ಗಿರೀಶ್ ಮಟ್ಟಣರ್ಗೆ ಮತ್ತೆ ಸಂಕಷ್ಟ ತರುತ್ತಾ ಶಾಸಕರ ಭವನದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣ? ಮರುತನಿಖೆಗೆ ಆಗ್ರಹಿಸಿ ದಾಖಲೆಗಳ ಸಮೇತ ದೂರು ದಾಖಲು
ಧರ್ಮಸ್ಥಳ ಪ್ರಕರಣದಲ್ಲಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ಗೆ ಈಗ ಹಳೆಯ ಪ್ರಕರಣ ಮತ್ತೆ ಸಂಕಷ್ಟ ತಂದೊಡ್ಡುವ ಎಲ್ಲ ಸಾಧ್ಯತೆ ಹೆಚ್ಚಾಗಿದೆ. ಶಾಸಕರ ಭವನದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣದಲ್ಲಿ ಮಟ್ಟಣ್ಣವರ್ ವಿರುದ್ಧ ಮರು ತನಿಖೆಯಾಗಬೇಕು ಎಂದು ಆಗ್ರಹಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹಾಗೂ ಗೃಹ ಕಾರ್ಯದರ್ಶಿಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ದೂರು ನೀಡಿದ್ದಾರೆ.

ಬೆಂಗಳೂರು, ಅಕ್ಟೋಬರ್ 10: ಹೋರಾಟಗಾರ ಗಿರೀಶ್ ಮಟ್ಟಣ್ಣವರ್ (Girish Mattannavar) ಈ ಹಿಂದೆ ವಿಧಾನಸೌಧದ ಬಳಿ ಬಾಂಬ್ ಇಟ್ಟಿದ್ದ ಆರೋಪ ನ್ಯಾಯಾಲಯದಲ್ಲಿ ಖುಲಾಸೆಯಾಗಿತ್ತು. ಆದರೆ, ಇದೀಗ ಆ ಪ್ರಕರಣವನ್ನು ಮತ್ತೆ ತನಿಖೆಗೆ ಒಳಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಬೆಂಗಳೂರು (Bengaluru) ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹಾಗೂ ಗೃಹ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ. ವಿಧಾನಸೌಧದ ಬಳಿ ಬಾಂಬ್ ಇಟ್ಟಿದ್ದ ಕೇಸ್ (ಕ್ರೈಂ ನಂ. 243/2005) ಅನ್ನು ಪುನರ್‌ತೆರೆದು ತನಿಖೆ ನಡೆಸಬೇಕು. ಜತೆಗೆ, ಎನ್‌ಐಎ ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತಾವೇ ಬಾಂಬ್ ತಯಾರಿಸಿ ಇಟ್ಟಿರುವುದಾಗಿ ಒಪ್ಪಿಕೊಂಡಿರುವ ರೀತಿಯಲ್ಲಿ ಗಿರೀಶ್ ಮಟ್ಟಣ್ಣವರ್ ಹಲವಾರು ವಿಡಿಯೋಗಳಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ತಾವೇ ಬಾಂಬ್ ತಯಾರಿಸಿ ಇಟ್ಟಿರುವುದಾಗಿ ಒಪ್ಪಿಕೊಂಡಿರುವ ರೀತಿಯ ಹೇಳಿಕೆ ನೀಡಿದ್ದಾರೆ. ಅವರು ಆ ರೀತಿಯ ಹೇಳಿಕೆ ನೀಡಿರುವುದು ಸ್ಪಷ್ಟವಾಗಿದೆ. ಹೀಗಾಗಿ, ಕೇಸ್ ಈಗಾಗಲೇ ಕೋರ್ಟ್‌ನಲ್ಲಿ ಖುಲಾಸೆಯಾಗಿದ್ದರೂ, ಹೊಸ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಪುನಃ ತನಿಖೆ ನಡೆಸುವ ಅಗತ್ಯವಿದೆ ಎಂದು ಪ್ರಶಾಂತ್ ಸಂಬರಗಿ ದೂರಿನಲ್ಲಿ ಹೇಳಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಕೇಸ್ ತನಿಖೆ ವೇಳೆ, ದಾಳಿಕೋರರ ಟಾರ್ಗೆಟ್ ಧರ್ಮಸ್ಥಳ ಆಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಸದ್ಯ ಗಿರೀಶ್ ಮಟ್ಟಣ್ಣವರ್ ಕೂಡ ಧರ್ಮಸ್ಥಳ ವಿರುದ್ಧದ ಷಡ್ಯಂತ್ರದಲ್ಲಿ ಸಕ್ರಿಯವಾಗಿದ್ದಾರೆ. ಹೀಗಾಗಿ ಈ ಎರಡು ಪ್ರಕರಣಗಳ ನಡುವೆ ಲಿಂಕ್ ಇದೆಯೇ ಎಂಬುದನ್ನು ತನಿಖೆ ನಡೆಸಬೇಕಿದೆ ಎಂದು ಪ್ರಶಾಂತ್ ಸಂಬರಗಿ ಉಲ್ಲೇಖಿಸಿದ್ದಾರೆ.
ಗಿರೀಶ್ ಮಟ್ಟಣ್ಣವರ್ ಅವರನ್ನು ಎನ್‌ಐಎ ತನಿಖೆಗೆ ಒಳಪಡಿಸಬೇಕು. ಶಾಸಕರ ಭವನದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣವನ್ನೂ ಮರು ತನಿಖೆ ಮಾಡಬೇಕು. ಜಿಲೆಟಿನ್ ಹಾಗೂ ಇತರ ಸ್ಪೋಟಕ ವಸ್ತುಗಳಿಂದ ಬಾಂಬ್ ತಯಾರು ಮಾಡುವುದು ಸುಲಭ ಎಂದು ಅವರೇ ಹೇಳಿಕೊಂಡಿದ್ದಾರೆ ಎಂದು ಸಂಬರಗಿ ದೂರಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಅಂತಿಮ ಹಂತ ತಲುಪಿದ ಬುರುಡೆ ಚಿನ್ನಯ್ಯ ಕೇಸ್, ಎಸ್ಐಟಿ ಚಾರ್ಜ್ಶೀಟ್ ಬಹುತೇಕ ಸಿದ್ಧ
ಪ್ರಶಾಂತ್ ಸಂಬರಗಿ ಅವರು ಹದಿನೈದು ವಿಡಿಯೋಗಳ ಜೊತೆಗೆ ಈ ಸಂಬಂಧ ದಾಖಲೆಗಳನ್ನು ಪೊಲೀಸ್ ಆಯುಕ್ತರಿಗೆ ಹಾಗೂ ಗೃಹ ಇಲಾಖೆ ಕಾರ್ಯದರ್ಶಿಗೆ ಸಲ್ಲಿಸಿದ್ದು, ಪ್ರಕರಣದ ಮರು ತನಿಖೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.



