ಬೆಂಗಳೂರು, ಸೆಪ್ಟೆಂಬರ್ 28: ತಮಿಳುನಾಡಿಗೆ ಕಾವೇರಿ ನೀರು (Cauvery Water) ಬಿಡುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಇಂದು ಶುಕ್ರವಾರ ಕರ್ನಾಟಕ ಬಂದ್ಗೆ (Karnataka Bandh) ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಿಗಿ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ. ಅಲ್ಲದೆ, ಬಂದ್ ಸ್ವಯಂಪ್ರೇರಿತವಾಗಿರಬೇಕು. ಯಾವುದೇ ಕಾರಣಕ್ಕೂ ಬಲವಂತದ ಬಂದ್ ಮಾಡಿಸಬಾರದು. ಹಾಗೆ ಮಾಡಿದ್ದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ. ಬಂದ್ಗೆ ಕೈಗೊಳ್ಳಲಾಗಿರುವ ಪೊಲೀಸ್ ಭದ್ರತೆ ಬಗ್ಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಇತೀಂದ್ರ ‘ಟಿವಿ 9’ಗೆ ಮಾಹಿತಿ ನೀಡಿದ್ದು, 80 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ಕಾನೂನು ಉಲ್ಲಂಘಿಸಿದರೆ ಅಂತವರ ವಿರುದ್ದ ಕಠಣ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಎಲ್ಲಾ ಎಸ್ಪಿಗಳು, ಐಜಿಗಳು ಭದ್ರತೆಯ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಪೊಲೀಸ್ ವತಿಯಿಂದ 250 ಕ್ಕೂ ಹೆಚ್ಚು ಕೆಆರ್ಪಿಎಸ್ ತುಕಡಿಗಳು, 5 ಆರ್ಎಎಫ್ ತುಕಡಿಗಳು, ಎಲ್ಲಾ ಸಿಆರ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಯಾವುದೇ ರೀತಿಯ ಬಲವಂತದ ಬಂದ್ ಆಗಿರಬಾರದು. ಕರ್ನಾಟಕ ಬಂದ್ ಸ್ವಯಂ ಪ್ರೇರಿತ ಆಗಿರಬೇಕು. ಶಾಂತಿಯುವವಾಗಿ ಬಂದ್ ಮಾಡಬೇಕು ಎಂದು ಸಾರ್ವಜನಿಕರಲ್ಲಿ ಎಡಿಜಿಪಿ ಮನವಿ ಮಾಡಿದ್ದಾರೆ.
ಬಂದ್ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Karnataka Bandh: ನಾಳೆ ಕರ್ನಾಟಕ ಬಂದ್ ವೇಳೆ ಏನಿರುತ್ತೆ? ಏನಿಲ್ಲ? ಇಲ್ಲಿದೆ ವಿವರ
ಕಾವೇರಿ ನೀರು ಬಿಡುಗಡೆ ಖಂಡಿಸಿ ಕರೆ ನೀಡಲಾಗಿರುವ ಶುಕ್ರವಾರದ ಕರ್ನಾಟಕ ಬಂದ್ಗೆ ನೂರಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಬಂದ್ ಕಾರಣ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳು ಸಂಚರಿಸಲಿವೆಯೇ ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಹೊರಬಿದ್ದಿಲ್ಲ. ಈ ಮಧ್ಯೆ, ಬಿಎಂಟಿಸಿ ಬಸ್ಗಳ ಸಂಚಾರಕ್ಕೆ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಸಾರಿಗೆ ಸಂಸ್ಥೆ ಮನವಿ ಮಾಡಿದೆ ಎಂದು ವರದಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:23 pm, Thu, 28 September 23