Teacher recruitment scam: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಯಾರೆಲ್ಲ ಭಾಗಿ? ಸಿಐಡಿ ವರದಿ ಹೇಳಿದ್ದೇನು?
ಪ್ರೌಢ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿಯಲ್ಲೂ ಅಕ್ರಮದ ವಾಸನೆ ಬಡೆದಿದ್ದು, ಸಿಐಡಿ ಈ ಸಂಗತಿಯ ಅಸಲಿ ಸತ್ಯ ಬಯಲಿಗೆಳೆಯಲು ತನಿಖೆ ಶುರು ಮಾಡಿದೆ.
ಬೆಂಗಳೂರು: ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಒಂದು ಕಡೆ ಸದ್ದು ಮಾಡುತ್ತಿದ್ದರೇ, ಹಣ ಪಡೆದ ಸರ್ಕಾರದ ಅಧಿಕಾರಿಗಳೇ ಅನರ್ಹ ಅಭ್ಯರ್ಥಿಗಳ ಅಕ್ರಮ ನೇಮಕಾತಿ ನಡೆಸುತ್ತಿರುವ ಸಂಗತಿ ಬೆಚ್ಚಿ ಬೀಳಿಸುತ್ತಿದೆ.. ಪ್ರಸ್ತುತದಲ್ಲಿ ಪ್ರತಿಭಾವಂತ ಅಭ್ಯರ್ಥಿಗಳಿಗೆ ಬೆಲೆ ಇಲ್ಲದಂತಾಗಿದ್ದು, ಹಣ ಇದ್ದವರಿಗೆ ಹಾಗೂ ದೊಡ್ಡ ದೊಡ್ಡವರ ಪ್ರಭಾವ ಹೊಂದಿದ್ದವರಿಗೆ ಅವಕಾಶ ಎನ್ನುವಂತಾಗಿದೆ.. ಈ ಮೂಲಕ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅವಕಾಶವೇ ಇಲ್ಲದಂತಾಗಿದೆ. ಇದಕ್ಕೆ ನೈಜ ಉದಾಹರಣೆ ಎಂಬಂತೆ ಜನರ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಖಾಕಿ ತೊಟ್ಟು ಸೇವೆ ಸಲಿಸುವ ಪೊಲೀಸ್ ಇಲಾಖೆಯ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ನಡೆದ ನೇಮಕಾತಿಯಲ್ಲಿ ಭಾರಿ ಅಕ್ರಮ.. ಪ್ರಕರಣ ಬೆಳಕಿಗೆ ಬಂದ ಐಪಿಎಸ್ ಹುದ್ದೆಯ ಎಡಿಜಿಪಿ ಬಂಧನವಾಗಿತ್ತು.. ಇದಾದ ನಂತರ ಈಗ ಒಂದರ ನಂತರ ಮತ್ತೊಂದರಂತೆ ಎಲ್ಲಾ ಇಲಾಖೆಗಳ ಅಕ್ರಮ ನೇಮಕಾತಿ ಸರಪಳಿಗಳು ಕಾಣೊಕೆ ಶುರುವಾಗಿದೆ. ಈ ಮೂಲಕ ಇಡಿ ಸರ್ಕಾರದ ವಿವಿಧ ಇಲಾಖೆಯಲ್ಲಿನ ಎಲ್ಲಾ ನೇಮಕಾತಿಗಳಲ್ಲೂ ಅಕ್ರಮ ನಡೆದಿರುವ ಹೊಗೆಯಾಡುತ್ತಿದೆ.
ಸರ್ಕಾರಿ ಹುದ್ದೆಗಳ ನೇಮಕಾತಿಯ ಅಕ್ರಮಗಳ ಸಂಗತಿಯ ಭಾರಿ ಚರ್ಚೆಯಲ್ಲಿ ಈಗ ಕಳೆದ ಎಂಟತ್ತು ವರ್ಷಗಳ ಹಿಂದೆ ನಡೆದಿದೆ ಎಂಬ ಪ್ರೌಢ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿಯಲ್ಲೂ ಅಕ್ರಮದ ವಾಸನೆ ಬಡೆದಿದ್ದು, ಸಿಐಡಿ ಈ ಸಂಗತಿಯ ಅಸಲಿ ಸತ್ಯ ಬಯಲಿಗೆಳೆಯಲು ತನಿಖೆ ಶುರು ಮಾಡಿದೆ. ಇನ್ನು ಬಿಜೆಪಿ ಅಧಿಕಾರವಧಿಯಲ್ಲಿ ಬೆಳಕಿಗೆ ಬಂದ ಪಿಎಸ್ ಐ ಅಕ್ರಮ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಇದಾದ ಬಳಿಕ ಈ ರೀತಿಯ ಅಕ್ರಮ ನೇಮಕಾತಿ ಕೇವಲ ಬಿಜೆಪಿ ಅಧಿಕಾರವಧಿಯಲ್ಲಷ್ಟೇ ಅಲ್ಲದೇ, ಸಿದ್ಧರಾಮಯ್ಯ ಕಾಲದಲ್ಲೂ ಅಕ್ರಮ ನಡೆದಿದೆ ಎನ್ನುವ ವಿಚಾರ ಬಯಲು ಮಾಡೊ ನಿಟ್ಟಿನಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು ಎನ್ನಲಾಗಿದೆ. ಇನ್ನು ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳಷ್ಟೇ ಅಲ್ಲದೇ, ಕೆಲ ರಾಜಕೀಯ ವ್ಯಕ್ತಿಗಳು ಭಾಗಿಯಾಗಿರೋ ಶಂಕೆ ಸಹ ಮೂಡಿದೆ.
ಎಂಟತ್ತು ವರ್ಷಗಳ ಹಿಂದೆ ನಡೆದ ಪ್ರೌಢ ಶಿಕ್ಷಣ ಇಲಾಖೆಯ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಅನ್ನೊ ವಿಚಾರದ ಅನುಮಾನಕ್ಕೆ ಕಾರಣವಾಗಿದ್ದು ವಿಜಯಪುರ ಮೂಲದ ಮಹೇಶ್ ಶ್ರೀಮಂತ ಸೂಸಲಾಡಿಯ ನೇಮಕಾತಿ. ಅರ್ಹತೆ ಇಲ್ಲದಿದ್ದರೂ ಇವರ ನೇಮಕಾತಿ ಮಾಡಿರೋ ಶಂಕೆ ಮೂಡಿತ್ತು. ಇನ್ನು ಮಹೇಶ್ ಪ್ರೌಢ ಶಿಕ್ಷಣ ಇಲಾಖೆಯ 2012-2013ರಲ್ಲಿ ನಡೆದಿದ್ದ ಸರ್ಕಾರಿ ಪ್ರೌಢ ಶಾಲೆಗಳ ಗ್ರೇಡ್ 2 ಸಹ ಶಿಕ್ಷಕರ ನೇಮಕಾತಿಯಲ್ಲಿ ನೇಮಕಗೊಂಡಿದ್ದ. ಯಾವಾಗ ಈ ರೀತಿ ಅನುಮಾನದ ಹುಳು ಹೆಚ್ಚಾಯ್ತೋ. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆ ದೂರು ನೀಡಿತ್ತು. ಪ್ರೌಢ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಧಾನಸೌಧ ಪೊಲೀಸ್ ಠಾಣೆಗೆ ಇದೇ ಆಗಸ್ಟ್ ೧೨ ರಂದು ದೂರು ನೀಡಿದ್ದರು. ಈ ಬಗ್ಗೆ ದೂರು ದಾಖಲಾಗುತಿದ್ದಂತೆ ಸರ್ಕಾರ ಈ ಕುರಿತು ತನಿಖೆ ತೀವ್ರಗೊಳಿಸುವಂತೆ ಸಿಐಡಿಗೆ ಪ್ರಕರಣ ಹಸ್ತಾಂತರಿಸಿತ್ತು.
ಈ ಸಂಬಂಧ ತನಿಖೆ ಕೈಗೊಂಡ ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ನಿರಂಜನ್ ಅಕ್ರಮ ಸಂಬಂಧ 11 ಮಂದಿ ಶಿಕ್ಷಕರನ್ನು ಬಂಧಿಸಿದ್ದಾರೆ. ಇನ್ನು ಬಂಧಿತರಲ್ಲಿ 11 ಮಂದಿ ತುಮಕೂರು ಹಾಗೂ ಓರ್ವ ವಿಜಯಪುರ ಶಿಕ್ಷಕರಾಗಿದ್ದಾರೆ. ಇನ್ನು ಬಂಧಿತ ಆ 11 ಮಂದಿ ಶಿಕ್ಷಕರುಗಳು ಯಾರು ಎಂದರೆ. ಶಮೀನಾಜ್, ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಬೋರನ ಕಣಿವೆ, ಚಿಕ್ಕನಾಯಕನಹಳ್ಳಿ. ರಾಜೇಶ್ವರಿ ಜಗ್ಲಿ, ಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ಕೊಡವತ್ತಿ, ಕುಣಿಗಲ್. ಕಮಲಾ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಅಲ್ದೂರ್, ತಿಪಟೂರು. ನಾಗರತ್ನ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ನಾಗಸಂದ್ರ ಕುಣಿಗಲ್. ದಿನೇಶ್, ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಹುಲಿಕಲ್, ತುರುವೇಕೆರೆ. ನವೀನ್ ಹನುಮಗೌಡ, ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕಮ್ಲಾಪುರ, ಚಿಕ್ಕನಾಯಕನಹಳ್ಳಿ. ನವೀನ್ ಕುಮಾರ್, ಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್, ಅಮೃತೂರು ಕುಣಿಗಲ್.. ದೇವೇಂದ್ರ ನಾಯ್ಕ್, ಶಿಕ್ಷಕರು, ಸರ್ಕಾರಿ ಕಂಪೋಸಿಟ್ ಪ್ರೌಢಶಾಲೆ ಕೆ.ಮತ್ತಿಘಟ್ಟ ಗುಬ್ಬಿ. ಹರೀಶ್ ಆರ್, ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಹೊಳಗೇರಿಪುರ, ಕುಣಿಗಲ್. ಪ್ರಸನ್ನ ಬಿಎಂ, ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಹುಲಿಕೆರೆ, ತುರುವೇಕೆರೆ.. ಮಹೇಶ ಶ್ರೀಮಂತ ಸೂಸಲಾಡಿ, ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಹತ್ತಳ್ಳಿ ಚಡಚಣ ತಾಲ್ಲೂಕು ವಿಜಯಪುರ. ಇನ್ನು ಇವರಷ್ಟೇ ಅಲ್ಲದೇ ಮತ್ತೋರ್ವ ಆರೋಪಿ ನಾಪತ್ತೆಯಾಗಿದ್ದು, ಆತನಿಗಾಗಿ ಸಿಐಡಿ ಶೋಧ ನಡೆಸುತ್ತಿದೆ.
ಅಕ್ರಮದ ವಾಸನೆ ಮೂಲಕ ಪ್ರಕರಣದ ಕೇಸ್ ಫೈಲ್ ತರಿಸಿಕೊಂಡು ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ೨೦೧೪-೧೫ನೇ ಸಾಲಿನ ಪ್ರೌಢ ಶಾಲೆಗಳ ಗ್ರೇಡ್ -2 ಸಹ ಶಿಕ್ಷಕರು ಹಾಗೈ ಗ್ರೇಡ್ -1 ದೈಹಿಕ ಶಿಕ್ಷಕರ ನೇಮಕಾತಿಯಲ್ಲೂ ಅಕ್ರಮದ ವಾಸನೆ ಬಡೆದಿತ್ತು. ಈ ಸಂಬಂಧ ಪ್ರತ್ಯೇಕ ಎರಡು ಎಫ್ಐಆರ್ಗಳನ್ನು ವಿಧಾನಸೌಧದಲ್ಲಿ ದಾಖಲಿಸಿಕೊಂಡ ಸಿಐಡಿ ನಡೆಸಿದ ತನಿಖೆಯಲ್ಲಿ ಅರ್ಹರಲ್ಲದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ 11 ಹುದ್ದೆಗಳ ಭರ್ತಿ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಈಗಾಗಲೇ ೧೧ ಮಂದಿ ಶಿಕ್ಷಕರ ಬಂಧನ ಮಾಡಿದ ಸಿಐಡಿ ತನಿಖೆ ವೇಳೆ ಮತ್ತಷ್ಟು ರೋಚಕ ಸಂಗತಿಗಳು ಬೆಳಕಿಗೆ ಬಂದಿದ್ದು, ಬಂಧಿತರಲ್ಲಿ ಓರ್ವ ಮಹಿಳೆ ಈ ಹುದ್ದೆಗೆ ಅರ್ಜಿ ಸಲ್ಲಿಸದೇ ಇದ್ದರೂ ನೇಮಕವಾಗಿರೋದು ಪತ್ತೆಯಾದ್ರೆ, ಮತ್ತೊರ್ವನ ಕಥೆಯಲ್ಲಿ ಯಾವುದೇ ರೀತಿಯ ಅರ್ಹತೆ ಇಲ್ಲದಿದ್ದರೂ ಆಯ್ಕೆಯಾಗಿರುವುದು ಎಲ್ಲರ ಉಬ್ಬೇರುವಂತೆ ಮಾಡಿದೆ.
ಪ್ರೌಢ ಶಿಕ್ಷಣ ಇಲಾಖೆಯ ನೇಮಕಾತಿಯಲ್ಲಿ ನಡೆದಿರೋ ಈ ಅಕ್ರಮದ ಬಗ್ಗೆ ಸದ್ಯ ಸಿಕ್ಕರುವುದು ಪ್ರಾಥಮಿಕ ಸಂಗತಿಗಳು. ಇದರ ಹಿಂದಿನ ಮಾಸ್ಟರ್ ಮೈಂಡ್ ಯಾರು. ಇವರು ಯಾವ ರೀತಿ ಅಕ್ರಮವಾಗಿ ನೇಮಕಾತಿ ಪ್ರಕ್ರಿಯೆ ಮಾಡಿದ್ದರೂ. ಅದರಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ್ಯಾರ್ಯಾರು ಅನ್ನೊದು ಸಿಐಡಿಯ ತನಿಖೆ ವೇಳೆ ಬಹಿರಂಗವಾಗಲಿದೆ. ಸಿಐಡಿ ಸದ್ಯ ನೇಮಕಗೊಂಡ ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ. ಅದರೇ ಇದು ಇಷ್ಟಕ್ಕೆ ನಿಂತಿಲ್ಲ. ಪ್ರೌಢ ಶಿಕ್ಷಣ ಇಲಾಖೆಯ ನೇಮಕಾತಿ ವಿಭಾಗದಲ್ಲಿದ್ದುಕೊಂಡು ಅಕ್ರಮ ಎಸಗಿದ ಆ ಅಧಿಕಾರಿಗಳ್ಯಾರ್ಯಾರು ಅನ್ನೊ ಬಗ್ಗೆ ಸಿಐಡಿ ವಿಚಾರಣೆ ಆರಂಭಿಸಿದ್ದಾರೆ. ಇನ್ನು ಈ ಅಕ್ರಮ ನೇಮಕಾತಿಯಲ್ಲಿ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳು, ರಾಜಕಾರಣಿಗಳು, ಪ್ರೌಢ ಶಿಕ್ಷಣ ಶಿಕ್ಷಕರ ನೇಮಕಾತಿ ವಿಭಾಗದ ಕೆಲವರು ಭಾಗಿ ಆಗಿದ್ದಾರೆ ಎನ್ನಲಾಗಿದೆ. ಈಗಿನ್ನು ಅಕ್ರಮದ ಕೋಟೆಯ ಪ್ರಾಥಮಿಕ ಸಂಗತಿ ಬಯಲಿಗೆಳೆದಿರುವ ಸಿಐಡಿ, ಪ್ರಕರಣ ಸಂಬಂಧ ಶೀಘ್ರದಲ್ಲೇ ಮತ್ತಷ್ಟು ಸ್ಪೋಟಕ ಸಂಗತಿಗಳು ಹಾಗೂ ಉನ್ನತ ಹುದ್ದೆಯಲ್ಲಿರೋ ಮತ್ತಷ್ಟು ಭ್ರಷ್ಟ ಅಧಿಕಾರಿಗಳ, ರಾಜಕಾರಣಿಗಳ ಮುಖವಾಡ ಕಳಚಿಡಲಿದೆ.
ವರದಿ: ಜಗದೀಶ ಬಸವರಾಜು, ಟಿವಿ9