ಗದಗ: ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ಮಾಡಿದ ಅಧಿಕಾರಿ ವರ್ಗಾವಣೆ
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ರಾಜೇಶ್ ತುಂಗಭದ್ರಾ ನದಿ ತೀರದಲ್ಲಿನ ಅಕ್ರಮ ಮಾಫಿಯಾ ಮೇಲೆ ಐದು ದಿನ ಸತತವಾಗಿ ದಾಳಿ ನಡೆಸಿದ್ದು, ಈ ವೇಳೆ ಕೋಟ್ಯಾಂತರ ಮೌಲ್ಯದ ಸುಮಾರು 750 ಟಿಪ್ಪರ್ ಮರಳು ಜಪ್ತಿ ಮಾಡಿದ್ದಾರೆ.
ಗದಗ: ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ಮಾಡಿದ ಹಿನ್ನೆಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯನ್ನು ವರ್ಗಾವಣೆ ಮಾಡಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಅಕ್ರಮ ಮರಳು ಗಣಿಗಾರಿಕೆ ತಡೆಗೆ ಮುಂದಾಗಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ರಾಜೇಶ್ ದಿಢೀರನೆ ವರ್ಗಾವಣೆಯಾಗಿರುವ ಬಗ್ಗೆ ಸದ್ಯ ಜಿಲ್ಲೆಯ ಪ್ರಭಾವಿ ಜನಪ್ರತಿನಿಧಿಗಳ ಕೈವಾಡ ಇದೆ ಎಂದು ಶಂಕಿಸಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ರಾಜೇಶ್ ತುಂಗಭದ್ರಾ ನದಿ ತೀರದಲ್ಲಿನ ಅಕ್ರಮ ಮಾಫಿಯಾ ಮೇಲೆ ಐದು ದಿನ ಸತತವಾಗಿ ದಾಳಿ ನಡೆಸಿದ್ದು, ಈ ವೇಳೆ ಕೋಟ್ಯಾಂತರ ಮೌಲ್ಯದ ಸುಮಾರು 750 ಟಿಪ್ಪರ್ ಮರಳು ಜಪ್ತಿ ಮಾಡಿದ್ದಾರೆ. ರಾಜಕಾರಣಿ ಒತ್ತಡಕ್ಕೆ ಮಣಿಯದೇ ಅಕ್ರಮ ಮರಳು ಮಾಫಿಯಾ ವಿರುದ್ಧ ಕ್ರಮಕೈಗೊಂಡಿರುವುದೇ ವರ್ಗಾವಣೆಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗಣಿ ಇಲಾಖೆ ಅಧಿಕಾರಿ ವರ್ಗಾವಣೆಗೆ ಗದಗ ಜಿಲ್ಲೆಯಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಸದ್ಯ ರಾಜೇಶ್ ಜಾಗಕ್ಕೆ ಮತ್ತೊಬ್ಬ ಅಧಿಕಾರಿ ನಾಗಭೂಷಣ ನೇಮಕಗೊಂಡಿದ್ದಾರೆ.
ಅಕ್ರಮ ಮರಳು ಸಾಗಾಣಿಕೆ ಆರೋಪ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೂವಿನ ಹೊಳೆ ಗ್ರಾಮದ ಬಳಿ ಜಯಪಾಲಯ್ಯ ಎಂಬ ಗುತ್ತಿಗೆದಾರರು ಮರಳುಗಾರಿಕೆಗೆ ಗುತ್ತಿಗೆ ಪಡೆದಿದ್ದಾರಾದರೂ ನಿಯಮಗಳನ್ನು ಮಾತ್ರ ಪಾಲಿಸುತ್ತಿಲ್ಲ. ಐದು ವರ್ಷಕ್ಕೆ ತೆಗೆಯಬೇಕಿದ್ದ ಲಕ್ಷಾಂತರ ಟನ್ ಮರಳು ಎರಡೇ ತಿಂಗಳಿಗೆ ಲೂಟಿ ಮಾಡಲಾಗುತ್ತಿದೆ. ಕೇವಲ ಮೂರು ಅಡಿ ಆಳ ಮಾತ್ರ ಮರಳು ತೆಗೆಯಬೇಕೆಂಬ ನಿಯಮವಿದೆ. ಆದರೆ, ಇಲ್ಲಿ ಇಪ್ಪತ್ತು ರಿಂದ ಮೂವತ್ತು ಅಡಿ ಆಳಕ್ಕೆ ಗುಂಡಿ ತೋಡಿ ಮರಳು ದೋಚಲಾಗುತ್ತಿದೆ ಎಂದು ರೈತ ಮುಖಂಡ ಹೊರಕೇರಪ್ಪ ಆರೋಪಿಸಿದ್ದಾರೆ.
ಮಣ್ಣನ್ನು ಗುಂಡಿಗೆ ತುಂಬುವ ಕೆಲಸ ನಡೆದಿದೆ. ಲಾರಿಗೆಗಳಿಗೆ ಜಿಪಿಎಸ್ ಅಳವಡಿಸದೆ ಹಗಲು ರಾತ್ರಿ ಮರಳು ಸಾಗಣೆ ನಡೆಯುತ್ತಿದೆ. ಒಂದು ಲಾರಿಗೆ ಪರ್ಮಿಟ್ ಪಡೆದು 5-10 ಓವರ್ ಲೋಡ್ ಮರಳು ಸಾಗಿಸಲಾಗುತ್ತಿದೆ. ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ರಾಯಲ್ಟಿ ಕಟ್ಟದೆ ವಂಚನೆ ನಡೆಯುತ್ತಿದೆ. ಅಲ್ಲದೆ ವೇದಾವತಿ ನದಿ ಬರಿದಾಗುತ್ತಿದೆ. ಆದರೆ ಅಕ್ರಮ ತಡೆಯಬೇಕಿದ್ದ ಗಣಿ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಇತರೆ ಅಧಿಕಾರಿಗಳು ಮಾತ್ರ ಯಾವುದಕ್ಕೂ ಸಂಬಂಧ ಇಲ್ಲದಂತೆ ಕುಳಿತಿದ್ದಾರೆ. ಅಷ್ಟೇ ಅಲ್ಲ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಅನೇಕ ಸಲ ಮನವಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ಮುಖಂಡ ಹೊರಕೇರಪ್ಪ ತಿಳಿಸಿದ್ದಾರೆ.
ಅಕ್ರಮ ಮರಳು ದಂಧೆಯಿಂದಾಗಿ ವೇದಾವತಿ ನದಿ ತೀರ ಬರಿದಾಗುತ್ತ ಸಾಗಿದೆ. ಈ ಭಾಗದಲ್ಲಿ ಅಂತರ್ಜಲ ಬರಿದಾಗಿದ್ದು ರೈತರ ಜಮೀನುಗಳಲ್ಲಿನ ಕೊಳವೆಬಾವಿಗಳು ಬತ್ತಿ ಹೋಗುತ್ತಿವೆ. ಹೀಗಾಗಿ, ನಿಯಮ ಮೀರಿ ಮನಸೋ ಇಚ್ಛೆ ಮರಳು ಲೂಟಿ ನಡೆಸುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ. ಈ ಬಗ್ಗೆ ಎಸ್ಪಿ ಜಿ.ರಾಧಿಕಾ ಅವರನ್ನು ಕೇಳಿದರೆ ಲಾಕ್ಡೌನ್ ಸಂದರ್ಭದಲ್ಲಿ ಎರಡು ತಿಂಗಳು ಮರಳು ಸಾಗಣೆಗೆ ಅವಕಾಶವಿತ್ತು. ಆ ಸಂದರ್ಭದಲ್ಲಿ ಓವರ್ ಲೋಡ್, ಪರವಾನಿಗೆ ಇಲ್ಲದೆ ಮರಳು ಸಾಗಣೆ ಆರೋಪ ಕೇಳಿ ಬಂದಿದೆ. ಕೆಲವು ಕಡೆ ಅಕ್ರಮ ಮರಳು ಸಾಗಣೆ ಬಗ್ಗೆ ನಾವು ಕೇಸು ದಾಖಲಿಸಿದ್ದೇವೆ. ಹೂವಿನ ಹೊಳೆ ಬಳಿ ಅಕ್ರಮ ಮರಳುಗಾರಿಕೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡಿನ ಹಿರಿಯೂರು ಮತ್ತು ಚಳ್ಳಕೆರೆ ತಾಲೂಕಿನ ವೇದಾವತಿ ನದಿ ತೀರದಲ್ಲಿ ನಿಯಮ ಮೀರಿ ಮರಳು ಲೂಟಿ ನಡೆಯುತ್ತಿದೆ. ಅಧಿಕಾರಿಗಳು ಕಂಡೂ ಕಾಣದವರಂತೆ ಜಾಣ ಕುರುಡುತನ ಪ್ರದರ್ಶಿಸುವ ಮೂಲಕ ಭೂ ಒಡಲು ಬರಿದಾಗಲು ಕಾರಣ ಆಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ, ಇನ್ನಾದರು ಸರ್ಕಾರ ಮತ್ತು ಉನ್ನತ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂಬುದು ರೈತರ ಆಗ್ರಹ.
ಇದನ್ನೂ ಓದಿ: ಚಿತ್ರದುರ್ಗ: ಅಕ್ರಮ ಮರಳು ಸಾಗಾಣಿಕೆ ಆರೋಪ; ಅಂತರ್ಜಲ ಮಟ್ಟದ ಕುಸಿತಕ್ಕೆ ಕಾರಣವಾಗುತ್ತಿರುವವರ ವಿರುದ್ಧ ರೈತರ ಆಕ್ರೋಶ
ಕೊಪ್ಪಳ: ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ; 4 ಟಿಪ್ಪರ್ಗಳು ವಶಕ್ಕೆ