ಜ.16ರಿಂದ ದೇಶದಲ್ಲಿ ಕೊರೊನಾ ಲಸಿಕೆ ಹಂಚಿಕೆ.. ರಾಜ್ಯದಲ್ಲೂ ಸಂಪೂರ್ಣ ಸಿದ್ಧತೆ ಮಾಡಲಾಗಿದೆ: ಆರೋಗ್ಯ ಸಚಿವ ಡಾ. ಕೆ.ಸುಧಾಕರ್
ರಾಜ್ಯಕ್ಕೆ ಒಟ್ಟು 24 ಲಕ್ಷ ಡೋಸ್ಗಳು ಬರಲಿದ್ದು, 24 ಲಕ್ಷ ಸಿರಿಂಜ್ಗಳು ಕೇಂದ್ರದಿಂದ ಈಗಾಗಲೇ ಬಂದಿವೆ. ಮೊದಲ ಹಂತದಲ್ಲಿ 13.90 ಲಕ್ಷ ಕೊರೊನಾ ಲಸಿಕೆ ಬರಲಿದೆ. ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಸಾರ್ವಜನಿಕರಿಗೆ ಲಸಿಕೆ ನೀಡಲು ಇನ್ನೂ 2 ತಿಂಗಳು ಬೇಕಾಗಬಹುದು ಎಂದು ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು: ದೇಶದಲ್ಲಿ ಜನವರಿ 16ರಿಂದ ಕೊರೊನಾ ಲಸಿಕೆ ಹಂಚಿಕೆ ಮಾಡುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಹಾಗೇ ರಾಜ್ಯದಲ್ಲಿ ಕೂಡ ಲಸಿಕೆ ಸಂಗ್ರಹಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗಿದೆ. ವಿತರಣೆಗೂ ಸಂಪೂರ್ಣ ಸಿದ್ಧತೆ ಮಾಡಿಕೊಲ್ಳಲಾಗಿದೆ. ಮೊದಲ ಹಂತದಲ್ಲಿ ರಾಜ್ಯಕ್ಕೆ 13.90 ಲಕ್ಷ ಡೋಸ್ ಲಸಿಕೆ ಸಿಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಲಸಿಕೆ ಸಂಗ್ರಹಕ್ಕಾಗಿ ಮಾಡಲಾದ ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ (ಜನವರಿ 11) ಸಂಜೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಸಂವಾದ ನಡೆಸಲಿದ್ದಾರೆ. ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ 3 ಕೋಟಿ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಸಂಗ್ರಹ ವ್ಯವಸ್ಥೆಯನ್ನು ಪರಿಶೀಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು, ಬೆಳಗಾವಿಯಲ್ಲಿ ಲಸಿಕೆ ಸಂಗ್ರಹ ವ್ಯವಸ್ಥೆ ರಾಜ್ಯದಲ್ಲಿ ಪ್ರಮುಖವಾಗಿ ಬೆಂಗಳೂರು ಮತ್ತು ಬೆಳಗಾವಿಯಲ್ಲಿ 2 ಲಸಿಕೆ ಸಂಗ್ರಹ ವ್ಯವಸ್ಥೆಗಳಿಗೆ. ಚಿತ್ರದುರ್ಗ, ಕಲಬುರಗಿ, ದಕ್ಷಿಣ ಕನ್ನಡ, ಮೈಸೂರು ಮತ್ತು ಬಾಗಲಕೋಟೆಯಲ್ಲಿ 5 ಪ್ರಾದೇಶಿಕ ಸಂಗ್ರಹ ವ್ಯವಸ್ಥೆ ಇದೆ. ಪ್ರತಿ ಜಿಲ್ಲೆಯಲ್ಲೂ ಒಂದು ಕಾರ್ಪೊರೇಷನ್ ಲಸಿಕೆ ಸಂಗ್ರಹ ವ್ಯವಸ್ಥೆ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 50 ಬ್ಲಾಕ್ ಇದೆ. ಒಟ್ಟು 2,767 ಕೋಲ್ಡ್ ಚೈನ್ ಪಾಯಿಂಟ್ಗಳು ಇವೆ. ಇವೆಲ್ಲ ಮೂಲಸೌಕರ್ಯದೊಂದಿಗೆ ಲಸಿಕೆ ವಿತರಣೆ ಮಾಡಲಾಗುವುದು ಎಂದು ವಿವರಿಸಿದರು.
ರಾಜ್ಯದಲ್ಲಿ 900 ಲಸಿಕೆ ಕ್ಯಾರಿಯರ್ಗಳಿವೆ. ಲಸಿಕೆಯನ್ನು ಮೊದಲಿಗೆ ಪ್ರಾದೇಶಿಕ ಸಂಗ್ರಹ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ನಂತರ ಅಲ್ಲಿಂದ ಜಿಲ್ಲಾ ಮಟ್ಟಕ್ಕೆ ಕಳುಹಿಸಲಾಗುತ್ತದೆ. ಬೆಂಗಳೂರಿನಲ್ಲಿ ಎರಡು ವಾಕ್-ಇನ್ ಕೂಲರ್ ಇದೆ. ಒಂದರಲ್ಲಿ 45 ಲಕ್ಷ ಡೋಸ್ ಸಂಗ್ರಹಿಸಲು ಅವಕಾಶವಿದೆ. ಇದೇ ರೀತಿ ಒಂದು ವಾಕ್- ಇನ್ ಫ್ರೀಜರ್ ಇದೆ. ಅದರಲ್ಲಿ 40 ಲಕ್ಷ ಡೋಸ್ ಸಂಗ್ರಹ ಸಾಮರ್ಥ್ಯವಿದೆ. ಕೇಂದ್ರ ಸರ್ಕಾರ ಇನ್ನೂ ಒಂದು ವಾಕ್- ಇನ್ ಫ್ರೀಜರ್ ನೀಡಲಿದೆ ಎಂದರು.
ರಾಜ್ಯಕ್ಕೆ ಒಟ್ಟು 24 ಲಕ್ಷ ಡೋಸ್ಗಳು ಬರಲಿದ್ದು, 24 ಲಕ್ಷ ಸಿರಿಂಜ್ಗಳು ಕೇಂದ್ರದಿಂದ ಈಗಾಗಲೇ ಬಂದಿವೆ. ಮೊದಲ ಹಂತದಲ್ಲಿ 13.90 ಲಕ್ಷ ಕೊರೊನಾ ಲಸಿಕೆ ಬರಲಿದೆ. ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಸಾರ್ವಜನಿಕರಿಗೆ ಲಸಿಕೆ ನೀಡಲು ಇನ್ನೂ 2 ತಿಂಗಳು ಬೇಕಾಗಬಹುದು. ಪ್ರತಿಯೊಬ್ಬರಿಗೂ ಲಸಿಕೆ ಬೇಕೆ ಬೇಡವೇ ಎಂಬುದನ್ನು ತಜ್ಞರ ಸಲಹೆ ಮೇರೆಗೆ ಸರ್ಕಾರ ತೀರ್ಮಾನಿಸಲಿದೆ. ಸಾರ್ವಜನಿಕರಿಗೆ ಲಸಿಕೆ ನೀಡುವುದಾದರೂ ಮೊದಲಿಗೆ ವೃದ್ಧರು, ಅಶಕ್ತರಿಗೆ ನೀಡಲಾಗುವುದು ಎಂದು ಹೇಳಿದರು.
ಲಂಡನ್‌ನಿಂದ ಬಂದವರಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್: ಉಳಿದವರು ಸಾರ್ವಜನಿಕ ಸಾರಿಗೆ ಬಳಸಿ ಮನೆಗೆ ವಾಪಸ್!
Published On - 6:17 pm, Sun, 10 January 21