ಬೆಂಗಳೂರು, ಡಿಸೆಂಬರ್ 18: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಮುಡಾ ಹಗರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಕೊನೆಗೂ ಪ್ರತ್ಯಕ್ಷರಾಗಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬರುವ ಹರಕೆ ಸೀರೆಯಲ್ಲಿ ಗೋಲ್ಮಾಲ್ ನಡೆದಿರುವ ಬಗ್ಗೆ ಧ್ವನಿ ಎತ್ತಿದ್ದ ಅವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಆ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆಯೊಡ್ಡಿತ್ತು. ಅದರ ಬೆನ್ನಲ್ಲೇ ಅವರು ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಹೋರಾಟ ಹತ್ತಿಕ್ಕಲು ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ಅವರು, ಹೋರಾಟ ನಿಲ್ಲಿಸಲು ಆಮಿಷವೊಡ್ಡಿದ್ದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ‘ಟಿವಿ9’ ಜತೆ ಮಾತನಾಡಿರುವ ಅವರು, ಮುಡಾ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ. ಹೋರಾಟ ನಿಲ್ಲಿಸಲು ನನಗೆ ಆಮಿಷವೊಡ್ಡಿದ್ದರು. ಆದರೆ, ನಾನು ಯಾವುದಕ್ಕೂ ಒಪ್ಪಲಿಲ್ಲ. ಆ ಕಾರಣಕ್ಕೆ ನನ್ನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಲೋಕಾಯುಕ್ತ ತನಿಖೆಯಾಗಲಿ, ಸಿಬಿಐಗೆ ಬೇಡ ಎಂದು ನನಗೆ ಆಮಿಷವೊಡ್ಡಿದ್ದರು ಎಂದು ತಿಳಿಸಿದ್ದಾರೆ.
ಹರ್ಷ ಹಾಗೂ ಶ್ರೀನಿಧಿ ಎಂಬ ಇಬ್ಬರು ವ್ಯಕ್ತಿಗಳು ಹಣದ ಆಮಿಷವೊಡ್ಡಿದ್ದಾರೆ. ಸಿಎಂ ಪತ್ನಿ ಪಾರ್ವತಿ ಆಪ್ತ ಸಹಾಯಕ ಎಂದು ಹೇಳಿಕೊಂಡಿರುವ ಹರ್ಷ ಹಾಗೂ ಶ್ರೀನಿಧಿ ಡಿಸೆಂಬರ್ 13 ರಂದು ಮುಡಾ ಬಳಿ ಸ್ನೇಹಮಯಿ ಕೃಷ್ಣರನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ.
ಪಾರ್ವತಮ್ಮ ಮಾನಸಿಕವಾಗಿ ನೊಂದಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕೆನ್ನುವ ಅರ್ಜಿ ವಾಪಸ್ ಪಡೆಯಿರಿ. ಲೋಕಾಯುಕ್ತ ಸಮಸ್ಯೆ ನಮಗೆ ಏನು ಸಮಸ್ಯೆ ಇಲ್ಲ. ಸಿಬಿಐ ಆದರೆ ನಮಗೆ ಸಮಸ್ಯೆ ಇದೆ. ನಿಮಗೆ ಎಷ್ಟು ಹಣ ಬೇಕು ಕೇಳಿ ನಾವು ಕೊಡುತ್ತೇವೆಂದು ಹರ್ಷ ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನ ಸ್ನೇಹಮಯಿ ಕೃಷ್ಣ ನಿರಾಕರಿಸಿದ್ದಾರೆ.
ಡಿಸೆಂಬರ್ 15 ರಂದು ಸ್ನೇಹಮಯಿ ಕೃಷ್ಣ ಮನೆಗೆ ತೆರಳಿ ಮಗನ ಬಳಿಯಲ್ಲಿ ಇದೇ ವಿಚಾರ ಪ್ರಸ್ತಾಪ ಮಾಡಲಾಗಿದೆ. ಈಗಾಗಲೇ ಇನ್ನೊಬ್ಬ ಹೋರಾಟಗಾರ ಗಂಗರಾಜ್ಗೆ ಮೂರು ಕೋಟಿ ರೂಪಾಯಿ ಮಾತನಾಡಿ ಒಂದುವರೆ ಕೋಟಿ ಕೊಟ್ಟಿದ್ದೇವೆ ಎಂದು ಹರ್ಷ ಹಣದ ಬ್ಯಾಗ್ ತೋರಿಸಿದ್ದಾರೆ ಎನ್ನಲಾಹಿದೆ. ಆದರೆ, ಹಣದ ಆಮಿಷಕ್ಕೆ ಒಪ್ಪದ ಸ್ನೇಹಮಯಿ ಕೃಷ್ಣ ಮಗ ಒಪ್ಪಿಲ್ಲ. ಮನೆ ಬಳಿ ಬಂದಿರುವ ವಿಡಿಯೋ, ಫೋನ್ ಮಾಡಿದ ದಾಖಲೆ ಎಲ್ಲಾ ಇಟ್ಟುಕೊಂಡು ಜಾರಿ ನಿರ್ದೇಶನಾಲಯಕ್ಕೆ ಸ್ನೇಹಮಯಿ ಕೃಷ್ಣ ದೂರು ಕೊಟ್ಟಿದ್ದಾರೆ.
ಸಿಬಿಐ ತನಿಖೆ ಬೇಡ ಎಂದು ಆಮಿಷವೊಡ್ಡಿದ್ದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡುತ್ತೇನೆ. ಯಾರು, ಯಾವಾಗ ಆಮಿಷವೊಡ್ಡಿದ್ದರು ಎಂಬ ಬಗ್ಗೆ ದೂರಿನಲ್ಲಿ ಉಲ್ಲೇಖಿಸುತ್ತೇನೆ. ಸಿಬಿಐ ತನಿಖೆಯಾದರೆ ಸಿಕ್ಕಿ ಹಾಕಿಕೊಳ್ಳುವ ಭಯ ಶುರುವಾಗಿದೆ. ಹೀಗಾಗಿ ನನ್ನ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವೇ ಇಲ್ಲ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಈ ಹಿಂದೆಯೇ ನನಗೆ ಭದ್ರತೆ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದೆ. ಆದರೆ ಅವರು ಭದ್ರತೆ ನೀಡಿಲ್ಲ, ಕನಿಷ್ಠ ಹಿಂಬರಹ ಸಹ ನೀಡಿಲ್ಲ. ನನಗೆ ಯಾವ ಪೊಲೀಸ್ ಭದ್ರತೆಯೂ ಬೇಡ. ಸಿಎಂ ಸಿದ್ದರಾಮಯ್ಯ ಕೃಪಾಕಟಾಕ್ಷದ ಅಧಿಕಾರಿ ನನಗೆ ಯಾವ ರೀತಿ ರಕ್ಷಣೆ ನೀಡುತ್ತಾರೆ? ಅಲ್ಲವೇ ಎಂದು ಸ್ನೇಹಮಯಿ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ನಾಪತ್ತೆ
ನನಗೆ ರಾಜ್ಯದ ಜನರ ರಕ್ಷೆ ಇದೆ, ದೇವರ ಕೃಪೆ ಇದೆ, ಅಷ್ಟೇ ಸಾಕು. ನಾಳೆ ಸಿಬಿಐಗೆ ವಹಿಸುವ ಮಹತ್ವದ ವಿಚಾರಣೆ ನಡೆಯಲಿದೆ. ಜಾರಿ ನಿರ್ದೇಶನಾಲಯವನ್ನು ಪ್ರತಿವಾದಿ ಮಾಡುವಂತೆ ಮನವಿ ಮಾಡಲಿದ್ದೇವೆ. ಇದರಿಂದ ಇ.ಡಿ ತನಿಖೆ ಮಾಹಿತಿ ಸಹ ಹೈಕೋರ್ಟ್ಗೆ ಸಿಗಲಿದೆ. ಇದು ನಮ್ಮ ಆರೋಪ ಸಾಬೀತುಪಡಿಸಲು ಅನುಕೂಲವಾಗಲಿದೆ. ಹೋರಾಟ ಹತ್ತಿಕ್ಕುವ ಪ್ರಯತ್ನದ ಬಗ್ಗೆಯೂ ಹೈಕೋರ್ಟ್ ಗಮನಕ್ಕೆ ತರುತ್ತೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:21 am, Wed, 18 December 24