ಟೆಂಡರ್ ಗೋಲ್ ಮಾಲ್: ಬಿಬಿಎಂಪಿ ಆರೋಗ್ಯಾಧಿಕಾರಿ ವಿರುದ್ಧ ಲಕ್ಷಾಂತರ ರೂ. ವಂಚನೆ ಆರೋಪ
ಕೋವಿಡ್ ವೇಳೆ ಸ್ಲಾಬ್ ಕಲೆಕ್ಷನ್, ಏರಿಯಾಗಳ ಸ್ವಚ್ಚತೆ, ಸಾರ್ವಜನಿಕ ಸ್ಥಳಗಳ ನಿರ್ವಹಣೆ ಸೇರಿ ಹಲವು ಕಾಮಗಾರಿಗಳಲ್ಲಿ ಅಕ್ರಮ ನಡೆದ ಬಗ್ಗೆ ಆರೋಪ ಕೇಳಿಬರುತ್ತಿದೆ. ಇತ್ತ ಲೋಕಾಯುಕ್ತ ಹಾಗೂ ಬಿಎಂಟಿಎಫ್ನಲ್ಲೂ ದೂರು ದಾಖಲಾಗಿದೆ. ಆರೋಗ್ಯಾಧಿಕಾರಿ ಮೇಲೆ ಕೇಳಿಬಂದಿರುವ ಆರೋಪಕ್ಕೆ ಪಾಲಿಕೆ ಆಯುಕ್ತರು ಯಾವ ಕ್ರಮ ಕೈಗೊಳ್ಳುತ್ತಾರೆ ನೋಡಬೇಕಿದೆ.
ಬೆಂಗಳೂರು, ಅಕ್ಟೋಬರ್ 04: ಇತ್ತೀಚೆಗಷ್ಟೇ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಕಾಮಗಾರಿಗಳ ಬಿಲ್ ಬಗ್ಗೆ ತನಿಖೆ ನಡೆಸೋಕೆ ಬಿಬಿಎಂಪಿ (bbmp) ಕಮಿಟಿ ರಚಿಸಿತ್ತು. ಕಾಮಗಾರಿಗಳ ಅಕ್ರಮ ತನಿಖೆಗೆ ಕಮಿಟಿ ರಚಿಸಿ ಸ್ವಲ್ಪ ದಿನ ಕಳೆಯುವಷ್ಟರಲ್ಲೇ ಪಾಲಿಕೆಯಲ್ಲಿ ಮತ್ತೊಂದು ಹಗರಣದ ಹೊಗೆಯಾಡುತ್ತಿದೆ. ಕೋವಿಡ್ ವೇಳೆ ಬಿಬಿಎಂಪಿಯ ಆರೋಗ್ಯಾಧಿಕಾರಿ ಟೆಂಡರ್ನಲ್ಲಿ ಗೋಲ್ ಮಾಲ್ ಮಾಡಿರುವ ಆರೋಪ ಕೇಳಿಬಂದಿದೆ. ಪಾಲಿಕೆಯ ಆರೋಗ್ಯಾಧಿಕಾರಿಯೊಬ್ಬರು ತಮ್ಮ ಮಗನ ಹೆಸರಲ್ಲಿ ಟೆಂಡರ್ ಮಾಡಿಸಿ ನಕಲಿ ದಾಖಲೆ ಸೃಷ್ಟಿಸಿ ಬಿಲ್ ಪಡೆದಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಬಿಬಿಎಂಪಿ ಆರೋಗ್ಯಾಧಿಕಾರಿ ಮೇಲೆ ಅಕ್ರಮ ಆರೋಪ
ಬಿಬಿಎಂಪಿಯಲ್ಲಿ ಸದಾ ಒಂದಿಲ್ಲೊಂದು ಹಗರಣ, ಅಕ್ರಮಗಳು ಹೊಗೆಯಾಡುತ್ತಿರುತ್ತದೆ. ಒಂದಿಲ್ಲೊಂದು ಕಾಮಗಾರಿಯಲ್ಲಿ ಆಗಾಗ ಕೇಳಿಬರ್ತಿದ್ದ ಅಕ್ರಮದ ಘಾಟು ಇದೀಗ ಪಾಲಿಕೆಯ ಆರೋಗ್ಯಾಧಿಕಾರಿ ಮೇಲೂ ಕೇಳಿಬಂದಿದೆ. ಬಿಬಿಎಂಪಿ ಆರೋಗ್ಯಾಧಿಕಾರಿ ಡಾ. ಸವಿತಾ ಮೇಲೆ ಅಕ್ರಮದ ಆರೋಪ ಕೇಳಿಬಂದಿದೆ. ಬೊಮ್ಮನಹಳ್ಳಿ, ಆರ್.ಆರ್.ನಗರ ವಲಯದಲ್ಲಿ ಕೋವಿಡ್ ವೇಳೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಇದನ್ನೂ ಓದಿ: ಇನ್ಮುಂದೆ ಇ-ಖಾತಾ ಪಡೆಯುವುದು ಬಲು ಸುಲಭ: ಇಲ್ಲಿದೆ ಹಂತ ಹಂತದ ಮಾಹಿತಿ
ಸದ್ಯ ಪೂರ್ವ ವಲಯದ ಆರೋಗ್ಯಾಧಿಕಾರಿಯಾಗಿರುವ ಡಾ.ಸವಿತಾ, ಈ ಹಿಂದೆ ಆರ್.ಆರ್.ನಗರ, ಬೊಮ್ಮನಹಳ್ಳಿ, ಯಲಹಂಕ ವಲಯದಲ್ಲಿ ಹಲವು ಕೆಲಸಗಳ ಟೆಂಡರ್ ನೀಡಿದ್ದರು. ಈ ವೇಳೆ ಖಾಸಗಿ ಕಾಲೇಜೊಂದರಲ್ಲಿ ಪ್ರಾಧ್ಯಾಪಕ ಕೆಲಸ ಮಾಡುತ್ತಿದ್ದ ತಮ್ಮ ಪುತ್ರ ಚಿರಾಗ್ ಹೆಸರಲ್ಲಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ಕೆಲಸ ಮಾಡಿಸಿರೋದಾಗಿ ದೂರುದಾರರು ಆರೋಪ ಮಾಡ್ತಿದ್ದಾರೆ. ಇತ್ತ ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ಹಣ ಹಾಗೂ 1 ಕೋಟಿಗೂ ರೂ. ಹೆಚ್ಚು ನಿರ್ವಹಣಾ ವೆಚ್ಚದ ಬಿಲ್ ಪಡೆಯಲಾಗಿದೆ ಅಂತಾ ದೂರುದಾರರು ಆರೋಪಿಸಿದ್ದು, ಈ ಬಗ್ಗೆ ಲೋಕಾಯುಕ್ತ ಹಾಗೂ ಬಿಎಂ ಟಿಎಫ್ಗೆ ದೂರು ನೀಡಲಾಗಿದೆ.
ಸದ್ಯ ಈ ಆರೋಪಗಳ ಮಧ್ಯೆ ಬಿಬಿಎಂಪಿ ಹೆಲ್ತ್ ಇನ್ಸ್ ಪೆಕ್ಟರ್ ಜೊತೆ ಡಾ.ಸವಿತಾ ನಡೆಸಿದ್ದು ಎನ್ನಲಾದ ಮಾತುಕತೆಯ ಆಡಿಯೋ ಕೂಡ ವೈರಲ್ ಆಗಿದ್ದು, ವರ್ಗಾವಣೆ ಹಾಗೂ ಹಣದ ವ್ಯವಹಾರದ ಬಗ್ಗೆ ಮಾತಾಡಿರುವ ಆಡಿಯೋವನ್ನ ದೂರುದಾರರು ಹರಿಬಿಟ್ಟಿದ್ದಾರೆ. ಇತ್ತ ಪ್ರಕರಣದ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಾ ಅಂತಾ ಪಾಲಿಕೆ ಆಯುಕ್ತರನ್ನ ಕೇಳಿದರೆ ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ದೊಡ್ಡ ಮಟ್ಟದ ಅಧಿಕಾರಿಯಾಗಿರೋದರಿಂದ ಸರ್ಕಾರವೇ ಈ ಬಗ್ಗೆ ತನಿಖೆ ಮಾಡುತ್ತೆ ಅಂತಾ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಟಿವಿ9 ಅಭಿಯಾನದ ಬೆನ್ನಲ್ಲೆ ಎಚ್ಚೆತ್ತ ಬಿಬಿಎಂಪಿ: ಬೆಂಗಳೂರಿನ ಬೀದಿನಾಯಿಗಳಿಗೆ ಮೈಕ್ರೋಚಿಪ್ ಅಳವಡಿಕೆಗೆ ಪಾಲಿಕೆ ಸಜ್ಜು
ಕೋವಿಡ್ ವೇಳೆ ಸ್ಲಾಬ್ ಕಲೆಕ್ಷನ್, ಏರಿಯಾಗಳ ಸ್ವಚ್ಚತೆ, ಸಾರ್ವಜನಿಕ ಸ್ಥಳಗಳ ನಿರ್ವಹಣೆ ಸೇರಿ ಹಲವು ಕಾಮಗಾರಿಗಳಲ್ಲಿ ಅಕ್ರಮ ನಡೆದ ಬಗ್ಗೆ ಆರೋಪ ಕೇಳಿಬರ್ತಿದೆ. ಇತ್ತ ಲೋಕಾಯುಕ್ತ ಹಾಗೂ ಬಿಎಂಟಿಎಫ್ ನಲ್ಲೂ ದೂರು ದಾಖಲಾಗಿದ್ದು, ಆರೋಗ್ಯಾಧಿಕಾರಿ ಮೇಲೆ ಕೇಳಿಬಂದಿರೋ ಆರೋಪಕ್ಕೆ ಪಾಲಿಕೆ ಆಯುಕ್ತರು ಯಾವ ಕ್ರಮ ಕೈಗೊಳ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.