ತುಮಕೂರು ಪಾಲಿಕೆಯಲ್ಲಿ ಗೋಲ್ಮಾಲ್: ಹಳೇ ವಾಹನಕ್ಕೆ ಹೊಸ ಬಣ್ಣ ಬಳಿದು ರಸ್ತೆಗಿಳಿಸಿದ್ದಾರಾ 93 ಕಸದ ವಾಹನಗಳನ್ನು?

| Updated By: ಸಾಧು ಶ್ರೀನಾಥ್​

Updated on: Jan 09, 2023 | 6:41 PM

ವಾರ್ಡಗಳಿಗೆ ಹೋಗಿ ಕಸ ಸಂಗ್ರಹಿಸುತಿದ್ದ ಮೂರೇ ತಿಂಗಳಲ್ಲಿ ಸಾಲು ಸಾಲಾಗಿ‌ ಆಟೋ ಟಿಪ್ಪರ್ ಗಳು ಗ್ಯಾರೇಜ್ ಸೇರುತ್ತಿವೆ. ಹಳೇ ಗಾಡಿಗೆ ಹೊಸ ಬಣ್ಣ ಬಳಿದು ಅವ್ಯವಹಾರ ನಡೆಸಿದ್ದಾರಾ ಎಂಬ ಗುಮಾನಿ ಕೂಡ ಎದ್ದಿದೆ ಎನ್ನುತ್ತಾರೆ ಶ್ರೀನಿವಾಸ್- ಉಪಾಧ್ಯಕ್ಷರು, ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ.

ತುಮಕೂರು ಪಾಲಿಕೆಯಲ್ಲಿ ಗೋಲ್ಮಾಲ್: ಹಳೇ ವಾಹನಕ್ಕೆ ಹೊಸ ಬಣ್ಣ ಬಳಿದು ರಸ್ತೆಗಿಳಿಸಿದ್ದಾರಾ 93 ಕಸದ ವಾಹನಗಳನ್ನು?
ಹಳೇ ವಾಹನಕ್ಕೆ ಹೊಸ ಬಣ್ಣ ಬಳಿದು ರಸ್ತೆಗಿಳಿಸಿದ್ದಾರಾ 93 ಕಸದ ವಾನಹಗಳನ್ನು?
Follow us on

ತುಮಕೂರು ಮಹಾನಗರ ಪಾಲಿಕೆಯಲ್ಲಿ (Tumkur Municipal Council) ಭ್ರಷ್ಟಾಚಾರದ (Golmaal) ವಾಸನೆ ಕೇಳಿಬಂದಿದೆ. ಪಾಲಿಕೆ ಕಸ ಸಾಗಿಸಲು (Garbage) ಖರೀದಿಸಿದ 93 ಆಟೋ ಟಿಪ್ಪರ್ ನಲ್ಲಿ ಗೋಲ್ ಮಾಲ್ (Golmaal) ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಹಳೇ ವಾಹನಕ್ಕೆ ಹೊಸ ಬಣ್ಣ ಬಳಿದು ರಸ್ತೆಗಿಳಿಸಿದ್ದಾರಾ ಎಂಬ ಗುಮಾನಿ ಎದ್ದಿದೆ.

ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಸ ಸಾಗಿಸಲು ಖರೀದಿಸಿದ್ದ 93 ಅಟೋ ಟಿಪ್ಪರ್ ಈಗ ಪದೇ ಪದೇ ಸದ್ದು ಮಾಡುತ್ತಿದೆ. ಹೊಸ ಟಿಪ್ಪರನ್ನು ನಾಲ್ಕೈದು ತಿಂಗಳು ಮಳೆಯಲ್ಲಿ ನಿಲ್ಲಿಸಿ ಪಾಲಿಕೆ ಅಧಿಕಾರಿಗಳು ತುಕ್ಕು ಹಿಡಿಸಿದ್ದರು. ಕೆಲ ಟಿಪ್ಪರ್ ರೋಡಿಗಿಳಿಯುವ ಮುಂಚೆಯೇ ಕೆಟ್ಟು ಹೋಗಿತ್ತು.

ಆದರೆ ಈ ಟಿಪ್ಪರ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಟಿಪ್ಪರ್ ಖರೀದಿಯಲ್ಲಿ ಸಂಪೂರ್ಣ ಗೋಲ್ ಮಾಲ್ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್. ಬಸವರಾಜ್ ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದಾರೆ.

ಡೀಸೆಲ್ ಟಿಪ್ಪರ್ ಗೆ ಕೊಟೇಶನ್ ಕೊಟ್ಟು ಡೀಸೆಲ್ ವಾಹನದ ದರದಲ್ಲೇ ಪೆಟ್ರೋಲ್ ಟಿಪ್ಪರ್ ಖರೀದಿಸಿ ಗೋಲ್ ಮಾಲ್ ಮಾಡಲಾಗಿದೆ. ಒಂದು ಟಿಪ್ಪರ್ ಗೆ 6,59,919 ರೂಪಾಯಿ ಯಂತೆ 93 ಟಿಪ್ಪರ್ ಗೆ ಬರೊಬ್ಬರಿ 6 ಕೋಟಿ‌ 13 ಲಕ್ಷ ರೂ ಸಂದಾಯ ಮಾಡಲಾಗಿದೆ. ಅದೂ ಡೀಸೆಲ್ ವಾಹನ ಎಂದೇ ಸುಳ್ಳು ಹೇಳಿ ಹೆಚ್ಚಿನ ಹಣ ಕೊಟ್ಟು ಪೆಟ್ರೋಲ್ ವಾಹನ ಖರೀದಿಸಲಾಗಿದೆ. ಅಸಲಿಗೆ ಒಂದು ಪೆಟ್ರೋಲ್ ಟಿಪ್ಪರ್ ಬೆಲೆ 5 ಲಕ್ಷ ರೂಪಾಯಿ. ಇದರಲ್ಲಿ ಸರಿಸುಮಾರು 1.25 ಕೋಟಿ ರೂ ಅವ್ಯವಹಾರ ಮಾಡಲಾಗಿದೆ ಎಂದು ಜಿ‌.ಎಸ್.ಬಸವರಾಜು ಆರೋಪ ಮಾಡಿದ್ದಾರೆ.

ಶಿವಮೊಗ್ಗ ಪಾಲಿಕೆಯಲ್ಲಿ ಇದೇ ಮಾದರಿಯ ಟಿಪ್ಪರ್ ಗೆ 5 ಲಕ್ಷ 35 ಸಾವಿರ ರೂ ಕೊಟ್ಟು ಖರೀದಿಸಲಾಗಿದೆ. ಅದರಲ್ಲೂ ಖರೀದಿಸಿದ 93 ವಾಹನಗಳನ್ನೂ ಎರಡೆರೆಡು ಬಾರಿ ರಿಜಿಸ್ಟರ್ ಮಾಡಿಸಿರುವುದು ಅನುಮಾನ ಹುಟ್ಟುವಂತೆ ಮಾಡಲಾಗಿದೆ‌. 2022 ರ ಜುಲೈ 5 ರಂದು ಮೊದಲ ಬಾರಿ ತುಮಕೂರು ಆರ್ ಟಿ ಒ ನಲ್ಲಿ ಕೆ.ಎ. 06 ಜಿ ಎಂದು ರಿಜಿಸ್ಟರ್ ಮಾಡುತ್ತಾರೆ. ನಂತರ ಒಂದೂವರೆ ತಿಂಗಳ ಬಳಿಕ ಅಂದರೆ
ಆಗಸ್ಟ್ 25 ರಂದು ಮತ್ತೊಮ್ಮೆ ಕೆ.ಎ.06 ಎ.ಬಿ. ಎಂದು ಮತ್ತೆ ರಿಜಿಸ್ಟರ್ ಮಾಡುತ್ತಾರೆ.

ಅಧಿಕಾರಿಗಳ ಈ ಎಡವಟ್ಟಿನ ಹಿಂದೆ ಬಲವಾದ ಗೋಲ್ ಮಾಲ್ ವಾಸನೆ ಕಂಡು ಬಂದಿದೆ. ಇದರ ಜೊತೆಗೆ ಅಕ್ಟೋಬರ್ ತಿಂಗಳಲ್ಲಿ ಎಲ್ಲಾ ಟಿಪ್ಪರ್ ಗಳನ್ನು ರೂಟ್ ಗೆ ಬಿಡಲಾಗಿತ್ತು. ವಾರ್ಡಗಳಿಗೆ ಹೋಗಿ ಕಸ ಸಂಗ್ರಹಿಸುತಿದ್ದ ಮೂರೇ ತಿಂಗಳಲ್ಲಿ ಸಾಲು ಸಾಲಾಗಿ‌ ಆಟೋ ಟಿಪ್ಪರ್ ಗಳು ಗ್ಯಾರೇಜ್ ಸೇರುತ್ತಿವೆ. ಹಳೇ ಗಾಡಿಗೆ ಹೊಸ ಬಣ್ಣ ಬಳಿದು ಅವ್ಯವಹಾರ ನಡೆಸಿದ್ದಾರಾ ಎಂಬ ಗುಮಾನಿ ಕೂಡ ಎದ್ದಿದೆ ಎನ್ನುತ್ತಾರೆ ಶ್ರೀನಿವಾಸ್- ಉಪಾಧ್ಯಕ್ಷರು, ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ.

ಯಾವುದೇ ವಾಹನ, ಸಂಬಂಧ ಪಟ್ಟ ಸಂಸ್ಥೆಗೆ ಡೆಲಿವರಿ ಆದಾಗ ಥರ್ಡ್​​ ಪಾರ್ಟಿ ತಪಾಸಣೆ ಮಾಡಬೇಕು. ಎಸ್. ಐ ಟಿ ಸಂಸ್ಥೆಯಿಂದ ಶೋ ರೂಂ ಲ್ಲಿ ಇರುವಾಗಲೇ ಥರ್ಡ್ ಪಾರ್ಟಿ ತಪಾಸಣೆ ಶಾಸ್ತ್ರ ಮುಗಿಸಲಾಗಿದೆ. ಅಲ್ಲೇ ಟಾಟಾ ಕಂಪನಿಗೆ ಅನುಕೂಲವಾಗುವಂತೆ ಟೆಂಡರ್ ಕಾಲ್ ಮಾಡಲಾಗಿದೆ. ಹಾಗಾಗಿ ಮಹೀಂದ್ರಾ, ಐಚರ್ ನಂತಹ ಕಂಪನಿಗಳು ಬಿಡ್ ನಲ್ಲಿ ಭಾಗವಹಿಸಿಲ್ಲ. ಪಾಲಿಕೆಯಲ್ಲಿ ನಡೆದ ಈ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ದ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಮಾನವ ಪರಿಸರ ಸಂರಕ್ಷಣಾ ಪಡೆ ಮುಂದಾಗಿದೆ.

ವರದಿ: ಮಹೇಶ್, ಟಿವಿ9, ತುಮಕೂರು

Published On - 6:39 pm, Mon, 9 January 23