ಬಳ್ಳಾರಿ ಬಳಿಕ ರಾಯಚೂರು ಜಿಲ್ಲೆಯಲ್ಲಿ 1 ತಿಂಗಳಲ್ಲಿ ನಾಲ್ವರು ಬಾಣಂತಿಯರ ಸಾವು
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ನಾಲ್ವರು ಬಾಣಂತಿಯರು ಸಿಸೇರಿಯನ್ ಶಸ್ತ್ರಚಿಕಿತ್ಸೆಯ ನಂತರ ಮೃತಪಟ್ಟಿದ್ದಾರೆ. ಬಳ್ಳಾರಿಯಲ್ಲಿ ಬಳಸಿದ IV ದ್ರಾವಣವನ್ನು ಇಲ್ಲಿಯೂ ಬಳಸಲಾಗಿದೆ ಎನ್ನಲಾಗಿದೆ. ಮೃತರ ಸಂಬಂಧಿಕರು ಆರೋಗ್ಯ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ಈ ಘಟನೆಯಿಂದ ಕರ್ನಾಟಕದಲ್ಲಿ ಬಾಣಂತಿಯರ ಸಾವುಗಳ ಬಗ್ಗೆ ಮತ್ತೆ ಚರ್ಚೆ ಹುಟ್ಟಿಕೊಂಡಿದೆ.
ರಾಯಚೂರು, ಡಿಸೆಂಬರ್ 11: ಬಳ್ಳಾರಿ (Ballari) ಬಳಿಕ ರಾಯಚೂರು (Raichur) ಜಿಲ್ಲೆಯಲ್ಲೂ ಬಾಣಂತಿಯರ ಸಾವಾಗಿದೆ. ಸಿಂಧನೂರು (Sindhanur) ತಾಲೂಕು ಆಸ್ಪತ್ರೆಗೆ ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿದ್ದ ನಾಲ್ವರು ಬಾಣಂತಿಯರು ಸಿಸೇರಿಯನ್ ಬಳಿಕ ಮೃತಪಟ್ಟಿದ್ದಾರೆ ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ. ರಾಯಚೂರು ಜಿಲ್ಲೆಯವರೇಯಾದ ಮೌಸಂಬಿ ಮಂಡಲ್, ಚನ್ನಮ್ಮ, ಚಂದ್ರಕಲಾ, ರೇಣುಕಮ್ಮ ಮೃತ ಬಾಣಂತಿಯರು. ಈ ನಾಲ್ವರು ಬಾಣಂತಿಯರಿಗೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಳಕೆಯಾಗಿದ್ದ IVದ್ರಾವಣವೇ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ.
ಬಾಣಂತಿಯರ ಸಾವಿನ ಬಗ್ಗೆ ವರದಿ ಕೇಳಿದರೂ ಆರೋಗ್ಯ ಇಲಾಖೆ ನೀಡುತ್ತಿಲ್ಲ ಎಂದು ಮೃತರ ಸಂಬಂಧಿಕರು ಆರೋಪ ಮಡಿದ್ದಾರೆ.
ಮಗುವಿಗೆ ಜನ್ಮ ನೀಡಿ ಮರುದಿನವೇ ಸಾವು
ಮೃತ ಬಾಣಂತಿ ಮೌಸಂಬಿ ಮಂಡಲ್ ಸಿಂಧನೂರು ತಾಲೂಕಿನ ಆರ್ ಎಚ್ ಕ್ಯಾಂಪ್-3 ನಿವಾಸಿಯಾಗಿದ್ದು, ಅಕ್ಟೋಬರ್ 21 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಸಿಸೇರಿಯನ್ ಮೂಲಕ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯಾದ ಮರುದಿನವೇ ಅಂದರೆ ಅಕ್ಟೋಬರ್ 22 ರಂದು ಮೌಸಂಬಿ ಮಂಡಲ್ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ: ಐವಿ ಫ್ಲೂಯಿಡ್ ಕಂಪನಿ ವಿರುದ್ಧ 4 ಕ್ರಿಮಿನಲ್ ಕೇಸ್ ದಾಖಲಿಸಲು ಶಿಫಾರಸು
ಆಸ್ಪತ್ರೆಗೆ ದಾಖಲಾಗಿ 10ನೇ ದಿನಕ್ಕೆ ಸಾವು
ಮೃತ ಬಾಣಂತಿ ಚನ್ನಮ್ಮ ಸಿಂಧನೂರು ತಾಲೂಕಿನ ರಾಗಲಪರ್ವಿ ಎಂಬಲ್ಲಿ ವಾಸವಾಗಿದ್ದರು. ಅಕ್ಟೋಬರ್ 21 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಹೆಣ್ಣು ಮಗಿವಿಗೆ ಜನ್ಮ ನೀಡಿದ್ದರು. ಅಕ್ಟೋಬರ್ 30 ರಂದು ಚನ್ನಮ್ಮ ಮೃತಪಟ್ಟಿದ್ದಾರೆ. ಚೆನ್ನಮ್ಮ ಎರಡನೇ ಹೆರಿಗೆಯಾಗಿತ್ತು.
ಮೃತ ಬಾಣಂತಿ ಚಂದ್ರಕಲಾ ಅವರು ಸಿಂಧನೂರು ತಾಲೂಕು ಉದ್ಬಾಳ(ಜೆ) ಎಂಬಲ್ಲಿ ವಾಸವಾಗಿದ್ದರು. ಅಕ್ಟೋಬರ್ 28 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನವೆಂಬರ್ 3 ರಂದು ಮೃತಪಟ್ಟಿದ್ದಾರೆ.
ಮೃತ ಬಾಣಂತಿ ರೇಣುಕಮ್ಮ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಎಂಬಲ್ಲಿ ವಾಸವಾಗಿದ್ದರು. ಅಕ್ಟೋಬರ್ 30 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಕ್ಟೋಬರ್ 31 ರಂದು ಮೃತಪಟ್ಟಿದ್ದಾರೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ ಬಾಣಂತಿಯರ ಸಾವು ಸಾಕಷ್ಟು ಚರ್ಚೆಯಾಗುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಬಾಣಂತಿಯರ ಮತ್ತು ಶಿಶುಗಳ ಸಾವು ಸರ್ಕಾರದ ನಿದ್ದೆಗೆಡಸಿದೆ. ಬಳ್ಳಾರಿಯಲ್ಲಿ ಒಂದೇ ತಿಂಗಳ ಅಂತರದಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ