ಡ್ರೋನ್ ಪ್ರತಾಪ್ಗೆ ಮತ್ತಷ್ಟು ಸಂಕಷ್ಟ: ಮುಖ್ಯಮಂತ್ರಿಗಳ ಕಚೇರಿಯಿಂದ ಬಂತು ಮಹತ್ವದ ಸೂಚನೆ
ತುಮಕೂರಿನಲ್ಲಿ ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟಿಸಿದ ಪ್ರಕರಣದಲ್ಲಿ ಡ್ರೋನ್ ಪ್ರತಾಪ್ ಅವರನ್ನು ಮಿಡಿಗೇಶಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಸಂಪೂರ್ಣ ವರದಿ ನೀಡುವಂತೆ ಮುಖ್ಯಮಂತ್ರಿಗಳ ಕಚೇರಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತುಮಕೂರು, ಡಿಸೆಂಬರ್ 16: ಕೃಷಿ ಹೊಂಡಕ್ಕೆ ಸೋಡಿಯಂ (Sodium) ಎಸೆದು ಸ್ಫೋಟಿಸಿದ್ದ ಘಟನೆಯ ಸಂಪೂರ್ಣ ವರದಿ ನೀಡುವಂತೆ ಮುಖ್ಯಮಂತ್ರಿಗಳ ಕಚೇರಿ (CM Office) ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಧುಗಿರಿ ಸಿಪಿಐ ಕಚೇರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತೆರಳಿ ಮಾಹಿತಿ ಪಡೆದುಕೊಂಡರು. ಬಳಿಕ, ಅಧಿಕಾರಿಗಳು ಸೋಡಿಯಂ ಸ್ಫೋಟಗೊಂಡ ಜನಕಲೋಟಿ ಬಳಿಯ ಕೃಷಿಹೊಂಡಕ್ಕೆ ತೆರಳಿ ನೀರು ಮತ್ತು ಸ್ಥಳದಲ್ಲಿದ್ದ ಕೆಮಿಕಲ್ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಿದ್ದಾರೆ.
ಏನಿದು ಪ್ರಕರಣ
ಡ್ರೋನ್ ಪ್ರತಾಪ್ (Drone Pratap) ಅವರು ಕೆಲ ದಿನಗಳ ಹಿಂದೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಬಳಿ ಕೃಷಿಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟಿಸಿದ್ದರು. ಅನಮತಿ ಇಲ್ಲದೆ ಸ್ಫೋಟಿಸಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಕಳೆದ ಗುರುವಾರ (ಡಿಸೆಂಬರ್ 12) ಮಿಡಿಗೇಶಿ ಪೊಲೀಸರ ಬಂಧಿಸಿದ್ದರು. ಬಳಿಕ, ಪೊಲೀಸರು ಡ್ರೋನ್ ಪ್ರತಾಪ್ನನ್ನು ಶುಕ್ರವಾರ (ಡಿಸೆಂಬರ್ 13) ರಂದು ಮಧುಗಿರಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಪೊಲೀಸರ ಮನವಿ ಮೇರೆಗೆ ನ್ಯಾಯಾಲಯ ಡ್ರೋನ್ ಪ್ರತಾಪ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದರು.
ಸೋಮವಾರ (ಡಿ.16) ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದು, ಪೊಲೀಸರು ಡ್ರೋನ್ ಪ್ರತಾಪ್ ಅವರನ್ನು ನಾಯ್ಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯ ಡ್ರೋನ್ ಪ್ರತಾಪ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಇದನ್ನೂ ಓದಿ: ಕೃಷಿ ಹೊಂಡದಲ್ಲಿ ಸ್ಫೋಟ: ಡ್ರೋನ್ ಪ್ರತಾಪ್ಗೆ 10 ದಿನ ನ್ಯಾಯಾಂಗ ಬಂಧನ
ಪ್ರಕರಣ ಸಂಬಂಧ ಡ್ರೋನ್ ಪ್ರತಾಪ್ ಅವರ ವಿರುದ್ಧ ಮಿಡಿಗೇಶಿ ಠಾಣೆ ಪೊಲೀಸರು BNS ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ಜಮೀನು ಮಾಲೀಕನ ಅನುಮತಿ ಇಲ್ಲದೆ ಸ್ಫೋಟ
ಜಮೀನು ಮಾಲೀಕನಿಗೆ ತಾನು ಸೋಡಿಯಂನಿಂದ ಸ್ಫೋಟಿಸುತ್ತಿರುವ ವಿಚಾರ ತಿಳಿಸದೆ, ಪ್ಲಾಸಿಕ್ ಕವರ್ನಲ್ಲಿ ಸೋಡಿಯಂ ಉಂಡೆಯನ್ನು ಹಾಕಿ ಕೃಷಿ ಹೊಂಡದಲ್ಲಿ ಡ್ರೋನ್ ಪ್ರತಾಪ್ ಎಸೆದಿದ್ದಾರೆ. ಆಗ, ದೊಡ್ಡ ಪ್ರಮಾಣದ ಸದ್ದಿನೊಂದಿಗೆ ಸೋಡಿಯಂ ಸ್ಫೋಟಗೊಂಡಿದೆ. ಇದರಿಂದ ಅಕ್ಕ-ಪಕ್ಕದ ತೋಟದಲ್ಲಿದ್ದ ಜನರು ಮತ್ತು ಮನೆಯವರು ಗಾಭರಿಗೊಂಡಿದ್ದರು.
ಸ್ಫೋಟಕ್ಕೆ ಅನುಮತಿ ಕಡ್ಡಾಯ
ಇಂತಹ ಪ್ರಯೋಗಗಳಿಗೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಸ್ಥಳೀಯ ಪೊಲೀಸ್ ಠಾಣೆ ಹಾಗೂ ಸಂಬಂಧಿಸಿದ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಇಲಾಖೆ ಸೇರಿದಂತೆ ಹಲವು ಇಲಾಖೆಯ ಅನುಮತಿ ಪಡೆಯಬೇಕು. ಆದರೆ, ಡ್ರೋನ್ ಪ್ರತಾಪ್ ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ ಎಂದು ಮಾಹಿತಿ ದೊರೆತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ