ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ: ಸ್ಪಷ್ಟನೆ ನೀಡಿದ ಸುಮಲತಾ

ಸುಮಲತಾ ಅಂಬರೀಶ್ ಅವರ ಮಾನಸ ಪುತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್​ ಚಂದ್ರು ಪರ ಪ್ರಚಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್​ಡಿಎ ಅಭ್ಯರ್ಥಿ ಎಚ್​ಡಿ ಕುಮಾರಸ್ವಾಮಿ ವಿರುದ್ಧ ಪ್ರಚಾರ ಮಾಡುವಂತೆ ಸುಮಲತಾ ಅಂಬರೀಶ್ ಅವರೇ ಹೇಳಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಇದಕ್ಕೆ ಖುದ್ದು ಸುಮಲತಾ ಅಂಬರೀಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ: ಸ್ಪಷ್ಟನೆ ನೀಡಿದ ಸುಮಲತಾ
ದರ್ಶನ್, ಸುಮಲತಾ ಅಂಬರೀಶ್
Follow us
| Updated By: ರಮೇಶ್ ಬಿ. ಜವಳಗೇರಾ

Updated on: Apr 19, 2024 | 4:41 PM

ಉಡುಪಿ, (ಏಪ್ರಿಲ್ 19): ಮಂಡ್ಯ (Mandya) ಲೋಕಸಭಾ ಚುನಾವಣಾ (Loksabha Elections 2024) ಅಖಾಡ ರಂಗೇರುತ್ತಿದೆ. ದೋಸ್ತಿ ಅಭ್ಯರ್ಥಿಯಾಗಿ ಹೆಚ್​.ಡಿ ಕುಮಾರಸ್ವಾಮಿ (H.D Kumaraswamy) ಹಾಗೂ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಟಾರ್​ ಚಂದ್ರು (Star Chandru) ಕಣದಲ್ಲಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ರಾಜಕೀಯ ಕಾವು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರ ಮಧ್ಯೆ ಮಂಡ್ಯ ಕ್ಷೇತ್ರದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಕಾಂಗ್ರೆಸ್​ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಅವರೇ ದರ್ಶನ್ ಅವರನ್ನು ಪ್ರಚಾರಕ್ಕೆ ಕಳುಹಿಸಿದ್ದಾರೆ ಅಂತೆಲ್ಲಾ ಮಾತುಗಳು ಹರಿದಾಡುತ್ತಿವೆ. ಇದೀಗ ಇದಕ್ಕೆ ಸ್ವತಃ ಸುಮಲತಾ ಅಂಬರೀಶ್ (Sumalatha Ambaressh) ಅವರು ಸ್ಪಷ್ಟನೆ ನೀಡಿದ್ದು, ಇದರಲ್ಲಿ ಸೆನ್ಸ್ ಲಾಜಿಕ್ ಎರಡು ಇಲ್ಲ. ದರ್ಶನ್ ಅವರನ್ನ ಬೇರೆ ಪಕ್ಷದ ಪ್ರಚಾರಕ್ಕೆ ಹೋಗು ಅಥವಾ ಹೋಗಬೇಡ ಎಂದು ಹೇಳಲ್ಲ ಎಂದು ಸ್ಪಷ್ಟಪಡಿಸಿದರು.

ಉಡುಪಿಯಲ್ಲಿ ಇಂದು (ಏಪ್ರಿಲ್ 19) ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕಿ ಸುಮಲತಾ ಅಂಬರೀಶ್, ಸುಮಲತಾ ಅವರೇ ದರ್ಶನ್ ಅವರನ್ನ ಪ್ರಚಾರಕ್ಕೆ ಕಳಿಸಿದ್ದಾರೆ ಎನ್ನುವುದು ಊಹಾಪೋಹ. ಇದರಲ್ಲಿ ಸೆನ್ಸ್ ಲಾಜಿಕ್ ಎರಡು ಇಲ್ಲ. ದರ್ಶನ್ ಅವರನ್ನ ಬೇರೆ ಪಕ್ಷದ ಪ್ರಚಾರಕ್ಕೆ ಹೋಗು ಅಥವಾ ಹೋಗಬೇಡ ಎಂದು ಹೇಳಲ್ಲ. ನಾನು ನಿಂತಿದ್ದರೆ ದರ್ಶನ್ ನನ್ನ ಪರ ಪ್ರಚಾರ ಮಾಡುತ್ತಿದ್ದರು. ರಾಜಕೀಯವಾಗಿ ಬೇರೆಯವರ ಬಗ್ಗೆ ನಾವು ಪ್ರತಿದಿನ ಚರ್ಚೆ ಮಾಡಲ್ಲ ಎಂದು ಹೇಳಿದರು.

ಇದನ್ನೂ ಓದಿ: ಮಂಡ್ಯದಲ್ಲಿ ಪ್ರಚಾರಕ್ಕಿಳಿಯದ ಸುಮಲತಾ, ಕಾಂಗ್ರೆಸ್ ಅಭ್ಯರ್ಥಿ ಪರ ಚಾಲೆಜಿಂಗ್ ಸ್ಟಾರ್ ದರ್ಶನ್ ಪ್ರಚಾರ

ಪ್ರತಿದಿನ ಫೋನು ಮಾಡಿ ಎಲ್ಲಿಗೆ ಹೋಗುತ್ತಿದ್ದೀಯ? ಯಾರ ಪರ ಪ್ರಚಾರ ಮಾಡುತ್ತಿದ್ದೀಯಾ? ಎಂದು ಕೇಳಲ್ಲ. ಪ್ರಚಾರ ಯಾರ ಪರ ಮಾಡಬೇಕು ಎನ್ನುವುದು ಅವರ ಇಚ್ಛೆ. ಹೋಗು ಹೋಗಬೇಡ ಎನ್ನಲು ನಾನು ಯಾರು? ವಿಧಾನಸಭೆ ಚುನಾವಣೆಯಲ್ಲಿ ದರ್ಶನ್ ಮದ್ದೂರಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ಹಾಗೇ ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಪಾಂಡವಪುರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರಕ್ಕೆ ಹೋಗಿದ್ದರು. ಪಕ್ಷ ಮುಖ್ಯ ಅಲ್ಲ. ನಿಂತಿರುವ ವ್ಯಕ್ತಿ ಮುಖ್ಯ ಎಂದು ದರ್ಶನ್ ಹೇಳುತ್ತಾ ಬಂದಿದ್ದಾರೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು.

ವ್ಯಕ್ತಿ ನನಗೆ ಇಷ್ಟವಾದರೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಆ ರೀತಿ ದರ್ಶನ್ ನನ್ನ ಕಳಿಸುವುದಾದರೆ ನಾನ್ಯಾಕೆ ಬಿಜೆಪಿ ಸೇರಬೇಕು. ನಾನು ಪಕ್ಷೇತರ ನೇರವಾಗಿ ಸಪೋರ್ಟ್ ಮಾಡಬಹುದಲ್ವಾ. ನನಗೆ ಯಾರು ಏನು ಒತ್ತಾಯ ಮಾಡೋಕೆ ಆಗಲ್ಲ. ಈ ಪಕ್ಷಕ್ಕೆ ಸೇರು ಆ ಪಕ್ಷ ಬೇಡ ಎಂದು ಒತ್ತಡ ಮಾಡೋಕೆ ಆಗುತ್ತಿರಲಿಲ್ಲ. ನಾನು ನನ್ನ ಇಚ್ಛೆಯಿಂದ ಬಿಜೆಪಿಗೆ ಬಂದಿದ್ದೇನೆ. ಬೇರೆ ಪಕ್ಷಕ್ಕೆ ಸಪೋರ್ಟ್ ಮಾಡು ಎಂದು ಹೇಳುವ ಪ್ರಶ್ನೆ ಬರಲ್ಲ ಎಂದರು.

ಇದನ್ನೂ ಓದಿ: ದರ್ಶನ್​ಗೆ ಮಂಡ್ಯದ ರಾಜಕೀಯ ನಂಟೇನು? ಸುಮಲತಾ ಮಾನಸ ಪುತ್ರ ‘ಕೈ’ ಪರ ಅಖಾಡಕ್ಕಿಳಿದಿದ್ದೇಕೆ?

ಕುಮಾರಸ್ವಾಮಿ ಪರ ಪ್ರಚಾರ ಸುಮಲತಾ ಹೇಳಿದ್ದೇನು?

ಇನ್ನು ಇದೇ ವೇಳೆ ಕುಮಾರಸ್ವಾಮಿ ಪರ ಪ್ರಚಾರದಲ್ಲಿ ಭಾಗವಹಿಸದಿರುವ ಬಗ್ಗೆ ಮಾತನಾಡಿದ ಸುಮಲತಾ, ನಾನು ಯಾವ ರೀತಿ ಪ್ರಚಾರ ಮಾಡಬೇಕು ಎಂದು ಪಕ್ಷ ಡಿಸೈಡ್ ಮಾಡುತ್ತದೆ. ನಾನು ನಾನಾಗಿಯೇ ಎಲ್ಲಿಗೂ ಹೋಗಿಲ್ಲ. ಪಕ್ಷ ಹೇಳಿದರೆ ಕುಮಾರಸ್ವಾಮಿ ಪರ ಖಂಡಿತ ಪ್ರಚಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸುಮಲತಾ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವ ವಿಚಾರವಾಗಿ ಮಾತನಾಡಿ, ನಾನು ಸಂಸದೆ ಕಾಂಗ್ರೆಸ್​ನ ಎಂಎಲ್ಎಗಳು ಸಿಗುತ್ತಿರುತ್ತಾರೆ. ಎಲ್ಲ ಕಡೆ ಯಾವುದೇ ಸಮಾರಂಭದಲ್ಲಿ ಭೇಟಿ ಆಗಿರುತ್ತೇವೆ. ಎಲ್ಲೋ ತೆಗೆದಿರುವ ಫೋಟೋಗಳನ್ನು ಈಗ ಹಾಕಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇದು ಸಾಮಾನ್ಯ. ನನ್ನ ಚುನಾವಣೆ ವೇಳೆ ಸುಳ್ಳು ಮಾಹಿತಿ, ಸುಳ್ಳು ಪ್ರಚಾರ ಮಾಡಿದ್ದರು. ನಾನಂತೂ ಯಾರನ್ನು ಭೇಟಿ ಮಾಡಿಲ್ಲ. ಮಂಡ್ಯದಲ್ಲಿ ಒಳ್ಳೆ ರಿಸಲ್ಟ್ ಬರುತ್ತೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ