AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾವಳಿಗೆ ಪ್ರತ್ಯೇಕ ಪ್ರವಾಸ ನೀತಿ ರೂಪಿಸುವ ಚಿಂತನೆ ಇದೆ: ಡಿಕೆ ಶಿವಕುಮಾರ್

ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಿದ ನಂತರವೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಚಿಂತನೆ ನಡೆಸುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಕುಂದಾಪುರ ಕನ್ನಡ ಪ್ರತಿಷ್ಠಾನದ ಮನವಿಗೆ ಪ್ರತಿಕ್ರಿಯಿಸಿ ಅವರು ಈ ಭರವಸೆ ನೀಡಿದ್ದು, 340 ಕಿ.ಮೀ. ಉದ್ದದ ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುವ ಯೋಜನೆಯನ್ನೂ ಘೋಷಿಸಿದ್ದಾರೆ. ಯೋಗರಾಜ್ ಭಟ್ ಅವರಿಗೆ "ಊರ ಗೌರವ" ಪುರಸ್ಕಾರ ನೀಡಲಾಯಿತು.

ಕರಾವಳಿಗೆ ಪ್ರತ್ಯೇಕ ಪ್ರವಾಸ ನೀತಿ ರೂಪಿಸುವ ಚಿಂತನೆ ಇದೆ: ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್​
ವಿವೇಕ ಬಿರಾದಾರ
|

Updated on:Jul 27, 2025 | 9:35 PM

Share

ಬೆಂಗಳೂರು, ಜುಲೈ 27: ಕುಂದಾಪುರವನ್ನು (Kundapura) ಪ್ರವಾಸಿ ಕೇಂದ್ರವಾಗಿಸುವುದಕ್ಕೆ ಆದ್ಯತೆ ನೀಡಿ ಬಳಿಕ ಆ ಪ್ರದೇಶಕ್ಕೆ ವಿಮಾನ ನಿಲ್ದಾಣ ನಿರ್ಮಾಣ ಕುರಿತು ಚಿಂತನೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಭರವಸೆ ನೀಡಿದರು.

ಬೆಂಗಳೂರಿನ ʼಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.)ʼ ಬೆಂಗಳೂರಿನಲ್ಲಿ ಹಮ್ಮಿಕೊಂಡ ಎರಡು ದಿನಗಳ “ಕುಂದಾಪ್ರ ಕನ್ನಡ ಹಬ್ಬ-2025″ರ ಸಮಾರೋಪ ಸಮಾರಂಭ ದಿನವಾದ ಭಾನುವಾರ ಅವರು ಮಾತನಾಡಿದರು. ಇದೇ ವೇಳೆ ಖ್ಯಾತ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಡಿಸಿಎಂ ಸಮ್ಮುಖದಲ್ಲಿ ʼಊರ ಗೌರವʼ ಎನ್ನುವ ವಿಶೇಷ ಪುರಸ್ಕಾರ ಮಾಡಲಾಯಿತು.

‘ಕುಂದಾಪುರಕ್ಕೆ ಒಂದು ಸುಸಜ್ಜಿತ ಕುಂದಾಪ್ರ ಭವನ, ಒಂದು ವೈದ್ಯಕೀಯ ಕಾಲೇಜು ಹಾಗೂ ಕುಂದಾಪ್ರ ಸಮೀಪದ ಬೈಂದೂರಿನಲ್ಲಿ ಒಂದು ವಿಮಾನ ನಿಲ್ದಾಣ ಆಗಬೇಕು’ ಎಂದು ‘ಕುಂದಾಪುರ ಕನ್ನಡ ಪ್ರತಿಷ್ಠಾನ’ ಸರ್ಕಾರಕ್ಕೆ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿದ ಡಿಸಿಎಂ, “340 ಕಿ.ಮೀ. ಉದ್ದದ ಕರಾವಳಿಗೆ ಪ್ರತ್ಯೇಕ ಪ್ರವಾಸ ನೀತಿ ರೂಪಿಸುವ ಚಿಂತನೆ ಸರ್ಕಾರಕ್ಕಿದೆ, ಈ ನೀತಿ ಜಾರಿ ಬಳಿಕ ವಿಮಾನ ನಿಲ್ದಾಣದ ಬಗ್ಗೆ ಚಿಂತಿಸೋಣ” ಎಂದರು. ಅಲ್ಲದೆ ‘ಅದಕ್ಕೂ ಮುನ್ನ ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸಲಾಗುವುದು’ ಎಂದರು.

“ನಾನು ಯಾವತ್ತೂ ಇಷ್ಟೊತ್ತು ಕೂತವನಲ್ಲ. ನಿಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ, ಒಗ್ಗಟ್ಟು ನೋಡಿ ಒಂದು ಗಂಟೆ ಕೂತಿದ್ದೇನೆ. ನೆಲ-ಭಾಷೆ-ಸಂಸ್ಕೃತಿ ಉಳಿಸುತ್ತಿರುವ ನಿಮಗೆ ಸಾಷ್ಟಾಂಗ ನಮಸ್ಕಾರಗಳು. ನೀವು ಇಷ್ಟೊಂದು ಜನರನ್ನು ಒಟ್ಟು ಸೇರಿಸಿ ಕರ್ನಾಟಕದ ಹೃದಯ ಭಾಗದಲ್ಲಿ ಇದ್ದೀವಿ ಅಂತ ತೋರಿಸಿದ್ದೀರಿ. ಬಿಬಿಎಂಪಿ ಐದು ಭಾಗ ಮಾಡಿದಾಗ ಕೆಲವರು ಆಕ್ಷೇಪಿಸಿದ್ದರು, ಆದರೆ ಇದು ಕರ್ನಾಟಕದ ಹೃದಯ ಭಾಗ. ದಕ್ಷಿಣಕನ್ನಡ, ಉಡುಪಿ ಸೇರಿ ಎಲ್ಲ ಭಾಗದ ಜನರ ಕೇಂದ್ರ ಸ್ಥಳವಿದು, ಹೊರಗಡೆಯವರು ಅನ್ನೋ ಭಯ ಯಾರಿಗೂ ಬೇಡ” ಎಂದರು. “ಎಲ್ಲಕ್ಕಿಂತ ಹೆಚ್ಚು ಉಡುಪಿ-ಕುಂದಾಪುರದ ಜನತೆ ಜೊತೆ ಇದ್ದೇನೆ ಎಂಬ ಮಾತು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

“ನಾನು ಉಡುಪಿಯವನಾದರೂ ಕುಂದಾಪುರದ ಜೊತೆ ನನ್ನದು ಹತ್ತಿರದ ಸಂಬಂಧವಿದೆ. ನಾನು ಸೆಕೆಂಡ್ ಪಿಯುಸಿ ಓದುವಾಗಲೇ ಕುಂದಾಪುರದಲ್ಲಿ ಟಿಂಬರ್ ಬಿಸಿನೆಸ್ ಮಾಡ್ತಿದ್ದೆ, ಹಾಗೆ ನನ್ನ ಉದ್ಯಮ ಬದುಕು ಶುರುವಾಗಿದ್ದೇ ಕುಂದಾಪುರದಿಂದ, ನಂತರ ಬೆಂಗಳೂರಿಗೆ ಬಂದಾಗ ನನಗೆ ಮೊದಲು ಸಹಾಯ ಮಾಡಿದವರು ಕುಂದಾಪುರದ ವಿ.ಪಿ.ಶೆಟ್ಟರು. ಅವರು ಮೂರು ಬ್ಯಾಂಕಿನ ಚೇರ್ಮನ್ ಆಗಿದ್ದ ದೇಶದ ಏಕೈಕ ವ್ಯಕ್ತಿ” ‘ನನ್ನ ಉದ್ಯಮ ಸಣ್ಣದಾಗೇ ಶುರುವಾಗಿದ್ದು, ಈಗ ಒಂದು ಹಂತಕ್ಕೆ ಬೆಳೆದಿದ್ದೇನೆ’ ಎಂದ ಅವರು ‘ಈಗ ಬೇಕರಿ ಸಣ್ಣಪುಟ್ಟ ವ್ಯವಹಾರ ಮಾಡುವವರು ಎದೆಗುಂದಬೇಡಿ’ ಎಂದು ಉದ್ಯಮಿ, ಎಂಆರ್‌ಜಿ ಗ್ರೂಪ್‌ ಸಿಎಂಡಿ ಪ್ರಕಾಶ್ ಶೆಟ್ಟಿ ಹೇಳಿದರು.

“ನನ್ನ ತಂದೆಯ ಊರು ದಾವಣಗೆರೆ, ತಾಯಿಯ ಊರು ಕುಂದಾಪುರ. ಅದಕ್ಕೆ ನನಗೆ ಕುಂದಾಪುರ ಅಂದರೆ ಒಂದು ದೊಡ್ಡ ಸೆಂಟಿಮೆಂಟ್. ನನ್ನನ್ನು ಕುಂದಾಪುರ ಕನ್ನಡ ಹಬ್ಬಕ್ಕೆ ಬನ್ನಿ ಎಂದು ಆಹ್ವಾನಿಸಿದಾಗ, ‘ಎಲ್ಲಿ ಹಬ್ಬ ಕುಂದಾಪುರದಲ್ಲಾ?’ ಅಂದಾಗ ‘ಬೆಂಗಳೂರು’ ಎಂದರು. ‘ಇಲ್ಲಿ ಅದೂ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಕುಂದಾಪುರದ ಅಷ್ಟು ಜನ ಸೇರ್ತಾರಾ?’ ಎಂದಿದ್ದೆ. ಆದರೆ ಇಂದು ಇಲ್ಲಿ ಬಂದು ನೋಡಿದರೆ ನೀವು ಶಕ್ತಿಪ್ರದರ್ಶನ ಮಾಡಿದ್ದೀರಿ. ಭಾಷೆಯನ್ನು ಹೀಗೆ ಸೆಲೆಬ್ರೇಟ್ ಮಾಡೋದು ತುಂಬಾ ಹೆಮ್ಮೆಯ ಸಂಗತಿ” ಎಂದು ನಟಿ ರಕ್ಷಿತಾ ಪ್ರೇಮ್ ಹೇಳಿದರು.

ಊರ ಗೌರವ ಪುರಸ್ಕಾರ

ಊರು ಅಂದ್ರೆ ವ್ಯಕ್ತಿಗಿಂತ ದೊಡ್ದದು. ಜನ್ಮ ಕೊಟ್ಟ ಊರು ಎಲ್ಲರಿಗಿಂತ ದೊಡ್ಡದು, ಊರು-ಭಾಷೆ ಹೆಸರೇ ನನ್ನನ್ನು ಇಲ್ಲಿ ತಂದು ನಿಲ್ಲಿಸಿದೆ. ಕುಂದಾಪುರದ ತಂತ್ರಾಡಿ ನಾನು ಹುಟ್ಟಿದ ಊರು, ತಾಯಿಯದ್ದು ತುಳು, ತಂದೆಯದ್ದು ಕುಂದಾಪುರ ಕನ್ನಡ. ತಂದೆ-ತಾಯಿಗೆ ನಾನು ಒಂಬತ್ತನೇ ಮಗ, ನಾನು ಹುಟ್ಟುವ ಮೊದಲೇ ತಾಯಿಗೆ ತಂದೆ ಕುಂದಾಪ್ರ ಕನ್ನಡ ಕಲಿಸಿದ್ದರು. ಹೀಗಾಗಿ ನಾನು ಬೆಳೆದದ್ದು ಧಾರವಾಡ ಜಿಲ್ಲೆಯಾದ್ರೂ ಮನೆಯಲ್ಲಿ ಕುಂದಾಪ್ರದ ವಾತಾವರಣ ಇತ್ತು. ಭಾಷೆ ಬದುಕಾಗಿ ಅನ್ನ ಹುಟ್ಟಿಸುವ ಮಟ್ಟಕ್ಕೆ ತಂದಿದೆ. ಭಾಷಾಭಿಮಾನ ತುಂಬಾ ದೊಡ್ಡದು.

ನಮ್ಮ ಭಾಷೆಯನ್ನು ಎಷ್ಟಾಗುತ್ತೋ ಅಷ್ಟು ಮತ್ತೆ ಮತ್ತೆ ಮಾತಾಡಿ, ಮನಸಿನಾಳದಿಂದ ಪ್ರೀತಿಸುವ” ಎಂದು ‘ಊರ ಗೌರವ’ ವಿಶೇಷ ಪುರಸ್ಕಾರ ಸ್ವೀಕರಿಸಿದ ಚಿತ್ರನಿರ್ದೇಶಕ ಯೋಗರಾಜ್ ಭಟ್ ಹೇಳಿದರು.

ಇದನ್ನೂ ಓದಿ: ಉಕ್ಕಿ ಹರಿಯುವ ನದಿಯಲ್ಲಿ ದೋಣಿ ನಡೆಸುವ ದಿಟ್ಟ ಮಹಿಳೆ: ಶಾಲಾ ಮಕ್ಕಳಿಗೆ ಇವರೇ ನಾವಿಕೆ

ಸಾಹಿತಿ-ಪತ್ರಕರ್ತ ಜೋಗಿ, ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಉಪೇಂದ್ರ ಶೆಟ್ಟಿ, ಚಿತ್ರನಟರಾದ ಶೈನ್ ಶೆಟ್ಟಿ, ಪ್ರವೀರ್ ಶೆಟ್ಟಿ, ಲೈಫ್‌ಲೈನ್ ಟೆಂಡರ್ ಚಿಕನ್ ಮ್ಯಾನೇಜಿಂಗ್ ಡೈರೆಕ್ಟರ್ ಕಿಶೋರ್ ಹೆಗ್ಡೆ, ವಿಎಲ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಅಂಜಲಿ ವಿಜಯ್, ಎಎಸ್ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ ಶೆಟ್ಟಿ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ಡಾ.ದೀಪಕ್ ಶೆಟ್ಟಿ ಬಾರ್ಕೂರು, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಜೊತೆ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ ಮುಂತಾದವರು ಉಪಸ್ಥಿತರಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:35 pm, Sun, 27 July 25