ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಹೇಗಿರುತ್ತೆ SIT ತನಿಖೆ?

ಸರ್ಕಾರ ಸಿಡಿ ಪ್ರಹಸನಕ್ಕೆ ತಾರ್ಕಿಕ ಅಂತ್ಯವಾಡಲು ಎಸ್​ಐಟಿಗೆ ವಹಿಸಿದೆ. ಎಸ್​ಐಟಿ ಹೇಗೆಲ್ಲ ವಿಚಾರಣೆ ನಡೆಸಲಿದೆ. ವಿಚಾರಣೆ ನಡೆಸೋ ರೀತಿ ಹೇಗಿರುತ್ತೆ, ಅನ್ನೋದು ಕುತೂಹಲ ಕೆರಳಿಸಿದೆ. ಈ ಮಧ್ಯೆ ಸಿಬಿಐ ತನಿಖೆಯೇ ಆಗ್ಬೇಕು ಕೂಗು ಕೂಡ ಕೇಳಿಬಂದಿತ್ತು. ಆದ್ರೆ ಇದ್ದಕ್ಕಿಂದಂತೆ ಸರ್ಕಾರ ಎಸ್ಐಟಿಗೆ ವಹಿಸ್ತಿದ್ದಂತೆ ಈ ಕೂಗು ಕೂಡ ತಣ್ಣಗಾಗಿದೆ.? ಈ ಕುರಿತ ಡಿಟೇಲ್ಸ್ ಇಲ್ಲಿದೆ ಓದಿ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಹೇಗಿರುತ್ತೆ SIT ತನಿಖೆ?
ರಮೇಶ್ ಜಾರಕಿಹೊಳಿ
Follow us
ಆಯೇಷಾ ಬಾನು
|

Updated on: Mar 12, 2021 | 8:05 AM

ಸಿಬಿಐ ತನಿಖೆಯೇ ಆಗ್ಬೇಕು.. ವಿದೇಶದಲ್ಲಿ ಜಾಲಾಡ್ಬೇಕು.. ಸಣ್ಣ ಪುಟ್ಟ ತನಿಖೆಯಾದ್ರೆ ಸತ್ಯ ಗೊತ್ತಾಗಲ್ಲ. ಹಾಗೆ ಹೀಗೆ ಅಂತೆಲ್ಲ ರೊಚ್ಚಿಗೆದ್ದಿದ್ದ ಸಾಹುಕಾರ್ ಆ್ಯಂಡ್ ಟೀಮ್ ಯಾಕೋ ಬಾಲ ಮುದುರಿಕೊಂಡಿದೆ. ಸರ್ಕಾರ ಹೇಳಿದ್ದನ್ನ ಒಪ್ಪಿಕೊಂಡು ಸುಮ್ಮನಾದಂತೆ ಕಾಣ್ತಿದೆ. ಮಾಧ್ಯಮಗಳ ಮುಂದೆ ಸಿಬಿಐ.. ಸಿಬಿಐ ಅಂತಿದ್ದವರು, ಸರ್ಕಾರದ ಮುಂದೆ ಸೈಲೆಂಟ್ ಆದ್ರಾ ಅನ್ನೋ ಪ್ರಶ್ನೆ ಮೂಡಿದೆ.

ಸಿಬಿಐ ತನಿಖೆ ಕೇಳಿದ್ದವರು ಎಸ್ಐಟಿಗೆ ತೃಪ್ತರಾದ್ರಾ? ರಾಜ್ಯ ಸರ್ಕಾರವೇನೋ ಎಸ್ಐಟಿ ತನಿಖೆ ಮಾಡಿಸ್ತೀವಿ. ನಕಲಿ ಸಿಡಿನಾ? ಷಡ್ಯಂತ್ರನಾ ಅನ್ನೋ ಬಗ್ಗೆ ಸತ್ಯಾಸತ್ಯತೆ ಹೊರಗೇಳೀತಿವಿ ಅಂತಿದೆ. ಆದ್ರೆ, ಸಿಡಿ ಬ್ಲಾಸ್ಟ್ ಆದಾಗ ರೊಚ್ಚಿಗೆದ್ದಿದ್ದ ಜಾರಕಿಹೊಳಿ ಬ್ರದರ್ಸ್ ಅದ್ಯಾಕೋ ಸೈಲೆಂಟ್ ಆಗಿದ್ದಾರೆ. ಸಿಡಿ ತನಿಖೆ ಸಿಬಿಐನಿಂದ್ಲೇ ಆಗ್ಬೇಕು. ಸಿಡಿ ಹಿಂದಿರೋ ಷಡ್ಯಂತ್ರ ಹೊರಬರ್ಬೇಕು. ಇದರ ಹಿಂದೆ ಯಾರಿದ್ರೂ ಬಿಡಲ್ಲ ಅಂತಾ ಜಾರಕಿಹೊಳಿ ಬ್ರದರ್ಸ್ ಆಕ್ರೋಶ ಹೊರಹಾಕಿದ್ರು. ಇದು ಗಡಿ ದಾಟಿದ ಪ್ರಕರಣ, ಹೊರ ರಾಜ್ಯ ಹೊರದೇಶದಲ್ಲೂ ಪಿತೂರಿ ನಡೆದಿದೆ. ವಿದೇಶದಿಂದ ಅಪ್ಲೋಡ್ ಆಗಿದೆ. ಕೋಟಿ ಕೋಟಿ ಡೀಲು, ಯುವತಿಗೆ ಫ್ಲ್ಯಾಟ್ ಕೊಡಲಾಗಿದೆ. ಸಣ್ಣ ಪುಟ್ಟ ತನಿಖೆ ಬೇಡ್ವೇ ಬೇಡ ಅಂದಿದ್ರು. ಆದ್ರೀಗ ಎಲ್ಲವೂ ಉಲ್ಟಾ ಆಗಿದೆ. ಎಸ್ಐಟಿ ತನಿಖೆಯೇ ಸಾಕಪ್ಪ ಅಂತಾ ಜಾರಕಿಹೊಳಿ ಬ್ರದರ್ಸ್ ಸುಮ್ಮನಾಗಿಬಿಟ್ಟಂತಿದೆ.

ಜಾರಕಿಹೊಳಿ ಬ್ರದರ್ಸ್ ಒಲ್ಲದ ಮನಸ್ಸಿನಿಂದ್ಲೇ ಎಸ್ಐಟಿ ತನಿಖೆಗೆ ಒಪ್ಪಿಕೊಂಡ್ರೋ ಅಥವಾ ಸರ್ಕಾರಕ್ಕೆ ಸಿಬಿಐ ತನಿಖೆಗೆ ಮನಸ್ಸಿಲ್ವೋ ಗೊತ್ತಿಲ್ಲ. ಆದ್ರೆ, ಜಾರಕಿಹೊಳಿ ಆಗ್ರಹಿಸಿದಂತೆ, ಎಸ್ಐಟಿ ತನಿಖೆ ನಡೆಯುತ್ತಾ. ವಿದೇಶದಲ್ಲೂ ಸತ್ಯಶೋಧನೆ ನಡೆಯುತ್ತಾ..?

SIT ಸಿಡಿ ತನಿಖೆ ಹೇಗಿರುತ್ತೆ? ಅಂದಹಾಗೆ, ಈವರೆಗೂ ಸಿಡಿ ಕೇಸ್​ ಬಗ್ಗೆ FIR ದಾಖಲಾಗಿಲ್ಲ. ಹೀಗಾಗಿ ಫೀಲ್ಡಿಗಿಳಿಯೋ ಎಸ್ಐಟಿ, ಸಿಡಿಯ ಅಸಲಿಯತ್ತಿನ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲಿದೆ. ಈ ಪ್ರಾಥಮಿಕ ತನಿಖೆಯ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಲಿದೆ. ನಂತರ ತನಿಖೆಯ ಭಾಗವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸಲಿದೆ. ಈ ವೇಳೆ ರಮೇಶ್ ಜಾರಕಿಹೊಳಿ ಹೇಳಿದ್ದ 2+3+4 ಗುಟ್ಟಿನ ಬಗ್ಗೆಯೂ ಮಾಹಿತಿ ಸಂಗ್ರಹಿಸಲಿದೆ. ಬಳಿಕ ಮೂರನೇ ವ್ಯಕ್ತಿಯಾಗಿ ದೂರು ಕೊಟ್ಟು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿಗೂ ಗ್ರಿಲ್ ಮಾಡಲಿದೆ.

ಇವರಿಬ್ಬರಿಂದಲೂ ಸಿಡಿಗೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿಕೊಂಡು ತನಿಖೆಯನ್ನ ತೀವ್ರಗೊಳಿಸಲಿದೆ. ನಂತರ ನಾಪತ್ತೆಯಾಗಿರುವ ಯುವತಿಯನ್ನ ಪತ್ತೆ ಮಾಡಿ, ಯುವತಿ ಹಿಂದೆ ಯಾರಿದ್ದಾರೆ ಎಂಬುದನ್ನ ಪತ್ತೆ ಮಾಡಲಿದೆ. ಇವರುಗಳ ಹೇಳಿಕೆ ನಂತ್ರ, ಎಫ್ಎಸ್ಎಲ್​ನಿಂದಲೂ ಸಿಡಿ ಬಗ್ಗೆ ವರದಿ ಪಡೆಯಲಿರೋ ಎಸ್ಐಟಿ, ಸಿಡಿ ವೀಕ್ಷಿಸಿ, ನೈಜತೆ, ಸತ್ಯಾಸತ್ಯತೆಯ ಶೋಧನೆ ನಡೆಸಲಿದೆ. ಸಿಡಿ ವೀಕ್ಷಣೆ ಬಳಿಕ ಸಿಕ್ಕ ಮಾಹಿತಿ ಆಧರಿಸಿ ಮುಂದಿನ ತನಿಖೆ ತಿರುವು ಪಡೆದುಕೊಳ್ಳಲಿದೆ.

ಎಸ್ಐಟಿ ರಚನೆಯಾದ್ರೂ FIR ಡೌಟ್? ಸಿಡಿ ಹಿಂದಿರುವ ಕಾಣದ ಕೈಗಳ ಬಗ್ಗೆ ತನಿಖೆ ಆಗ್ಬೇಕಿದೆ. ಸಿಡಿ ಹಿಂದಿರುವ ಷಡ್ಯಂತ್ರವನ್ನು ಎಸ್ಐಟಿ ಬೇಧಿಸಬೇಕಿದೆ. ಸಿಡಿ ಬಿಡುಗಡೆ ಮಾಡಿದ್ದು ಯಾರು? ಎಲ್ಲಿಂದ ಬಂತು. ಸಿಡಿ ರಿಲೀಸ್​ಗೆ ಕುಮ್ಮಕ್ಕು ನೀಡಲಾಗಿದ್ಯಾ ಅನ್ನೋ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತೆ. ಹೀಗಾಗಿ ಎಸ್ಐಟಿ ರಚನೆಯಾದ್ರು ಎಫ್ಐಆರ್‌ ದಾಖಲಿಸದೇ ತನಿಖೆ ನಡೆಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಅದೇನೆ ಇರ್ಲಿ, ಸಿಡಿ ನಕಲಿಯೇ ಆಗಿರಲಿ, ಷಡ್ಯಂತ್ರವೇ ನಡೆದಿರಲಿ, ಸಿಡಿಯೊಳಗಿನ ಸತ್ಯ ಬಯಲಾಗ್ಬೇಕಿದೆ.

ಇದನ್ನೂ ಓದಿ: ದೆಹಲಿ ವಕೀಲರೊಂದಿಗೆ ರಮೇಶ್ ಜಾರಕಿಹೊಳಿ ಚರ್ಚೆ: ಮಾನನಷ್ಟ, ಐಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲು ಚಿಂತನೆ