AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂಬಾಕು ಉತ್ಪನ್ನಗಳಿಗೆ ಯಾವುದೇ ನಿರ್ಬಂಧವಿಲ್ಲ; ಕೋಲಾರದಲ್ಲಿ ಸರ್ಕಾರಿ ಆದೇಶಗಳ ಪಾಲನೆಗೆ ಹಿಂದೇಟು

ಬೀಡಿ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯು (ಕೋಟ್ಪಾ) ತಂಬಾಕು ಉತ್ಪನ್ನಗಳ ಉತ್ಪಾದನೆ, ಜಾಹೀರಾತು, ಸರಬರಾಜು, ಮಾರಾಟ ಮತ್ತು ಬಳಕೆಗೆ ಸಂಬಂಧಪಟ್ಟಂತೆ ಸಾಕಷ್ಟು ನಿರ್ಬಂಧ ವಿಧಿಸಿದೆ. ಸೆಕ್ಷನ್‌ 4ರ ಕಾಯ್ದೆಯ ಪ್ರಕಾರ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಹೋಟೆಲ್‌, ಚಿತ್ರಮಂದಿರದಂತಹ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ.

ತಂಬಾಕು ಉತ್ಪನ್ನಗಳಿಗೆ ಯಾವುದೇ ನಿರ್ಬಂಧವಿಲ್ಲ; ಕೋಲಾರದಲ್ಲಿ ಸರ್ಕಾರಿ ಆದೇಶಗಳ ಪಾಲನೆಗೆ ಹಿಂದೇಟು
ಪ್ರಾತಿನಿಧಿಕ ಚಿತ್ರ
preethi shettigar
| Updated By: Skanda|

Updated on: Apr 22, 2021 | 9:29 AM

Share

ಕೋಲಾರ:  ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜುಗಳ ಸಮೀಪ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಅದರ ಬಳಕೆ ಎಗ್ಗಿಲ್ಲದೆ ಸಾಗುತ್ತಿದೆ. ಸರ್ಕಾರದ ಆದೇಶ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಬಿದಿ ಬದಿಯ ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ವಾಣಿಜ್ಯ ಮಳಿಗೆಗಳವರೆಗೆ ವ್ಯಾಪಾರಿಗಳು ಹಣ ಸಂಪಾದನೆಗಾಗಿ ಸಿಗರೇಟು, ಬೀಡಿ, ಗುಟ್ಕಾದಂತಹ ತಂಬಾಕು ಉತ್ಪನ್ನಗಳನ್ನು ರಾಜಾರೋಷವಾಗಿ ಮಾರುವುದರ ಜತೆಗೆ ಮಳಿಗೆಗಳ ಬಳಿಯೇ ಅವುಗಳ ಬಳಕೆಗೆ ಅವಕಾಶ ಕಲ್ಪಿಸಿದ್ದಾರೆ.

ಕಾಫಿ ಮತ್ತು ಟೀ ಅಂಗಡಿಗಳು, ಪೆಟ್ಟಿಗೆ ಅಂಗಡಿಗಳು, ಹೋಟೆಲ್‌, ಕಾಂಡಿಮೆಂಟ್ಸ್​, ಬಾರ್‌ ಮತ್ತು ಮದ್ಯದಂಗಡಿಗಳ ಅಕ್ಕಪಕ್ಕ, ಪಾನ್‌ ಬೀಡಾ ಅಂಗಡಿಗಳು, ಚಿತ್ರಮಂದಿರ, ಆಸ್ಪತ್ರೆಗಳು, ಕಲ್ಯಾಣ ಮಂಟಪ, ಸರ್ಕಾರಿ ಕಚೇರಿಗಳ ಬಳಿ, ಮಾರುಕಟ್ಟೆಗಳು ಹಾಗೂ ಬಸ್‌ ನಿಲ್ದಾಣದ ಆವರಣದಲ್ಲಿನ ಅಂಗಡಿಗಳಲ್ಲಿ ಗ್ರಾಹಕರು ತಂಬಾಕು ಉತ್ಪನ್ನಗಳನ್ನು ಖರೀದಿಸಿ ಅಲ್ಲಿಯೇ ಅವುಗಳನ್ನು ಬಳಸುತ್ತಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು ನಿರ್ಭಂದಿಸಿ ಸರ್ಕಾರ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ರಚಿಸಿದೆ. ಮತ್ತೊಂದೆಡೆ ಪೊಲೀಸರು, ನಗರಸಭೆ ಆರೋಗ್ಯ ವಿಭಾಗದ ಅಧಿಕಾರಿಗಳು ಈ ಅಕ್ರಮಕ್ಕೆ ಕಡಿವಾಣ ಹಾಕುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ, ವ್ಯಾಪಾರಿಗಳು ಅಧಿಕಾರಿಗಳ ಕಣ್ತಪ್ಪಿಸಿ ಸಾರ್ವಜನಿಕ ಸ್ಥಳಗಳಲ್ಲೇ ತಂಬಾಕು ಉತ್ಪನ್ನಗಳ ಬಳಕೆಗೆ ದಾರಿ ಮಾಡಿಕೊಟ್ಟಿದ್ದಾರೆ.

ತಂಬಾಕು ಉತ್ಪನ್ನಗಳಲ್ಲಿವೆ ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ರಾಸಾಯನಿಕಗಳು ತಂಬಾಕು ಉತ್ಪನ್ನಗಳಾದ ಸಿಗರೇಟ್‌, ಬೀಡಿ, ಸಿಗಾರ್‌ನಲ್ಲಿ ಸುಮಾರು 4 ಸಾವಿರ ಬಗೆಯ ರಾಸಾಯನಿಕ ವಸ್ತುಗಳಿದ್ದು, ಇವು ಶೇಕಡಾ 69ರಷ್ಟು ಕ್ಯಾನ್ಸರ್‌ಕಾರಕ ಅಂಶಗಳನ್ನು ಹೊಂದಿದೆ. ಧೂಮರಹಿತ ತಂಬಾಕು ಉತ್ಪನ್ನಗಳಾದ ಗುಟ್ಕಾ, ಪಾನ್​ ಮಸಾಲಾಗಳಲ್ಲಿ (ಜಗಿಯುವ ಮಾದರಿಯವು) 3,095 ಬಗೆಯ ರಾಸಾಯನಿಕ ವಸ್ತುಗಳಿದ್ದು, ಇವು ಶೇಕಡಾ 28ರಷ್ಟು ಕ್ಯಾನ್ಸರ್‌ಕಾರಕ ಅಂಶಗಳನ್ನು ಒಳಗೊಂಡಿವೆ.

ತಂಬಾಕು ಉತ್ಪನ್ನಗಳ ಬಳಕೆಯಿಂದ ಹೃದ್ರೋಗ, ಕ್ಯಾನ್ಸರ್‌, ಪಾರ್ಶ್ವವಾಯು ಬರುತ್ತದೆ. ಅಲ್ಲದೇ, ಶ್ವಾಸಕೋಶ ಹಾಗೂ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಧೂಮಪಾನದಿಂದ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ ಎಂಬ ಸಂಗತಿ ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟಿದೆ. ಹೀಗಿದ್ದರೂ ದಿನೇ ದಿನೇ ತಂಬಾಕು ಉತ್ಪನ್ನಗಳನ್ನ ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎನ್ನುವುದು ಬೆಸರದ ಸಂಗತಿಯಾಗಿದೆ.

ತಂಬಾಕು ಉತ್ಪನ್ನಗಳ ಬಗ್ಗೆ ಕಾನೂನು ಏನು ಹೇಳುತ್ತದೆ? ಬೀಡಿ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯು ತಂಬಾಕು ಉತ್ಪನ್ನಗಳ ಉತ್ಪಾದನೆ, ಜಾಹೀರಾತು, ಸರಬರಾಜು, ಮಾರಾಟ ಮತ್ತು ಬಳಕೆಗೆ ಸಂಬಂಧಪಟ್ಟಂತೆ ಸಾಕಷ್ಟು ನಿರ್ಬಂಧ ವಿಧಿಸಿದೆ. ಸೆಕ್ಷನ್‌ 4ರ ಕಾಯ್ದೆಯ ಪ್ರಕಾರ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಹೋಟೆಲ್‌, ಚಿತ್ರಮಂದಿರದಂತಹ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಸೆಕ್ಷನ್‌ 5ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕಾಣುವಂತೆ ತಂಬಾಕು ಉತ್ಪನ್ನಗಳ ಬಗ್ಗೆ ಪ್ರಚಾರ ಮಾಡುವಂತಿಲ್ಲ ಮತ್ತು ಅಂಗಡಿಗಳ ಬಳಿ ಜಾಹೀರಾತು ಫಲಕಗಳನ್ನು ಹಾಕುವಂತಿಲ್ಲ.

ಕಾಯ್ದೆಯ ಸೆಕ್ಷನ್‌ 6ಎ ಪ್ರಕಾರ 18 ವರ್ಷಕ್ಕಿಂತ ಕೆಳಗಿನವರಿಗೆ ತಂಬಾಕು ಉತ್ಪನ್ನಗಳನ್ನು ಮಾರುವಂತಿಲ್ಲ. ಸೆಕ್ಷನ್‌ 6ಬಿ ಅನ್ವಯ ಶಾಲಾ ಕಾಲೇಜುಗಳ ಬಳಿ 100 ಮೀಟರ್‌ ಅಂತರದಲ್ಲಿ ಈ ಉತ್ಪನ್ನಗಳ ಮಾರಾಟ ಮತ್ತು ಬಳಕೆ ನಿರ್ಬಂಧಿಸಲಾಗಿದೆ. ಸೆಕ್ಷನ್‌ 7ರ ಪ್ರಕಾರ ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆ ಸಂದೇಶ ಒಳಗೊಂಡ ಫಲಕಗಳನ್ನು ಅಂಗಡಿಗಳಲ್ಲಿ ಗ್ರಾಹಕರಿಗೆ ಕಾಣಿಸುವಂತೆ ಹಾಕಬೇಕು.

ಈ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಬಹುದು. ಜತೆಗೆ ₹200ರಿಂದ ₹5 ಸಾವಿರದವರೆಗೆ ದಂಡ, 2 ವರ್ಷದಿಂದ ಗರಿಷ್ಠ 5 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ನ್ಯಾಯಾಧೀಶರಿಗೆ ಅವಕಾಶವಿದೆ. ಕಾಯ್ದೆಯ ಒಂದೊಂದು ಸೆಕ್ಷನ್‌ಗಳ ಉಲ್ಲಂಘನೆಗೂ ದಂಡ ಮತ್ತು ಶಿಕ್ಷೆಯ ಪ್ರಮಾಣ ಬೇರೆ ಇದೆ.

ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ ಕಾನೂನು ಕೋಲಾರ ಜಿಲ್ಲೆಯಲ್ಲಿ ಕೋಟ್ಪಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆಯ ಸಂದೇಶ ಒಳಗೊಂಡ ಫಲಕಗಳನ್ನು ಬಹುಪಾಲು ಅಂಗಡಿಗಳಲ್ಲಿ ಹಾಕಿಲ್ಲ. ಬದಲಿಗೆ ತಂಬಾಕು ಉತ್ಪನ್ನಗಳ ಜಾಹೀರಾತು ಫಲಕಗಳನ್ನು ಹಾಕಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.

ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಿಬ್ಬಂದಿ ಹಾಗೂ ಪೊಲೀಸರು ಜನವರಿಯಿಂದ ಮಾರ್ಚ್‌ ಅಂತ್ಯದವರೆಗೆ ಮೂರು ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘನೆ ಸಂಬಂಧ 1,016 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ₹ 93 ಸಾವಿರ ದಂಡ ಸಂಗ್ರಹಿಸಿದ್ದಾರೆ. ಆದರೂ ತಂಬಾಕು ಉತ್ಪನ್ನಗಳ ಅಕ್ರಮ ಮಾರಾಟ ಮತ್ತು ಬಳಕೆ ಕದ್ದುಮುಚ್ಚಿ ನಡೆಯುತ್ತಲೇ ಇದೆ.

ತಂಬಾಕು ಉತ್ಪನ್ನಗಳ ಅಕ್ರಮ ಮಾರಾಟ ಮತ್ತು ಬಳಕೆ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ ಜೊತೆಗೆ ಕೋಟ್ಪಾ ಕಾಯ್ದೆ ಉಲ್ಲಂಘಿಸುವ ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸುವುದರ ಜತೆಗೆ ಅವರ ವಾಣಿಜ್ಯ ಪರವಾನಗಿ ರದ್ದುಪಡಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ವರದಿ ಕಳಿಸುತ್ತಿದ್ದೇವೆ ಆದರೂ ಇನ್ನಷ್ಟು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಕಾನೂನು ಜಾರಿಯಾಗಬೇಕಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ಅಭಿಪ್ರಾಯಪಟ್ಟಿದ್ದಾರೆ.

2021 ರಲ್ಲಿ ದಾಖಲಾದ ಪ್ರಕರಣಗಳು ಹಾಗೂ ವಸೂಲಾದ ದಂಡದ ವಿವರ: ಜನವರಿ: 153 ಪ್ರಕರಣಗಳು- 13,450 ರೂ. ದಂಡ ವಸೂಲಾಗಿದೆ.

ಫೆಬ್ರವರಿ: 337 ಪ್ರಕರಣಗಳು-28,900 ರೂ. ದಂಡ ವಸೂಲಾಗಿದೆ.

ಮಾರ್ಚ್‌: 526 ಪ್ರಕರಣಗಳು- 50,650 ರೂ. ದಂಡ ವಸೂಲಾಗಿದೆ.

ಇದನ್ನೂ ಓದಿ:

ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಬೀಳುತ್ತಾ ಬ್ರೇಕ್?

(There is no restriction on tobacco products selling in Kolar)

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!