದೇಶದಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿತ್ತು. ಏರ್‌ಲೈನ್ಸ್‌ನ ATR 72 ವಿಮಾನವು ಪೋಖರಾದಲ್ಲಿ ಪತನಗೊಂಡು ವಿಮಾನದಲ್ಲಿ 72 ಪ್ರಯಾಣಿಕರು ಸಾವನ್ನಪ್ಪಿದ್ದರು.