ಅಂದು ಸಿಕ್ಕ ಆ ಒಂದು ಚಾನ್ಸ್ನಲ್ಲಿ ಬಂಡೆಮಠ KHB ಬಡಾವಣೆ ಈಗ ಫುಲ್ ಚೇಂಜ್: ಸುರೇಶ್ ಕುಮಾರ್ ಸಂತಸ
ಇಂದು ಆ ಬಂಡೆ ಮಠ ಕೆಎಚ್ಬಿ ಬಡಾವಣೆಯ ಸದಸ್ಯರೊಂದಿಗೆ ನಡೆದ ಸಂವಾದ ಅತ್ಯಂತ ಆರೋಗ್ಯಕರವಾಗಿತ್ತು. ನಾನು ಸಹ ಕಾಮಗಾರಿಯನ್ನು ವೀಕ್ಷಿಸಿದೆ. ನನಗೂ ಈ ನಾಗರಿಕರ ಮನವಿಗೆ ಪೂರಕ ಕಾರ್ಯ ನಮ್ಮ ಅರ್ಜಿ ಸಮಿತಿಯಿಂದ ಯಶಸ್ವಿಯಾಗಿ ಪೂರ್ಣಗೊಂಡಿರುವುದು ಸಂತಸ ಎಂದು ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರು, ಮೇ 10: ವಿಧಾನಸಭೆಯ ಅರ್ಜಿಗಳ ಸಮಿತಿ ಸದಸ್ಯರು ಹಾಗೂ ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ (S.Suresh Kumar) ಇಂದು ಕೆಂಗೇರಿ ಮತ್ತು ಬಂಡೇಮಠ ಕೆ.ಎಚ್.ಬಿ. ಬಡಾವಣೆಗೆ ಸೌಹಾರ್ದ ಭೇಟಿ ನೀಡಿದರು. ತಮ್ಮ ಬಡಾವಣೆಯನ್ನು ಬಿಬಿಎಂಪಿಗೆ ಹಸ್ತಾಂತರ, ರಸ್ತೆ, ನೀರು, ಬೀದಿ ದೀಪ, ಉದ್ಯಾನ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಸ್ಥಳೀಯ ಸಂಸ್ಥೆಗೆ ಆದೇಶಿಸಬೇಕು ಎಂದು ಕೋರಿ ಬಡಾವಣೆಯ ನಾಗರಿಕರು ಭರವಸೆ ಸಮಿತಿ ಹಂಗಾಮಿ ಅಧ್ಯಕ್ಷರಾಗಿದ್ದ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು.
ಅರ್ಜಿಗಳ ಸಮಿತಿಯಲ್ಲಿ ಸುರೇಶ್ ಕುಮಾರ್ ಅವರೇ ಹಂಗಾಮಿ ಅಧ್ಯಕ್ಷರಾಗಿದ್ದಾಗ, ಅವರ ಆದೇಶದಂತೆ ಕೆ.ಎಚ್.ಬಿ. ಬಡಾವಣೆ ಅಭಿವೃದ್ಧಿಗಾಗಿ 10 ಕೋಟಿ ರೂ. ಬಿಬಿಎಂಪಿಗೆ ನೀಡುವ ಮೂಲಕ ಬಡಾವಣೆ ಹಸ್ತಾಂತರವಾಗಿತ್ತು. ಈಗ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಬಂಡೇಮಠ ಕೆ.ಎಚ್.ಬಿ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮತ್ತು ಬಡಾವಣೆಯ ಪತ್ರಕರ್ತರು ಸುರೇಶ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿ ಆತ್ಮೀಯವಾಗಿ ಸನ್ಮಾನಿಸಿದ್ದಾರೆ.
ಇದನ್ನೂ ಓದಿ: Bangalore News: ಮೂಲಸೌಕರ್ಯಕ್ಕಾಗಿ ಬಂಡೇಮಠ ಕೆಎಚ್.ಬಿ. ನಿವಾಸಿಗಳ ಪ್ರತಿಭಟನೆ; ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿಗೆ ಒತ್ತಾಯ
ಸಂಘದ ಅಧ್ಯಕ್ಷ ವಕೀಲ ಬಿ. ರಾಮಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ತುರುವೇಕೆರೆ ಸತೀಶ್, ಉಪಾಧ್ಯಕ್ಷ ಮೋಹನ್ ಕುಮಾರ್, ಖಜಾಂಚಿ ಉಮೇಶ್ ಹಿರೇಮಠ್ ಹಾಗೂ ಪತ್ರಕರ್ತ ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಕುರಿತಾಗಿ ಸುರೇಶ್ ಕುಮಾರ್ ಅವರು ಸೋಶಿಯಲ್ ಮೀಡಿಯಾ ಮಾಹಿತಿ ಹಂಚಿಕೊಂಡಿದ್ದು, ಇಂದು ಸಂತಸ ಹಾಗೂ ತೃಪ್ತಿ ಕೊಟ್ಟ ಕಾರ್ಯ ಇದು. ಸುಮಾರು ಎರಡುವರೆ ವರ್ಷಗಳ ಹಿಂದೆ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಂಡೆಮಠ ಕೆಎಚ್ಬಿ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನನ್ನನ್ನು ಬಂದು ಭೇಟಿ ಮಾಡಿದ್ದರು. 2005 ರಲ್ಲಿ ಧರಂ ಸಿಂಗ್ ರವರು ಮುಖ್ಯಮಂತ್ರಿಗಳಾಗಿದ್ದ, ಅಂಜನಮೂರ್ತಿ ಯವರು ವಸತಿ ಸಚಿವರಾಗಿದ್ದಾಗ, ಸುಮಾರು 500 ನಿವೇಶನಗಳನ್ನು ಈ ಹಂಚಿಕೆದಾರರಿಗೆ ಕರ್ನಾಟಕ ಹೌಸಿಂಗ್ ಬೋರ್ಡ್ ವತಿಯಿಂದ ಹಂಚಿಕೆ ಮಾಡಲಾಗಿತ್ತು.
ಈ ಸದಸ್ಯರು ನನ್ನನ್ನು ಬಂದು ಭೇಟಿ ಮಾಡಿದಾಗ ಆಗಾಗಲೇ ಸುಮಾರು 17 ವರ್ಷ ಕಳೆದಿತ್ತು. ಯಾವುದೇ ಅಭಿವೃದ್ಧಿ ಕಾಣದ ಬಡಾವಣೆ ಅದಾಗಿತ್ತು. ಹೇಗಾದರೂ ಮಾಡಿ ಇದನ್ನು ಬಿಬಿಎಂಪಿ ವ್ಯಾಪ್ತಿಗೆ ಕೊಡಿಸಬೇಕು ಎಂಬುದು ಅವರ ಪ್ರಮುಖ ಅಹವಾಲಾಗಿತ್ತು. ವಿಧಾನಮಂಡಲದಲ್ಲಿ ಅರ್ಜಿಗಳ ಸಮಿತಿ ಎಂಬುದೊಂದಿದೆ. ವಿಧಾನ ಪರಿಷತ್ತಿಗೆ ಮತ್ತು ವಿಧಾನಸಭೆಗೆ ಪ್ರತ್ಯೇಕ ಅರ್ಜಿ ಸಮಿತಿಗಳು ಇವೆ. ವಿಧಾನಸಭೆಯ ಅರ್ಜಿ ಸಮಿತಿಗೆ, ವಿಧಾನಸಭೆಯ ಉಪಸಭಾಧ್ಯಕ್ಷರು ಅಧ್ಯಕ್ಷರಾಗಿರುತ್ತಾರೆ. ನಾನು ಆ ಸಮಿತಿಯ ಸದಸ್ಯ ಆಗಿದ್ದರಿಂದ ನನ್ನನ್ನು ಬಂದು ಈ ಬಡಾವಣೆಯ ಸದಸ್ಯರು ಭೇಟಿ ಮಾಡಿದ್ದು, ಎಲ್ಲಾ ಇಲಾಖೆಗಳಿಗೂ ಭೇಟಿ ಮಾಡಿ ತಮ್ಮ ಸಮಸ್ಯೆ ನಿವಾರಣೆಗೆ ಪ್ರಯತ್ನಪಟ್ಟು ಕೊನೆಯದಾಗಿ ನಮ್ಮ ಸಮಿತಿಯ ಬಾಗಿಲು ತಟ್ಟಿದ್ದರು.
ಇದನ್ನೂ ಓದಿ: ರಾಮನಗರದಲ್ಲಿ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ
ಕರ್ನಾಟಕ ಗೃಹ ಮಂಡಳಿ ತನ್ನ ಈ ಬಡಾವಣೆಯನ್ನು ಹಸ್ತಾಂತರಗೊಳಿಸಲು ಸಿದ್ಧವಿದ್ದರೂ ಬಿಬಿಎಂಪಿ ಹಸ್ತಾಂತರ ಮಾಡಿಕೊಳ್ಳಲು ಅನ್ಯಾನ್ಯ ಕಾರಣಗಳಿಗಾಗಿ ಒಪ್ಪುತ್ತಿರಲಿಲ್ಲ. ನನ್ನನ್ನು ಈ ತಂಡ ಭೇಟಿ ಮಾಡಿದ ಮೇಲೆ ಪರಿಸ್ಥಿತಿ ಪರಿಶೀಲಿಸಲು ನಾನೂ ಖುದ್ದಾಗಿ ಒಮ್ಮೆ ಆ ಪ್ರದೇಶಕ್ಕೆ ಭೇಟಿ ನೀಡಿದೆ. ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳಿಂದ (ಓಡಾಡಲು ರಸ್ತೆ ಸರಿ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲವೇ ಇಲ್ಲ, ಬೀದಿ ದೀಪಗಳು ಇಲ್ಲ ಇತ್ಯಾದಿ) ವಂಚಿತವಾದ ಸನ್ನಿವೇಶ ಕಂಡು ದಂಗಾದೆ. ಹಾವುಗಳು ಹರಿದಾಡುವ ವಾತಾವರಣದಲ್ಲಿ ರಸ್ತೆ ದೀಪಗಳಿಲ್ಲದೆ, ಸರಿಯಾದ ರಸ್ತೆಗಳೂ ಇಲ್ಲದೆ ಅಲ್ಲಿ ವಾಸ ಮಾಡುತ್ತಿದ್ದ ನಾಗರಿಕರ ಸ್ಥಿತಿ ನೋಡಿ ಬೇಸರ ವಾಯಿತು. ಅದೂ KHB ಹೇಳಿದ ಹಣ ಪಾವತಿ ಮಾಡಿ ನಿವೇಶನ ಕೊಂಡ ಹಂಚಿಕೆದಾರರ ಪಾಡು ಇದು. ವಿಧಾನಸೌಧದ ಕೇವಲ 25 km ದೂರದ, ಬಿಬಿಎಂಪಿ ವಾರ್ಡ್ ಒಂದರ ವ್ಯಾಪ್ತಿಯ, ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಕೇವಲ 1 km ದೂರವಿರುವ ಬಡಾವಣೆಯ ಪರಿಸ್ಥಿತಿ ಇದಾಗಿತ್ತು.
ಆ ನಾಗರಿಕರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ಕೊಟ್ಟು, ಆ ಅರ್ಜಿಯನ್ನು ನಮ್ಮ ಸಮಿತಿಯ ಅಧ್ಯಕ್ಷರ ಮೂಲಕ ಸಭಾಧ್ಯಕ್ಷರಿಗೆ ನೀಡಿ ಅವರ ಅನುಮತಿ ತೆಗೆದುಕೊಂಡು ಸಮಿತಿಯಲ್ಲಿ ಚರ್ಚೆ ಮತ್ತು ಪರಿಶೀಲನೆಗೆ ತೆಗೆದುಕೊಳ್ಳಲಾಯಿತು. ಅದೇ ವೇಳೆಗೆ ಆಗಿದ್ದ ಉಪ ಸಭಾಧ್ಯಕ್ಷರು ಅರ್ಥಾತ್ ನಮ್ಮ ಅರ್ಜಿ ಸಮಿತಿಯ ಅಧ್ಯಕ್ಷರು ಹಠಾತ್ ನಿಧನರಾದದ್ದರಿಂದ ನನ್ನನ್ನು ಹಂಗಾಮಿ ಅಧ್ಯಕ್ಷನನ್ನಾಗಿ ಮಾಡಲಾಯಿತು.
ನಮ್ಮ ಸಮಿತಿಯ ಮುಂದೆ ಕರ್ನಾಟಕ ಗೃಹ ಮಂಡಳಿ ಆಯುಕ್ತರು, ಬಿಬಿಎಂಪಿ ಆಯುಕ್ತರು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಇನ್ನಿತರ ಅಧಿಕಾರಿಗಳನ್ನು ಕರೆಸಿ, ಆ ಬಡಾವಣೆಯ ನಿವಾಸಿಗಳನ್ನು ಕರೆಸಿ, ಈ ವಿಷಯವನ್ನು ಚರ್ಚಿಸಲಾಯಿತು. ಎರಡು ಮೂರು ಸಭೆಗಳಲ್ಲಿ ತೀವ್ರ ಚರ್ಚೆ ಆದ ನಂತರ ಕರ್ನಾಟಕ ಗೃಹ ಮಂಡಳಿ ₹ 10 ಕೋಟಿ ಕೊಟ್ಟರೆ ತಾನು ಆ ಬಡಾವಣೆಯನ್ನು ಸುಪರ್ದಿಗೆ ತೆಗೆದುಕೊಂಡು ಅಭಿವೃದ್ಧಿಗೊಳಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು. ಸಮಿತಿಯ ಸಲಹೆ ಮೇರೆಗೆ ಗೃಹ ಮಂಡಳಿ ಆ ಹಣವನ್ನು ಪಾವತಿ ಮಾಡಲು ಒಪ್ಪಿಗೆ ನೀಡಿತು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ರಾಕೇಶ್ ಸಿಂಗ್ ರವರು ಈ ಹಸ್ತಾಂತರ ಕಾರ್ಯ ಅನುಷ್ಠಾನಗೊಳಿಸಲು ಜವಾಬ್ದಾರಿ ಹೊತ್ತರು. ಅದೇ ರೀತಿ ಕಳೆದ ವರ್ಷ ಗೃಹ ಮಂಡಳಿ ₹ 10 ಕೋಟಿ ರೂ. ಹಣವನ್ನು ಬಿಬಿಎಂಪಿಗೆ ವರ್ಗಾಯಿಸಿ, ಬಿಬಿಎಂಪಿಗೆ ಈ ಬಡಾವಣೆಯನ್ನು ಹಸ್ತಾಂತರಗೊಳಿಸಿತು.
ಇದೀಗ ರಸ್ತೆಗಳ ಕಾಮಗಾರಿ ಕೆಲಸ ಪ್ರಾರಂಭವಾಗಿದೆ. ಆ ಬಡಾವಣೆಯ ನಿವಾಸಿಗಳು ಅತ್ಯಂತ ಸಂತಸದಿಂದ ಇಂದು ನನಗೆ ಆ ಪ್ರದೇಶಕ್ಕೆ ಭೇಟಿ ನೀಡಲು ಆಹ್ವಾನ ನೀಡಿದ್ದರು. “ಗೃಹಮಂಡಳಿಯಿಂದ, ಬಿಬಿಎಂಪಿಗೆ ಈ ಪ್ರದೇಶ ವರ್ಗಾವಣೆ ತಮ್ಮ ಮೊಮ್ಮಕ್ಕಳ ಕಾಲಕ್ಕೆ ಆಗಬಹುದು” ಎಂಬ ತೀವ್ರ ನಿರಾಶೆಯಿಂದ ಕೂಡಿದ್ದ ಈ ನಾಗರಿಕರು ಅರ್ಜಿ ಸಮಿತಿಯ ಎರಡು-ಮೂರು ಸಭೆಗಳಿಂದ ಈ ರೀತಿ ಮಾರ್ಪಾಡು ಆಗುತ್ತದೆ, ತಮ್ಮ ಬಡಾವಣೆಯಲ್ಲಿ ಕಾಮಗಾರಿ ಪ್ರಾರಂಭವಾಗುತ್ತದೆ ಎಂಬುದನ್ನು ಕಂಡು ಅತ್ಯಂತ ಸಂತಸಪಟ್ಟಿದ್ದಾರೆ. ಸಮಾಧಾನ ಪಟ್ಟಿದ್ದಾರೆ.
ಇಂದು ಆ ಬಂಡೆ ಮಠ KHB ಬಡಾವಣೆಯ ಸದಸ್ಯರೊಂದಿಗೆ ನಡೆದ ಸಂವಾದ ಅತ್ಯಂತ ಆರೋಗ್ಯಕರವಾಗಿತ್ತು. ನಾನು ಸಹ ಕಾಮಗಾರಿಯನ್ನು ವೀಕ್ಷಿಸಿದೆ. ನನಗೂ ಈ ನಾಗರಿಕರ ಮನವಿಗೆ ಪೂರಕ ಕಾರ್ಯ ನಮ್ಮ ಅರ್ಜಿ ಸಮಿತಿಯಿಂದ ಯಶಸ್ವಿಯಾಗಿ ಪೂರ್ಣಗೊಂಡಿರುವುದು ಸಂತಸ ಎಂದು ಬರೆದುಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.