ಕೇರಳ ನೆರೆ ಸಂತ್ರಸ್ತರಿಗೆ ಮನೆ: ಸಿಎಂ ಸಿದ್ದರಾಮಯ್ಯ ವಯನಾಡು ಕಳಕಳಿ ಗುಲಾಮಗಿರಿಯ ಸಂಕೇತವೆಂದ ಸಿಟಿ ರವಿ
ಕೇರಳ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿರುವುದು ಮಾನವೀಯ ನೆಲೆಯಿಂದ ಅಲ್ಲ. ಅವರ ವಯನಾಡು ಕಳಕಳಿ ಗುಲಾಮಗಿರಿಯ ಸಂಕೇತ ಎಂದು ಬಿಜೆಪಿ ನಾಯಕ ಸಿಟಿ ರವಿ ಟೀಕಿಸಿದ್ದಾರೆ. ರಾಜ್ಯದ ಬಾಣಂತಿಯರ ಸಾವು, ಆನೆ ದಾಳಿ ಸಮಸ್ಯೆಗಳ ಬಗ್ಗೆ ಗಮನಹರಿಸುವ ಬದಲು ಭ್ರಷ್ಟಾಚಾರ ಆರೋಪಗಳ ಸಮರ್ಥನೆಯಲ್ಲೇ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 11: ನೆರೆ ರಾಜ್ಯ ಕೇರಳ ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದ ಬಗ್ಗೆ ಬಿಜೆಪಿ ನಾಯಕ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ವಯನಾಡು ಕಳಕಳಿ ಗುಲಾಮಗಿರಿಯ ಸಂಕೇತವೆಂದು ಟೀಕಿಸಿದ್ದಾರೆ.
ರಾಜ್ಯ ಸರ್ಕಾರ ಕೇರಳದಲ್ಲಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡುವ ಭರವಸೆ ನೀಡಿದೆ. ಮಾನವೀಯ ನೆಲೆಯಲ್ಲಿ ಮಾಡುವುದೇನೋ ಸರಿ. ಆದರೆ, ಸಿದ್ದರಾಮಯ್ಯ ಅವರ ಈ ನಡೆ ಮಾನವೀಯ ನೆಲೆಯಿಂದ ಕಾಣುತ್ತಿಲ್ಲ. ಇದು ಗುಲಾಮಗಿರಿಯ ಸಂಕೇತ. ಹಿಂದೆ ರಾಹುಲ್ ಗಾಂಧಿ, ಈಗ ಪ್ರಿಯಾಂಕಾ ಗಾಂಧಿ ಅಲ್ಲಿ ಸಂಸದರಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಇಲ್ಲಿ ಬಾಣಂತಿಯರ ಸಾವು, ಎತ್ತಿನಹೊಳೆ ಯೋಜನೆ ಸಂಬಂಧ ಅಧಿಕಾರಿ ಜೊತೆ ಜಗಳ ಮಾಡಿ ರೈತರೊಬ್ಬರು ಹೊಳೆಗೆ ಹಾರಿ ಸಾವನ್ನಪ್ಪಿದ್ದಾರೆ. ಇದರ ಕುರಿತು ರಾಜ್ಯ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಸಿಟಿ ರವಿ ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯರನ್ನು ಉದ್ದೇಶಿಸಿ ವಾಗ್ದಾಳಿ ನಡೆಸಿದ ಸಿಟಿ ರವಿ, ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ನಿಮಗೆ ಕಾಳಜಿ ಇಲ್ಲ. ನಿಮ್ಮ ವಯನಾಡು ಕಳಕಳಿ ಗುಲಾಮಗಿರಿಯ ಸಂಕೇತ. ಈ ಪ್ರಶ್ನೆಯನ್ನು ವಿಧಾನಸಭೆಯಲ್ಲೂ ಮಾಡುತ್ತೇವೆ. ಬಾಣಂತಿಯರ ಸಾವು, ಹಸುಗೂಸುಗಳ ಸಾವು ಪ್ರಕರಣ ಸಂಬಂಧ ಎಸ್ಐಟಿ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಮೇಲೆ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪಗಳಿಗೆ ಉತ್ತರ ನೀಡುವಲ್ಲೇ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರು ವ್ಯಸ್ತರಾಗಿದ್ದಾರೆ. ನಿಮ್ಮ ರಕ್ಷಣೆ ಮಾಡಿಕೊಳ್ಳಲು ನೀವು ಮಾಡುವ ಕೆಲಸವನ್ನು ರಾಜ್ಯದ ವಿಷಯಗಳಿಗೆ ಮಾಡುತ್ತಾ ಇಲ್ಲ ಎಂದು ರವಿ ಟೀಕಿಸಿದ್ದಾರೆ.
ಮುರುಡೇಶ್ವರದಲ್ಲಿ ಶಾಲಾ ಮಕ್ಕಳು ನೀರು ಪಾಲಾದ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರದ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಆದರೆ, ಈ ಘಟನೆ ಆಗಬಾರದಿತ್ತು. ಮಕ್ಕಳನ್ನು ನೀರಿಗೆ ಬಿಟ್ಟವರು ಯಾರು? ಶಾಲಾ ಮಕ್ಕಳು ಎಂದು ಹೇಳಲಾಗುತ್ತಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಆಗಬೇಕು ಎಂದು ರವಿ ಆಗ್ರಹಿಸಿದರು.
ಕಾಂಗ್ರೆಸ್ ನಾಯಕರ ಕೇರಳ ಪ್ರೇಮ ಇದೇ ಮೊದಲಲ್ಲ
ಕಾಂಗ್ರೆಸ್ ನಾಯಕರು, ಅದರಲ್ಲೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೇರಳ ಪ್ರೇಮ ಮೆರೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ಫೆಬ್ರವರಿಯಲ್ಲಿ ವಯನಾಡಿನ ಆನೆ ದಾಳಿ ಸಂತ್ರಸ್ತನ ಕುಟುಂಬದವರಿಗೆ ಕರ್ನಾಟಕ ಸರ್ಕಾರ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಈ ವಿಚಾರ ಕರ್ನಾಟಕದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಬಂಡೀಪುರ ಅರಣ್ಯ ಪ್ರದೇಶದಿಂದ ತೆರಳಿದ್ದ ಆನೆ ದಾಳಿ ನಡೆಸಿ ಸಾವನ್ನಪ್ಪಿರುವ ಕಾರಣ ಮೃತ ವ್ಯಕ್ತಿಗೆ ಪರಿಹಾರ ನೀಡಬೇಕು ಎಂಬ ಮನವಿ ಸಲ್ಲಿಕೆಯಾಗಿತ್ತು. ಅದರಂತೆ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಪರಿಹಾರ ನೀಡುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: ಆನೆ ದಾಳಿಗೆ ಬಲಿಯಾದ ವಯನಾಡ್ ವ್ಯಕ್ತಿಗೆ ಕರ್ನಾಟಕದ ಪರಿಹಾರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
ಪರಿಹಾರ ಘೋಷಣೆ ಕರ್ನಾಟಕದಲ್ಲಿ ವಿವಾದಕ್ಕೀಡಾಗುತ್ತಿದ್ದಂತೆಯೇ ಮೃತ ವ್ಯಕ್ತಿಯ ಕುಟುಂಬದವರು ಕರ್ನಾಟಕ ಸರ್ಕಾರದ ಪರಿಹಾರ ನಮಗೆ ಬೇಡ ಎಂದು ಹೇಳಿದ್ದರು.
ಬಂಡೀಪುರ ರಾತ್ರಿ ಸಂಚಾರ ವಿವಾದ
ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ವಯನಾಡಿನ ಉಪಚುನಾವಣೆ ಸಂದರ್ಭದ ನೀಡಿದ್ದ ಹೇಳಿಕೆಯೂ ವಿವಾದಕ್ಕೆ ಗ್ರಾಸವಾಗಿತ್ತು. ಕೇರಳದ ವಯನಾಡಿನ ಪಡಿಂಜರೆತಾರಾದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪರ ಉಪಚುನಾವಣೆ ಪ್ರಚಾರದ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಪ್ರಿಯಾಂಕಾ ಗೆದ್ದರೆ ಬಂಡೀಪುರ ರಾತ್ರಿ ಸಂಚಾರ: ತೀವ್ರ ಚರ್ಚೆಗೆ ಗ್ರಾಸವಾದ ಡಿಕೆಶಿ ಹೇಳಿಕೆ ವಿಡಿಯೋ ಇಲ್ಲಿದೆ
ಕಾಂಗ್ರೆಸ್ ಗುಲಾಮಗಿರಿ ಪ್ರದರ್ಶಿಸುತ್ತಿದೆ. ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದ ಲೋಕಸಭಾ ಕ್ಷೇತ್ರ (ಈಗ ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುತ್ತಿರುವ ಕ್ಷೇತ್ರ) ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕೇರಳ ಬಗ್ಗೆ ಒಲವು ತೋರ್ಪಡಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು. ಈಗ ಮತ್ತೆ ಸಿಟಿ ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ