ಹೈಕೋರ್ಟ್ ತೀರ್ಪು ಹಿನ್ನೆಲೆ: ಹಿಜಾಬ್ ತೆರೆದಿಟ್ಟು ತರಗತಿಗೆ ಬಂದ ಕೊಡಗು ವಿದ್ಯಾರ್ಥಿನಿಯರು
ಕೊಡಗು ಜಿಲ್ಲೆಯಲ್ಲಿ ಕಾಲೇಜಿಗೆ ಬರುವಾಗ ಹಿಜಾಬ್ ಮತ್ತು ಬುರ್ಖಾ ಧರಿಸಿದ್ದರೂ ಲೇಡೀಸ್ ರೂಮ್ನಲ್ಲಿ ಅವನ್ನು ತೆಗೆದಿರಿಸಿ, ಸಮವಸ್ತ್ರದಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
ಮಡಿಕೇರಿ: ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪನ್ನು ಕೊಡಗಿನ ವಿದ್ಯಾರ್ಥಿನಿಯರು ಗೌರವಿಸಿದ್ದಾರೆ. ಮಡಿಕೇರಿಯ ಎಫ್ಎಂಸಿ ಕಾಲೇಜು, ಸರ್ಕಾರಿ ಜ್ಯೂನಿಯರ್ ಕಾಲೇಜು ಸೇರಿದಂತೆ ಹಲವೆಡೆ ಸಹಜ ಸ್ಥಿತಿ ನೆಲೆಸಿದೆ. ಕಾಲೇಜಿಗೆ ಬರುವಾಗ ಹಿಜಾಬ್ ಮತ್ತು ಬುರ್ಖಾ ಧರಿಸಿದ್ದರೂ ಲೇಡೀಸ್ ರೂಮ್ನಲ್ಲಿ ಅವನ್ನು ತೆಗೆದಿರಿಸಿ, ಸಮವಸ್ತ್ರದಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಎಲ್ಲ ವಿದ್ಯಾರ್ಥಿನಿಯರು ಮತ್ತೆ ಕಾಲೇಜುಗಳಿಗೆ ಹಿಂದಿರುಗಿರುವುದು ಆಶಾದಾಯಕ ಬೆಳವಣಿಗೆ ಎನಿಸಿದೆ.
ಹಿಜಾಬ್ಗಾಗಿ ಪರೀಕ್ಷೆಗೆ ಬಹಿಷ್ಕಾರ ವಿಜಯಪುರ: ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ಕೆಲ ವಿದ್ಯಾರ್ಥಿನಿಯರು ಪ್ರಾಯೋಗಿಕ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಬಹಿಷ್ಕರಿಸಿದ್ದಾರೆ. ಹಿಜಾಬ್ ಕಡ್ಡಾಯವಲ್ಲಾ ಎಂದು ನಿನ್ನೆಯಷ್ಟೆ ಹೈಕೋರ್ಟ್ ಅಂತಿಮ ತೀರ್ಪು ನೀಡಿತ್ತು. ವಿಜಯಪುರ ನಗರದ ಸರ್ಕಾರಿ ಬಾಲಕಿಯರ ಪಿಯು ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ತರಗತಿಗಳಿಂದ ದೂರ ಉಳಿದರು.
ಕಾಲೇಜಿನಿಂದ ಆಗಮಿಸಿ ಮನೆಯೊಂದರಲ್ಲಿ ಸೇರಿದ ವಿದ್ಯಾರ್ಥಿನಿಯರು ಹಿಜಾಬ್ ನಮ್ಮ ಜೀವನದ ಅವಿಭಾಜ್ಯ ಅಂಗ. ಪ್ರಾಥಮಿಕ ಹಂತದಿಂದಲೂ ಹಿಜಾಬ್ ಧರಿಸುತ್ತಿದ್ದೆವು. ಇದೀಗ ಹಿಜಾಬ್ ಕುರಿತು ವಿವಾದ ಎಬ್ಬಿಸಲಾಗಿದೆ. ಹೈಕೋರ್ಟ್ ತೀರ್ಪನ್ನು ನಾವು ಒಪ್ಪುವುದಿಲಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬರೋವರೆಗೂ ತರಗತಿ ಹಾಗೂ ಪರೀಕ್ಷೆಗಳನ್ನು ಬಹಿಷ್ಕಾರ ಮಾಡುತ್ತೇವೆ ಎಂದರು.
ಯಾದಗಿರಿ: ಪರೀಕ್ಷೆಗೆ 20 ವಿದ್ಯಾರ್ಥಿನಿಯರು ಗೈರು
ಯಾದಗಿರಿ: ಸಮವಸ್ತ್ರದ ಜತೆ ಹಿಜಾಬ್ ಬಳಸಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಸುರಪುರ ತಾಲ್ಲೂಕು ಕೆಂಭಾವಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ದ್ವಿತೀಯ ಪಿಯು ಪೂರಕ ಪರೀಕ್ಷೆಗೆ ಗೈರುಹಾಜರಾದರು. ಕೇವಲ ಐವರು ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾದರು. ನಿನ್ನೆ ಕೂಡ ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ಹಿಂದಿರುಗಿದ್ದರು.
ಶಿವಮೊಗ್ಗ: ತರಗತಿ ಬಹಿಷ್ಕರಿಸಿದ 10 ವಿದ್ಯಾರ್ಥಿನಿಯರು
ಹಿಜಾಬ್‌ಗೆ ಅವಕಾಶ ನೀಡದ ಕಾರಣ ಕಮಲಾ ನೆಹರು ಕಾಲೇಜಿನ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿಗಳಿಗೆ ಬಹಿಷ್ಕಾರ ಹಾಕಿದರು.
ಇದನ್ನೂ ಓದಿ: ಭಟ್ಕಳ: ಹಿಜಾಬ್ ತೀರ್ಪು ಹಿನ್ನೆಲೆ ಬಲವಂತವಾಗಿ ಅಂಗಡಿ ಬಂದ್; ಪಿಎಫ್ಐ ಕಾರ್ಯಕರ್ತರು, ವಕೀಲನ ವಿರುದ್ಧ ಪ್ರಕರಣ ದಾಖಲು
ಇದನ್ನೂ ಓದಿ: ಹಿಜಾಬ್: ಹೈಕೋರ್ಟ್ ತೀರ್ಪು ಹೊರಬಿದ್ದ ನಂತರ ಯಾದಗಿರಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುವುದು ಬಿಟ್ಟು ಮನೆಗೆ ಹೋದರು!