ತುಮಕೂರು, ಮಾರ್ಚ್ 4: ಕುಣಿಗಲ್, ಮಾಗಡಿಗೆ ಹೇಮಾವತಿ ನೀರು ಹರಿಸಲು ತೀವ್ರ ವಿರೋಧ ವಿಚಾರವಾಗಿ ಇಂದು ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ (G. Parameshwar) ನೇತೃತ್ವದಲ್ಲಿ ಕೆಡಿಪಿ ಮೀಟಿಂಗ್ ಮಾಡಲಾಗಿದೆ. ಸಭೆಯಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕಿಂಗ್ ಕಾಲುವೆ ಬಗ್ಗೆ ಚರ್ಚೆ ಮಾಡಲಾಗಿದೆ. ಸಭೆಯಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ, ತುರುವೇಕೆರೆ ಶಾಸಕ ಕೃಷ್ಣಪ್ಪ, ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು, ಜ್ಯೋತಿ ಗಣೇಶ್ ಕುಣಿಗಲ್, ಮಾಗಡಿಗೆ ಹೇಮಾವತಿ ನೀರು ಹರಿಸುವುದಕ್ಕೆ ತೀವ್ರ ವಿರೋಧ ಮಾಡಿದ್ದಾರೆ. ಮಾ.1ರಂದು ಹೇಮಾವತಿ ಎಕ್ಸ್‌ಪ್ರೆಸ್ ಲಿಂಕಿಂಗ್ ಕಾಲುವೆಗೆ ಕುಣಿಗಲ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಿದ್ದರು.
ಕುಣಿಗಲ್, ಮಾಗಡಿಗೆ ನೀರು ಹಂಚಿಕೆ ಆಗಿಲ್ಲ, ಓವರ್‌ಕ್ರಾಸ್ ಹೇಗೆ ಆಗಿದೆ. ಮೇಕೆದಾಟು ಬಗ್ಗೆ ಪಾದಯಾತ್ರೆ ಮಾಡಿದ್ದಾರೆ, ಇಲ್ಲಿಂದ ಏಕೆ ನೀರುಹೋಗಬೇಕು. ಕುಣಿಗಲ್, ಮಾಗಡಿಗೆ ನೀರು ಹರಿಸಿದರೆ ರಕ್ತಪಾತ ಆಗುತ್ತೆ. ಅಧಿಕಾರಿಗಳಿಂದ ಎಡವಟ್ಟು ಆಗಿದೆ, ಇವರನ್ನ ಬಲಿ ಹಾಕಬೇಕೆಂದು ಬಿಜೆಪಿ ಶಾಸಕ ಸುರೇಶ್ ಗೌಡ ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ದಿನೇ ದಿನೇ ಖಾಲಿಯಾಗುತ್ತಿದೆ ಹೇಮಾವತಿ ಒಡಲು, ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಆತಂಕ
19.95 ಟಿಎಂಸಿ ತುಮಕೂರು ಜಿಲ್ಲೆಗೆ, ಎಲ್ಲಾ ಸೇರಿ ಒಟ್ಟು 24 ಟಿಎಂಸಿ ಹಂಚಿಕೆ ಆಗಿದ್ದ ನೀರು ಕೊಡಲಾಗುತ್ತಿದೆ ಎಂದು ಹೇಮಾವತಿ ನಾಲಾ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಹೇಗೆ ಅನುಮತಿ ನೀಡಿದ್ದೀರಿ?, ನಾಳೆ ನೀವು ಜೈಲಿಗೆ ಹೋಗುತ್ತೀರಾ ಅಷ್ಟೇ ಎಂದು ಹೇಮಾವತಿ ನಾಲಾ ಅಧಿಕಾರಿಗಳಿಗೆ ಸುರೇಶ್ ಗೌಡ ತರಾಟೆ ತೆಗೆದುಕೊಂಡರು. ಈ ವೇಳೆ ನಾವು ತೀರ್ಮಾನ ಕೈಗೊಂಡು ಸರ್ಕಾರಕ್ಕೆ ತಿಳಿಸಬೇಕಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ನೀರು ಇಲ್ಲ, ಹೀಗೆ ಮಾಡಿದರೆ ಹೇಗೆ. ಬೇಕಿದ್ರೆ ಹೆಚ್ಚುವರಿ ನೀರು ಹಂಚಿಕೆ ಮಾಡಿಸಿ ತೆಗೆದುಕೊಂಡು ಹೋಗಲಿ. ಆದರೆ ನಮಗೆ ಬರುವ ನೀರು ತೆಗೆದುಕೊಂಡು ಹೋಗೋದು ಬೇಡ. ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಆಗಿ ಗುದ್ದಲಿ ಪೂಜೆ ಸಹ ಆಗಿದೆ. ನೀರು ಎಷ್ಟು ಹಂಚಿಕೆ ಆಗಿದೆ ಅಂತಾ ಪರಿಶೀಲಿಸಿ ಸರ್ಕಾರಕ್ಕೆ ತಿಳಿಸಬೇಕಿದೆ. ಬೇರೆ ರೀತಿಯಲ್ಲಿ ನಿರ್ಣಯ ಕೈಗೊಳ್ಳುವಂತೆ ಸುರೇಶ್ ಗೌಡ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನೀರು ಹರಿಯುತ್ತಿದ್ದ ಕಾಲುವೆ ಏಕಾಏಕಿ ಬಂದ್; ಹೇಮಾವತಿ ಜಲಾಶಯದ ನೀರು ನಂಬಿ ಭತ್ತ ಬಿತ್ತನೆ ಮಾಡಿದ ರೈತರಲ್ಲಿ ಆತಂಕ
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕಿಂಗ್ ಕಾಲುವೆಗೆ ನೀರು ಹರಿಸದಂತೆ ನಿರ್ಣಯಿಸಲಾಗಿದ್ದು, ಈ ವಿಚಾರವಾಗಿ ಸಚಿವ ಪರಮೇಶ್ವರ್ ಹಾಗೂ ಜಯಚಂದ್ರ ಪರಸ್ಪರ ಚರ್ಚೆ ಮಾಡಿದ್ದಾರೆ. ಪುನಃ ಪರಿಶೀಲನೆ ನಡೆಸಿ ರೆಸ್ಯೂಲೇಷನ್ ಪಾಸ್ ಮಾಡಲು ತೀರ್ಮಾನ ಮಾಡಲಾಗಿದೆ. ಮತ್ತೊಮ್ಮೆ ಸರ್ಕಾರಕ್ಕೆ ಪ್ರಕ್ರಿಯೆ ತಲುಪಿಸಲು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ಸೂಚನೆ ನೀಡಿದ್ದಾರೆ. ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಜಿಲ್ಲೆಯ ಶಾಸಕರು ತೀರ್ಮಾನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.