Lakkasandra Building Collapse: ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ
ಬೆಂಗಳೂರಿನ ಲಕ್ಕಸಂದ್ರದಲ್ಲಿ 3 ಅಂತಸ್ತಿನ ಮನೆ ಕುಸಿದಿದೆ. ಮನೆ ಬೀಳುವ ಭೀಕರ ದೃಶ್ಯ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಮನೆಯಲ್ಲಿ 20ಕ್ಕೂ ಹೆಚ್ಚು ಜನರು ವಾಸವಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಲಕ್ಕಸಂದ್ರದಲ್ಲಿ 3 ಅಂತಸ್ತಿನ ಮನೆ ಕುಸಿದಿದೆ. ಮನೆ ಬೀಳುವ ಭೀಕರ ದೃಶ್ಯ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಮನೆಯಲ್ಲಿ 20ಕ್ಕೂ ಹೆಚ್ಚು ಜನರು ವಾಸವಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಶಾಸಕ ರಾಮಲಿಂಗಾರೆಡ್ಡಿ ಮನೆಯಿಂದ ಕೊಂಚ ದೂರದಲ್ಲಿಯೇ ಈ ಕಟ್ಟಡವಿದ್ದು ಮೆಟ್ರೋ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರು ಕಟ್ಟಡದಲ್ಲಿ ವಾಸವಾಗಿದ್ದರು. ಹಳೇ ಕಟ್ಟಡ ಕುಸಿತದಿಂದ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿದೆ. ಕಟ್ಟಡ ಕುಸಿಯುವುದಕ್ಕಿಂತ ಕೆಲ ಸಮಯ ಮುನ್ನ ಅಗ್ನಿಶಾಮಕ ಸಿಬ್ಬಂದಿ ಕಾರ್ಮಿಕರನ್ನು ತೆರವುಗೊಳಿಸಿದ್ದರು. ಹೀಗಾಗಿ ಮೆಟ್ರೋ ಕಾರ್ಮಿಕರ ತೆರವಿನಿಂದ ಭಾರಿ ಅನಾಹುತ ತಪ್ಪಿದೆ. ಹಳೇ ಕಟ್ಟಡ ಕುಸಿಯುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.
ಲಕ್ಕಸಂದ್ರದ 7ನೇ ಮುಖ್ಯರಸ್ತೆ, 14ನೇ ಕ್ರಾಸ್ನಲ್ಲಿನ ಈ ಮೂರು ಅಂತಸ್ತಿನ ಕಟ್ಟಡವನ್ನು 1974ರಲ್ಲಿ ನಿರ್ಮಿಸಲಾಗಿತ್ತು. ಸುರೇಶ್ ಎಂಬುವವರಿಗೆ ಈ ಮನೆ ಸೇರಿದೆ. ರಾತ್ರಿ ವೇಳೆ ಈ ಹಳೆಯ ಕಟ್ಟಡ ಕುಸಿದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಈ ಕಟ್ಟಡದಲ್ಲಿ 40-45 ಮಂದಿ ಮೆಟ್ರೋ ಕಾರ್ಮಿಕರು ವಾಸಿಸುತ್ತಿದ್ದರು. ಸ್ವಲ್ಪದರಲ್ಲಿ ಪಾರಾಗಿ ಮನೆಯಿಂದ ಹೊರಬಂದಿದ್ದಾರೆ. ಯಾವುದೇ ಅನಾಹುತ ಸಂಭವಿಸಲಿಲ್ಲ ಎಂದು ಮನೆಯಲ್ಲಿ ವಾಸವಿದ್ದ ಸ್ಥಳೀಯ ದಂಪತಿ ತಿಳಿಸಿದ್ದಾರೆ.
ಮನೆ ಬೀಳುವಾಗ ನಾವು ಕೂಡ ನಮ್ಮ ಮನೆಯಲ್ಲಿ ಇದ್ವಿ ಇಂದು ಬೆಳಗ್ಗೆ 10-10.30ರ ಸುಮಾರಿಗೆ ಘಟನೆ ನಡೆದಿದೆ. ಈ ಕಟ್ಟಡ ರಾತ್ರಿ ಸಮಯದಲ್ಲಿ ಬಿದ್ದಿದ್ರೆ 40-50 ಜನ ಸಾಯುತ್ತಿದ್ರು. ಈ ಮನೆ ಮಾಲೀಕರಿಗೆ ಹೇಳಿದ್ವಿ ಮನೆಯನ್ನ ತೆರವು ಮಾಡುವಂತೆ ಆದ್ರೆ ಅವರು ಕೇಳಿರಲಿಲ್ಲ. ಅವಾಗವಾಗ ಮನೆಯ ಗೋಡೆಯಿಂದ ಶಬ್ದ ಬರುತ್ತಿತ್ತು. ಇಂದು ಬೆಳಗ್ಗೆ ಗೋಡೆಯಿಂದ ಮಣ್ಣು ಬೀಳುತ್ತಿತ್ತು. ಮನೆಯನ್ನ ತೆರವು ಮಾಡುವಂತೆ ಬಿಬಿಎಂಪಿಗೂ ಹೇಳಿದ್ವಿ. ಮನೆ ಬೀಳುವಾಗ ನಾವು ಕೂಡ ನಮ್ಮ ಮನೆಯಲ್ಲಿ ಇದ್ವಿ. ನಮ್ಮ ಮನೆಯಲ್ಲೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಇದೇವೆ. ಆದರೆ ನಾವು ಪ್ರಣಾಪಾಯದಿಂದ ಪಾರಾಗಿದ್ದೀವಿ. ನಂಜಪ್ಪಾ ಎನ್ನುವವರು 1974ರಲ್ಲಿ ಈ ಮನೆಯನ್ನ ಕಟ್ಟಿಸಿದ್ರು. ಇತ್ತೀಚೆಗೆ ಅವರು ಈ ಮನೆಯನ್ನು ಬಾಡಿಗೆಗೆ ಕೊಟ್ಟಿದ್ರು ಎಂದು ಲಕ್ಕಸಂದ್ರದ ಸ್ಥಳೀಯರು ಮಾಹಿತಿ ಹಂಚಿಕೊಂಡಿದ್ದಾರೆ.
.
Published On - 12:49 pm, Mon, 27 September 21