ದಾವಣಗೆರೆ, ಸೆಪ್ಟೆಂಬರ್ 29: ಕೆಲವರು ಸಿಎಂ ಆಗಲು ಸಾವಿರ ಕೋಟಿ ಹಣ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ (Basangouda Patil Yatnal) ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದರಲ್ಲಿ ಕಾಂಗ್ರೆಸ್ನವರೂ ಇದ್ದಾರೆ, ಬೇರೆ ಪಕ್ಷದವರೂ ಇದ್ದಾರೆ. ಸಾವಿರ ಕೋಟಿ ಹಣ ಇಟ್ಟುಕೊಂಡು ಸಿಎಂ ಆಗಲು ಸಿದ್ಧರಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಭ್ರಷ್ಟಾಚಾರ ನಡೆಸಿ ಸಾಕಷ್ಟು ದುಡ್ಡು ಮಾಡಿದ್ದಾರೆ ಎಂದು ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ಆರೋಪ ಮಾಡಿದ್ದಾರೆ. ನಾವು ಈಗ ಆಪರೇಷನ್ ಕಮಲ ಮಾಡುವ ಪ್ರಯತ್ನ ಮಾಡಲ್ಲ. ಮುಂದಿನ ದಿನಗಳಲ್ಲಿ ನಮಗೆ ಸಂಪೂರ್ಣ ಬಹುಮತ ಸಿಗಲಿದೆ. ಈ ಹಿಂದೆ ಕೆಲವರ ಬಳಿ ಹಣದ ಕೌಂಟಿಂಗ್ ಮಷೀನ್ ಸಿಕ್ಕಿವೆ. ವಿಜಯೇಂದ್ರ ಅವರು ನಮ್ಮ ತಂದೆಯಿಂದ ಸಂಸ್ಕಾರ ಸಿಕ್ಕಿದೆ ಎಂದಿದ್ದರು. ಅವರಿಗೆ ಚಿತ್ರದುರ್ಗದ ಮನೆಯೊಂದರಲ್ಲಿ ಸಂಸ್ಕಾರ ಸಿಕ್ಕಿದೆ ಎಂದು ವ್ಯಂಗ್ಯ ಆಡಿದ್ದಾರೆ.
ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ: ಜಗನ್ ಮೋಹನ್ ರೆಡ್ಡಿಯನ್ನ ಬಂಧಿಸಿ ಎಂದ ಯತ್ನಾಳ್
ಬಿಜೆಪಿಯಲ್ಲಿ ಭಿನ್ನಮತ ಇದೆ. ಪಕ್ಷದ ಗೊಂದಲಗಳ ಬಗ್ಗೆ ಹೈಕಮಾಂಡ್ಗೆ ಮಾಹಿತಿ ರವಾನೆ ಮಾಡಲಾಗಿದೆ. ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಸೂಚಿಸಿದೆ. ಹೀಗಾಗಿ ನಾವು ಹೆಚ್ಚು ಮಾತಾಡಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾಯಿಸುವ ಅಧಿಕಾರ ನಮಗಿಲ್ಲ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತೋ ಕಾದು ನೋಡುತ್ತೇವೆ ಎಂದು ಹೇಳಿದ್ದಾರೆ.
ದಾವಣಗೆರೆ ನಗರದಲ್ಲಿ ಬಿಜೆಪಿ ಬಂಡಾಯ ನಾಯಕರ ಸಭೆ ವಿಚಾರವಾಗಿ ಮಾತನಾಡಿದ ಅವರು, ಸದ್ಯಕ್ಕೆ ಪಕ್ಷದ ಬಗ್ಗೆ ಯಾವುದೇ ಚರ್ಚೆ ನಡೆಯಲ್ಲ. ಕುಮಾರ ಬಂಗಾರಪ್ಪ ಮನೆಯಲ್ಲಿ ಸಭೆ ಮಾಡಿದಾಗಲೇ ನಿರ್ಧರಿಸಲಾಗಿದೆ. ಏನು ಮಾಡಬೇಕೆಂದು ಹಿಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ದಾವಣಗೆರೆಯಲ್ಲಿ ಇತ್ತೀಚೆಗೆ ಗಣೇಶ ಮೆರವಣಿಗೆ ವೇಳೆ ಗಲಾಟೆ ಆಗಿದೆ. ಇದರಲ್ಲಿ ವಿದೇಶಿ ಶಕ್ತಿಗಳ ಕೈವಾಡವಿದೆ, ಹೀಗಾಗಿ ನಾವು ಬಂದಿದ್ದೇವೆ. ಸದ್ಯಕ್ಕೆ ಪಕ್ಷದ ವಿಚಾರದ ಬಗ್ಗೆ ಯಾವುದೇ ಚರ್ಚೆ ನಡೆಯಲ್ಲ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.