ಮೈಸೂರು/ಬೆಂಗಳೂರು, (ಮಾರ್ಚ್ 04): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಹಗರಣ ಪ್ರಕರಣವನ್ನು ದೂರುದಾರ ಸ್ನೇಹಮಯಿಕೃಷ್ಣ ಸುಮ್ಮನೇ ಬಿಡುವಂತೆ ಕಾಣುತ್ತಿಲ್ಲ. ಪ್ರಕರಣವನ್ನು ಕೊನೆವರೆಗೂ ತೆಗೆದುಕೊಂಡು ಹೋಗುವ ತೀರ್ಮಾನ ಮಾಡಿದ್ದು, ಇದೀಗ ಮುಡಾ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಸಿಬಿಐ ತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬಳಿಕ ಕೊಂಚ ರಿಲ್ಯಾಕ್ಸ್ನಲ್ಲಿದ್ದ ಸಿಎಂ ಸಿದ್ದರಾಮಯ್ಯಗೆ ಮತ್ತೆ ಟೆನ್ಷನ್ ಶುರುವಾದಂತಾಗಿದೆ.
ಮುಡಾ ಹಗರಣ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಬೇಕೆಂದು ದೂರುದಾರ ಸ್ನೇಹಮಯಿ ಕೃಷ್ಣ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ, ಕೋರ್ಟ್ ಏಕಸದಸ್ಯ ಪೀಠ ಸ್ನೇಹಮಯಿ ಕೃಷ್ಣ ಅರ್ಜಿಯನ್ನು ವಜಾ ಮಾಡಿತ್ತು. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರಾಳರಾಗಿದ್ದರು.
ಕೋರ್ಟ್ ಅರ್ಜಿ ವಜಾ ಮಾಡಿದ ಬಳಿಕ ಸ್ನೇಹಮಯಿ ಕೃಷ್ಣ ಸುಪ್ರೀಂಕೋರ್ಟ್ಗೆ ಮೇಲ್ಮವಿ ಸಲ್ಲಿಸುವುದಿಲ್ಲ ಎಂದು ಹೇಳಿದ್ದರು. ಆದ್ರೆ, ಇದೀಗ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠದ ಮೊರೆ ಹೋಗಿದ್ದಾರೆ.
ಮೇಲ್ಮನವಿ ಸಲ್ಲಿಕ್ಕೆ ಸಂಬಂಧ ಟಿವಿ9 ಜೊತೆ ಮಾತನಾಡಿದ ಸ್ನೇಹಮಯಿ ಕೃಷ್ಣ, ‘ಸಿಬಿಐ ತನಿಖೆ ನಂತರ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಶಿಕ್ಷೆಯಾಗಲಿದೆ. ಪ್ರಕರಣದ ಹಲವು ದಾಖಲೆ ಕಾಂಗ್ರೆಸ್ ಪಕ್ಷದವರೇ ನೀಡಿದ್ದಾರೆ. ಅವರದೇ ಪಕ್ಷದವರು ಸಹ ನನ್ನ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಸಿದ್ದರಾಮಯ್ಯ ತಪ್ಪು ಬಹಿರಂಗವಾಗಿ ಹೇಳಲು ಆಗದವರಿಂದ ನನಗೆ ಬೆಂಬಲ ಕೊಟ್ಟಿದ್ದಾರೆ. ಇದರ ಜೊತೆಗೆ ಪ್ರಾಮಾಣಿಕರಾಗಿರುವ ಎಲ್ಲಾ ಪಕ್ಷದವರು ಸಹ ನನಗೆ ಬೆಂಬಲವಾಗಿದ್ದಾರೆ’ ಎಂದು ಹೊಸ ಬಾಂಬ್ ಸಿಡಿಸಿದರು.
ಲೋಕಾಯುಕ್ತ ಪೂರ್ಣ ತನಿಖಾ ವರದಿ ಸಲ್ಲಿಸಿದ ನಂತರ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ. ಮೇಲ್ಮನವಿ ಸಲ್ಲಿಸುವ ಬದಲು ಶಿಕ್ಷೆ ಕೊಡಿಸುವ ಕಡೆ ಹೆಚ್ಚಿನ ಗಮನ ನೀಡುತ್ತೇನೆ. ಒಬ್ಬ ಸಾಮಾನ್ಯ ಪ್ರಜೆ ಸಿಎಂ ತಪ್ಪು ಮಾಡಿದರೆ ಶಿಕ್ಷೆ ಕೊಡಿಸಬಹುದು ಎಂಬದನ್ನು ಸಾಬೀತುಪಡಿಸಲು ಈ ನಿರ್ಧಾರ ಕೈಗೊಂಡಿದ್ದೇನೆ. ಖಂಡಿತಾ ನನ್ನ ಬಳಿ ಇರುವ ದಾಖಲೆ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ನೀಡುತ್ತೇನೆ. ಆರೋಪಿಗಳು ಇದುವರೆಗೂ ತಮ್ಮ ಆರೋಪಕ್ಕೆ ಒಂದೇ ಒಂದು ಸಾಕ್ಷ್ಯ ಕೊಟ್ಟಿಲ್ಲ ಇದು ಒಂದು ರೀತಿ ಸವಾಲಿನ ವಿಚಾರ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:03 pm, Tue, 4 March 25