ಮತಾಂತರ ಆಗೋರು ಅರ್ಜಿ ಕೊಡಬೇಕು, ನೊಟೀಸ್ ಬೋರ್ಡ್ಗೆ ಅಂಥವರ ಹೆಸರು ಹಾಕ್ತೀವಿ: ಸಚಿವ ಮಾಧುಸ್ವಾಮಿ
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಲು ತೀರ್ಮಾನಿಸಲಾಗಿದೆ. ಆದರೆ ಕಾಯ್ದೆಯ ರೂಪುರೇಷೆ ಬಗ್ಗೆ ತಿಳಿದುಕೊಳ್ಳಲು ನಾನು ಸಮಯ ಕೇಳಿದ್ದೇನೆ
ತುಮಕೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಚರ್ಚೆಗೆ ಮಂಡಿಸಲಾಗುವುದು ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಲು ತೀರ್ಮಾನಿಸಲಾಗಿದೆ. ಆದರೆ ಕಾಯ್ದೆಯ ರೂಪುರೇಷೆ ಬಗ್ಗೆ ತಿಳಿದುಕೊಳ್ಳಲು ನಾನು ಸಮಯ ಕೇಳಿದ್ದೇನೆ. ಯಾರಿಗೂ ನೋವು ಆಗದ, ಅಡಚಣೆ ಆಗದ ರೀತಿಯಲ್ಲಿ ಕಾಯ್ದೆ ಇರಬೇಕು ಎಂದು ಯೋಚಿಸಿದ್ದೇವೆ ಎಂದರು. ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಯು ಈಗಾಗಲೇ ಅಸ್ತಿತ್ವದಲ್ಲಿದೆ. ಇದಕ್ಕೆ ಇನ್ನಷ್ಟು ಬಲ ತುಂಬುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಬಲವಂತ ಹಾಗೂ ಆಮಿಷ ಒಡ್ಡಿ ಮತಾಂತರ ಮಾಡುವುದನ್ನು ನಿಷೇಧಿಸಿದ್ದೇವೆ. ಇಂಥ ಕೃತ್ಯಗಳಲ್ಲಿ ತೊಡಗುವವರಿಗೆ ಯಾವ ರೀತಿಯ ಶಿಕ್ಷೆ ಕೊಡಬೇಕು ಎನ್ನುವ ಬಗ್ಗೆ ಚರ್ಚೆಗಳು ನಡೆಯಬೇಕಿದೆ. ಈಗಿರುವ ಕಾನೂನಿನಲ್ಲಿ ಬಲವಂತದ ಮತಾಂತರ ಶಿಕ್ಷಾರ್ಹ ಅಪರಾಧ ಎಂಬ ಉಲ್ಲೇಖವಿದೆ. ಸ್ವಯಂಪ್ರೇರಿತ ಮತಾಂತರದ ರೂಪುರೇಷೆ ವಿವರಿಸಲು ಮತ್ತು ಮತಾಂತರ ಆಗುವವರು ಅರ್ಜಿ ಸಲ್ಲಿಸಲು ಅಗತ್ಯ ವ್ಯವಸ್ಥೆಗಳನ್ನು ಜಾರಿ ಮಾಡಲಾಗುವುದು ಎಂದು ಹೇಳಿದರು. ಮತಾಂತರಕ್ಕೆ ಅರ್ಜಿ ಸಲ್ಲಿಸಿದವರು ತಾವು ಬಲವಂತದಿಂದ ಮತಾಂತರ ಆಗುತ್ತಿಲ್ಲ ಎಂಬುದನ್ನೂ ನಿರೂಪಿಸಬೇಕಾಗುತ್ತದೆ. ಇದು ಜಿಲ್ಲಾಧಿಕಾರಿಗೆ ಮನವರಿಕೆಯಾದ ನಂತರ ಅರ್ಜಿಯನ್ನು ಪುರಸ್ಕರಿಸುವ ಅಥವಾ ತಿರಸ್ಕರಿಸುವ ತೀರ್ಮಾನವನ್ನು ಅವರು ತೆಗೆದುಕೊಳ್ಳುತ್ತಾರೆ. ಮತಾಂತರಕ್ಕೆ ಒಪ್ಪಿರುವ ಜನರ ಪರವಾಗಿ ಸಂಘ-ಸಂಸ್ಥೆಗಳೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಒಮ್ಮೆ ಮತಾಂತರಗೊಂಡ ವ್ಯಕ್ತಿಯು ತನ್ನ ಮೂಲ ಜಾತಿ ಮತ್ತು ಧರ್ಮವನ್ನು ಕಳೆದುಕೊಳ್ಳುತ್ತಾನೆ. ಮದುವೆ ನೋಂದಣಿ ಮಾಡುವ ರೀತಿಯಲ್ಲಿಯೇ ಮತಾಂತರವನ್ನೂ ನೋಂದಣಿ ಮಾಡಲಾಗುತ್ತದೆ. ಮತಾಂತರಗೊಂಡ ವ್ಯಕ್ತಿಯ ಹೆಸರನ್ನು ನೊಟೀಸ್ ಬೋರ್ಡ್ನಲ್ಲಿ ಪ್ರಕಟಿಸಲಾಗುತ್ತದೆ. ಯಾವುದೇ ದೂರು ಆಕ್ಷೇಪ ಇಲ್ಲದಿದ್ದರೆ ಮತಾಂತರದ ಅರ್ಜಿಯನ್ನು ಪುರಸ್ಕರಿಸಲಾಗುತ್ತದೆ. ಪರಿಶಿಷ್ಟ ಜಾತಿಯ ವ್ಯಕ್ತಿಯು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಅಂಥವರನ್ನು ಅಲ್ಪಸಂಖ್ಯಾತ ಎಂದು ಗುರುತಿಸಲಾಗುತ್ತದೆ. ಅವರ ಮೂಲ ಜಾತಿ ಪ್ರಮಾಣಪತ್ರವೂ ಬದಲಾಗುತ್ತದೆ. ಪರಿಶಿಷ್ಟ ಪಂಗಡದವರು ಮತಾಂತರಗೊಂಡರೇ ಅವರು ಮೂಲ ಜಾತಿಯ ಪ್ರಮಾಣ ಪತ್ರದಲ್ಲೇ ಮುಂದುವರೆಯುತ್ತಾರೆ ಎಂದು ಕಾಯ್ದೆಯ ವಿವರಗಳನ್ನು ನೀಡಿದರು.
ಪರಿಶಿಷ್ಟ ಪಂಗಡ (Scheduled Tribe – ST) ಎಂದರೆ ಅದೊಂದು ಸಮುದಾಯ ಅಲ್ಲ. ಗುಡ್ಡಗಾಡಿನಲ್ಲಿ ಬದುಕುವವರು ಎಂದು ಅರ್ಥ. ಹಾಗಾಗಿ ಅವರು ಬುಡಕಟ್ಟು ಜನಾಂಗದಲ್ಲಿಯೇ ಇರುತ್ತಾರೆ. ಈ ಮಾದರಿಯ ಮತಾಂತರ ರೂಪುರೇಷೆ ತರಲು ಚಿಂತನೆ ನಡೆದಿದೆ ಎಂದು ಅವರು ನುಡಿದರು.
ಭಾವುಕರಾದ ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಜೆಸಿ ಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಮಾಧುಸ್ವಾಮಿ ಗದ್ಗದಿತರಾದರು. ಗಟ್ಟಿಸ್ವಭಾವದ ಮಾಧುಸ್ವಾಮಿ ಅವರು ಗದ್ಗಿತರಾದ ಘಟನೆಯೂ ನಡೆಯಿತು. ಎತ್ತಿನಹೊಳೆ ಯೋಜನೆಯಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ 231 ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಚಾಲನೆಕೊಟ್ಟು ಮಾತನಾಡಿದ ಅವರು, ಮಳೆರಾಯನ ಕೃಪೆಯಿಂದ ಕೆರೆಕಟ್ಟೆ ತುಂಬಿದೆ ಎಂದು ಭಾವುಕರಾದರು. ಕೆರೆಕಟ್ಟೆಗಳನ್ನು ತುಂಬಿಸಬೇಕು ಎನ್ನುವುದು ನನ್ನ ಮಹದಾಸೆಯಾಗಿತ್ತು. ಕಳೆದ ಚುನಾವಣೆಯಲ್ಲಿ ಈ ಕುರಿತು ಮಾತು ಕೊಟ್ಟಿದ್ದೆ. ಇಂದು ಕೆರೆಗಳು ತುಂಬಿದೆ. ನಿನ್ನೆ ದಿನ ಮಹಿಳೆಯೊಬ್ಬರು ದಾರಿಯಲ್ಲಿ ಸಿಕ್ಕಿದ್ದರು. ‘ಏನೈತಪ್ಪಾ ನಿನ್ನ ಬಾಯಲ್ಲಿ. ಅದ್ಯಾವ್ ಬಾಯಲ್ಲಿ ಅಂದಿದ್ಯೋ ಎಲ್ಲಾ ಕೆರೆ ತುಂಬಿಸ್ತಿನಿ ಅಂತಾ. ಮಳೆನೇ ಬಂದು ಎಲ್ಲಾ ಕೆರೆ ತುಂಬಿ ಹೊಯ್ತು ಅಂದ್ರು. ಆ ಮಹಾತಾಯಿಯ ಹಾರೈಕೆ ಕಂಡು ನನ್ನ ಮನಸ್ಸು ತುಂಬಿ ಬಂತು. ನಾನು ನನ್ನ ನಾಲಿಗೆ ಉಳಿಸಿಕೊಳ್ಳಬೇಕು ಅಂದ್ರೆ ಎತ್ತಿನಹೊಳೆಯಿಂದ ನೀರು ಹರಿಸುವ ಯೋಜನೆ ಪೂರ್ಣಗೊಳಿಸಬೇಕು’ ಎಂದು ಹೇಳಿ ಭಾವುಕರಾದರು.
ಇದನ್ನೂ ಓದಿ: ನೀರಾವರಿ ಯೋಜನೆಯ ವಿಚಾರಕ್ಕೆ ಭುಗಿಲೆದ್ದ ಅಸಮಾಧಾನ, ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ದೂರು ನೀಡುವುದಾಗಿ ಸುರೇಶ್‌ಗೌಡ ಎಚ್ಚರಿಕೆ ಇದನ್ನೂ ಓದಿ: ತಾಪಂ, ಜಿಪಂ ಚುನಾವಣೆ ಮೇಲೆ ಕಣ್ಣು: ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ, ಜಿಲ್ಲಾ ಸಚಿವ ಮಾಧುಸ್ವಾಮಿ ಮೇಲೆ ಒತ್ತಡ
Published On - 5:41 pm, Sun, 12 December 21