ಬೆಂಗಳೂರು, ಡಿಸೆಂಬರ್ 11: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದರು ಎಂಬ ವಿಚಾರವನ್ನು ಇದೀಗ ಅವರ ಕುಟುಂಬ ವೈದ್ಯರು ಬಹಿರಂಗಪಡಿಸಿದ್ದಾರೆ. ಇದಕ್ಕಿಂತಲೂ ಅಚ್ಚರಿಯ ವಿಚಾರವೆಂದರೆ, ಮಂಗಳವಾರ ನಸುಕಿನ ಜಾವ 2.30ರ ಸುಮಾರಿಗೆ ಅವರು ಕೊನೆಯುಸಿರೆಳೆಯುವುದಕ್ಕೂ ಮುನ್ನ ಕುಟುಂಬ ವೈದ್ಯರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರಂತೆ! ಈ ಬಗ್ಗೆ ಅವರ ಕುಟುಂಬದ ವೈದ್ಯರಾಗಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಾ. ವಿಕೆ ಶ್ರೀನಿವಾಸ್ ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ.
ಕಳೆದ 30 ವರ್ಷಗಳಿಂದ ಎಸ್ಎಂ ಕೃಷ್ಣರಿಗೆ ಚಿಕಿತ್ಸೆ ನೀಡುತ್ತಿದ್ದೆ. 1994 ರಲ್ಲಿ ಹೃದಯ ಸಂಬಂಧಿ ಸಮಸ್ಯೆ ಆಗಿದ್ದಾಗ ಚಿಕಿತ್ಸೆಗಾಗಿ ಬಂದಿದ್ದರು. ಆಗ ಸೂಕ್ತ ಚಿಕಿತ್ಸೆ ದೊರೆತಿದ್ದರಿಂದ ಕೃಷ್ಣ ಅವರು ಗುಣಮುಖರಾಗಿದ್ದರು. ಬಳಿಕ 5 ವರ್ಷಗಳ ಕಾಲ ನಿತ್ಯವೂ ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಕಳೆದ 30 ವರ್ಷಗಳಿಂದ ಪ್ರತಿ ಭಾನುವಾರ ಭೇಟಿ ಮಾಡುತ್ತಿದ್ದೆ ಎಂದು ವೈದ್ಯ ಡಾ. ವಿಕೆ ಶ್ರೀನಿವಾಸ್ ತಿಳಿಸಿದ್ದಾರೆ.
ಎಸ್ಎಂ ಕೃಷ್ಣ ಕೇಂದ್ರ ಸಚಿವರಾಗಿದ್ದಾಗ ಹಾಗೂ ಮಹಾರಾಷ್ಟ್ರ ಗವರ್ನರ್ ಆಗಿದ್ದಾಗಲೂ ಅವರನ್ನು ಪ್ರತಿವಾರ ಭೇಟಿ ಮಾಡುತ್ತಿದ್ದೆ. ಒಂದು ಮಾತ್ರೆ ತೆಗೆದುಕೊಳ್ಳಬೇಕು ಎಂದರೂ ನನ್ನನ್ನು ಕೇಳಿಯೇ ತೆಗೆದುಕೊಳ್ಳುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೃಷ್ಣ ಅವರಿಗೆ ಸ್ವಲ್ಪ ಸಮಸ್ಯೆ ಆಗಿತ್ತು. ಅವರ ಹೃದಯದ ಆರೋಗ್ಯ ಚೆನ್ನಾಗಿಯೇ ಇತ್ತು. ಆದರೆ, ರೆಸ್ಪಿರೇಟರಿ ಸಿಸ್ಟಂನಲ್ಲಿ ಸ್ವಲ್ಪ ಸಮಸ್ಯೆ ಆಗಿತ್ತು. ಹೀಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದೆವು. ಒಂದೂವರೆ ತಿಂಗಳು ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಕೊನೆಯುಸಿರು ಎಳೆಯುವ ಮುನ್ನವೂ ಅವರು ಕರೆ ಮಾಡಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಎಸ್ಎಂ ಕೃಷ್ಣ ಲಗ್ನಪತ್ರಿಕೆ ಹೇಗಿತ್ತು ನೋಡಿ! ಈಗ ವೈರಲ್ ಆಗ್ತಿದೆ ವಿವಾಹ ಆಮಂತ್ರಣ ಪತ್ರಿಕೆ
ಜ್ವರ ಕಡಿಮೆ ಮಾಡಲು ಎಸ್ಎಂ ಕೃಷ್ಣ ಅವರಿಗೆ ಔಷಧ ಕೊಟ್ಟಿದ್ದೆವು. ಆದರೆ, ಅವರ ದೇಹ ಅದಕ್ಕೆ ಸ್ಪಂದಿಸಲಿಲ್ಲ. ಬಳಿಕ ದೇಹ ತಣ್ಣಗೆ ಆಯಿತು ಎಂದು ಡಾ. ವಿಕೆ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ