ಬೆಂಗಳೂರು, ಸೆಪ್ಟೆಂಬರ್ 01: ಎರಡೂವರೆ ವರ್ಷದ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ (Towing) ಆರಂಭವಾಗಿದೆ. ಉಪ್ಪಾರಪೇಟೆ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಟೋಯಿಂಗ್ ಶುರು ಮಾಡಲಾಗಿದ್ದು, ಎರಡೇ ದಿನಕ್ಕೆ ಟೋಯಿಂಗ್ ವಾಹನಗಳ ಸಂಖ್ಯೆ ಶತಕ ದಾಟಿದೆ. ಮೊನ್ನೆ ಒಂದೇ ದಿನ 30 ಟೋಯಿಂಗ್ ಪ್ರಕರಣ ದಾಖಲಾಗಿತ್ತು. ನಿನ್ನೆ ಬೆಂಗಳೂರಿನಲ್ಲಿ 70ಕ್ಕೂ ಅಧಿಕ ವಾಹನಗಳ ಟೋಯಿಂಗ್ ಮಾಡಲಾಗಿದೆ. ಟೋಯಿಂಗ್ಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದಲೇ 2 ವಾಹನ ಪೂರೈಕೆ ಮಾಡಲಾಗಿದೆ.
ಉಪ್ಪಾರಪೇಟೆ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಮಾತ್ರ ಟೋಯಿಂಗ್ ಆರಂಭಿಸಲಾಗಿದ್ದು, ನೋ ಪಾರ್ಕಿಂಗ್‌ಗೆ ಮಾತ್ರ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಟೋಯಿಂಗ್ಗೆ ಯಾವುದೇ ಚಾರ್ಜ್ ಮಾಡುತ್ತಿಲ್ಲ. ಫ್ರೀಡಂಪಾರ್ಕ್ನಲ್ಲಿ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಈ ಭಾಗದ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧ ಮಾಡಲಾಗಿತ್ತು.
ಇದನ್ನೂ ಓದಿ: ಕಾಮಗಾರಿ ಬಿಲ್ ಬಾಕಿ: ಬಿಬಿಎಂಪಿ ವಿರುದ್ಧ ಸಮರ ಸಾರಿದ ಗುತ್ತಿಗೆದಾರರು
ಉಪ್ಪಾರಪೇಟೆ ಸಂಚಾರಿ ಠಾಣಾ ವ್ಯಾಪ್ತಿಯ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ. ಆದರೂ ರಸ್ತೆಯಲ್ಲೇ ವಾಹನ ಸವಾರರು ಪಾರ್ಕಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಉಪ್ಪಾರಪೇಟೆ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಟೋಯಿಂಗ್ ಮಾಡಲಾಗುತ್ತಿದೆ.
ಮೊದಲ ದಿನವಾದ ಶುಕ್ರವಾರ ಗಾಂಧಿನಗರದಲ್ಲಿ 300 ಕ್ಕೂ ಹೆಚ್ಚು ಟೋಯಿಂಗ್ ಪ್ರಕರಣಗಳು ದಾಖಲಾಗಿವೆ. ಶುಕ್ರವಾರದಿಂದ ಟೋಯಿಂಗ್ ಕಾರ್ಯಾಚರಣೆಗಳು ಪ್ರಾರಂಭವಾಗಿದ್ದು, ವಿಶೇಷವಾಗಿ ಉಪ್ಪಾರಪೇಟೆ ಠಾಣೆಯ ವ್ಯಾಪ್ತಿಯ ಗಾಂಧಿನಗರ ಮತ್ತು ಇತರ ಪ್ರದೇಶಗಳಲ್ಲಿ ಅಕ್ರಮವಾಗಿ ನಿಲುಗಡೆ ಮಾಡಿದ ವಾಹನಗಳನ್ನು ತೆರವುಗೊಳಿಸುವತ್ತ ಗಮನಹರಿಸಲಾಗುತ್ತಿದೆ.
ನಿಷೇಧಿತ ಸ್ಥಳಗಳಲ್ಲಿ ಪಾರ್ಕಿಂಗ್‌ಗೆ ದಂಡ ವಿಧಿಸಲಾಗುವುದು ಮತ್ತು ಈ ಅವಧಿಯಲ್ಲಿ ಯಾವುದೇ ಹೆಚ್ಚುವರಿ ಟೋಯಿಂಗ್ ಶುಲ್ಕವನ್ನು ಅನ್ವಯಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಟೋಯಿಂಗ್ ಸೇವೆಯು ವಾಹನ ದಟ್ಟಣೆಯ ಬೀದಿಗಳನ್ನು ತೆರವುಗೊಳಿಸುವ ಗುರಿಯನ್ನು ಹೊಂದಿದೆ. ಆ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಇದನ್ನೂ ಓದಿ: ನಾಯಿಗಳ ದಾಳಿ: ಕರ್ನಾಟಕದಲ್ಲಿ ಈವರೆಗೂ 12ಕ್ಕೂ ಹೆಚ್ಚು ಜನರು ರೇಬಿಸ್ಗೆ ಬಲಿ!
ಇನ್ನು ವಾಹನ ಸವಾರರು ಫ್ರೀಡಂ ಪಾರ್ಕ್‌ನಲ್ಲಿರುವ ಹೊಸ ಪಾರ್ಕಿಂಗ್ ಸಂಕೀರ್ಣವನ್ನು ಬಳಸಿಕೊಳ್ಳಲು ಮತ್ತು ನಿಷೇಧಿತ ಪ್ರದೇಶಗಳಲ್ಲಿ ಅಥವಾ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡದಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:18 pm, Sun, 1 September 24