AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಲೈ 26ರಿಂದ ಬೆಂಗಳೂರು-ಮೈಸೂರು-ಮಂಗಳೂರು ನಡುವೆ ವಿಶೇಷ ರೈಲು ವ್ಯವಸ್ಥೆ

ಜುಲೈ 26ರಿಂದ ಮೈಸೂರು ಮೂಲಕ ಬೆಂಗಳೂರು- ಮಂಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ವ್ಯವಸ್ಥೆ ಕಲ್ಪಿಸಲು ನೈಋತ್ಯ ರೈಲ್ವೆ (SWR) ನಿರ್ಧರಿಸಿದೆ. ಮಳೆಯಿಂದ ಘಾಟ್​ ಸಂಪರ್ಕ ಕಡಿತಗೊಂಡಿದ್ದರೂ ಬೆಂಗಳೂರು- ಮಂಗಳೂರು ಪ್ರಯಾಣಿಕರು ರೈಲಿನ ಮೂಲಕ ಸಂಚರಿಸಬಹುದಾಗಿದೆ.

ಜುಲೈ 26ರಿಂದ ಬೆಂಗಳೂರು-ಮೈಸೂರು-ಮಂಗಳೂರು ನಡುವೆ ವಿಶೇಷ ರೈಲು ವ್ಯವಸ್ಥೆ
ಸಾಂದರ್ಭಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on: Jul 23, 2022 | 1:36 PM

Share

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ 75 (ಶಿರಾಡಿ ಘಾಟ್) ಮತ್ತು ಎನ್ಎಚ್ 276 (ಸಂಪಾಜೆ ಘಾಟ್) ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಜುಲೈ 26ರಿಂದ ಮೈಸೂರು ಮೂಲಕ ಬೆಂಗಳೂರು ಮತ್ತು ಮಂಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ವ್ಯವಸ್ಥೆ ಕಲ್ಪಿಸಲು ನೈಋತ್ಯ ರೈಲ್ವೆ (SWR) ನಿರ್ಧರಿಸಿದೆ. ಹೀಗಾಗಿ, ಘಾಟ್​ ಸಂಪರ್ಕ ಕಡಿತಗೊಂಡಿದ್ದರೂ ಬೆಂಗಳೂರು- ಮೈಸೂರು- ಮಂಗಳೂರು ಪ್ರಯಾಣಿಕರು ರೈಲಿನ ಮೂಲಕ ಸಂಚರಿಸಬಹುದಾಗಿದೆ.

ಜುಲೈ 17ರಿಂದ ಶಿರಾಡಿ ಘಾಟ್ ಮತ್ತು ಸಂಪಾಜೆ ಘಾಟ್​ ಸಂಪರ್ಕ ಕಡಿತಗೊಂಡಾಗಿನಿಂದ ಕರಾವಳಿ ಮತ್ತು ಬೆಂಗಳೂರು ನಡುವೆ ವಿಶೇಷ ರೈಲುಗಳನ್ನು ಓಡಿಸಲು ಮತ್ತು ಅಸ್ತಿತ್ವದಲ್ಲಿರುವ ರೈಲುಗಳಿಗೆ ಹೆಚ್ಚುವರಿ ಕೋಚ್‌ಗಳನ್ನು ಸೇರಿಸಲು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರೈಲ್ವೆಗೆ ಒತ್ತಾಯಿಸಿದ್ದರು. ಈ ಸಂಬಂಧ ಜುಲೈ 18ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನಳೀನ್ ಕುಮಾರ್ ಕಟೀಲ್ ಪತ್ರ ಬರೆದಿದ್ದರು.

ಇದನ್ನೂ ಓದಿ: Viral Video: ವೇಗವಾಗಿ ಬರುತ್ತಿದ್ದ ರೈಲಿನೆದುರು ಬಿದ್ದಿದ್ದ ವ್ಯಕ್ತಿಯ ಜೀವ ಉಳಿಸಿದ ರೈಲ್ವೆ ಸಿಬ್ಬಂದಿ; ಶಾಕಿಂಗ್ ವಿಡಿಯೋ ವೈರಲ್

ಜುಲೈ 22ರಂದು ಹೊರಡಿಸಲಾದ ಹೊಸ ಅಧಿಸೂಚನೆಯ ಪ್ರಕಾರ, ರೈಲು ಸಂಖ್ಯೆ 06547/548 ಬೆಂಗಳೂರು-ಮಂಗಳೂರು ಸೆಂಟ್ರಲ್ ತ್ರಿ-ಸಾಪ್ತಾಹಿಕ ವಿಶೇಷ ರೈಲು ಜುಲೈ 26ರಿಂದ ಆಗಸ್ಟ್ 31ರವರೆಗೆ ತಲಾ 16 ಟ್ರಿಪ್‌ಗಳಲ್ಲಿ ಸಂಚರಿಸಲಿದೆ. ರೈಲು ಸಂಖ್ಯೆ 06547 ಬೆಂಗಳೂರು-ಮಂಗಳೂರು ಸೆಂಟ್ರಲ್ ತ್ರಿ-ಸಾಪ್ತಾಹಿಕ ವಿಶೇಷ ರೈಲು ಭಾನುವಾರ, ಮಂಗಳವಾರ ಮತ್ತು ಗುರುವಾರದಂದು ರಾತ್ರಿ 8.30ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 9.05ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ರೈಲು ಸಂಖ್ಯೆ 16585 ಬೆಂಗಳೂರು-ಮಂಗಳೂರು ಸೆಂಟ್ರಲ್ ತ್ರಿ-ಸಾಪ್ತಾಹಿಕ ಎಕ್ಸ್‌ಪ್ರೆಸ್‌ನ ಮಾರ್ಗ ಮತ್ತು ಸಮಯ ಹೀಗಿದೆ. ಆಗಸ್ಟ್ 30ರವರೆಗೆ ಈ ರೈಲು ಮೈಸೂರಿನಿಂದ ರಾತ್ರಿ 11.15ಕ್ಕೆ ಮತ್ತು ಹಾಸನದಿಂದ ಬೆಳಿಗ್ಗೆ 1.45ಕ್ಕೆ ಹೊರಡುತ್ತದೆ. ಈ ರೈಲಿಗೆ ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಕೆಆರ್ ನಗರ, ಹೊಳೆನರಸೀಪುರ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ ಮತ್ತು ಮಂಗಳೂರು ಜಂಕ್ಷನ್‌ನಲ್ಲಿ ಸ್ಟಾಪ್ ಇರಲಿದೆ.

ಇದನ್ನೂ ಓದಿ: Gang Rape: ರೈಲ್ವೆ ನಿಲ್ದಾಣದಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಹಾಗೇ, ರೈಲು ಸಂಖ್ಯೆ 06548 ಮಂಗಳೂರು ಸೆಂಟ್ರಲ್-ಬೆಂಗಳೂರು ತ್ರಿ-ಸಾಪ್ತಾಹಿಕ ವಿಶೇಷ ರೈಲು ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಜೆ 6.35ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಮರುದಿನ ಬೆಳಿಗ್ಗೆ 6.15ಕ್ಕೆ ರೈಲು ಸಂಖ್ಯೆ 16586 ಮಂಗಳೂರು ಸೆಂಟ್ರಲ್‌ನ ಮಾರ್ಗ ಮತ್ತು ಸಮಯಗಳಲ್ಲಿ ಬೆಂಗಳೂರು ತಲುಪುತ್ತದೆ. ಬೆಂಗಳೂರು ತ್ರಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ಆಗಸ್ಟ್ 31ರವರೆಗೆ ಕಾರ್ಯ ನಿರ್ವಹಿಸಲಿದೆ. ಇದು ಹಾಸನದಿಂದ 12.40ಕ್ಕೆ ಮತ್ತು ಮೈಸೂರಿನಿಂದ 3.15ಕ್ಕೆ ಹೊರಡುತ್ತದೆ.

ಈ ವಿಶೇಷ ರೈಲು ಒಂದು 2-ಟೈರ್ ಎಸಿ, ಎರಡು 3-ಟೈರ್ ಎಸಿ, ಒಂಬತ್ತು ಸೆಕೆಂಡ್ ಕ್ಲಾಸ್ ಸ್ಲೀಪರ್, ನಾಲ್ಕು ಸೆಕೆಂಡ್ ಕ್ಲಾಸ್ ಸಿಟ್ಟಿಂಗ್ ಮತ್ತು ಎರಡು ಲಗೇಜ್-ಕಮ್-ಬ್ರೇಕ್ ವ್ಯಾನ್ ಕೋಚ್‌ಗಳನ್ನು ಒಳಗೊಂಡಿದೆ.