ಡಿಕೆ ಶಿವಕುಮಾರ್ ಪತ್ರ ಬರೆದಾಕ್ಷಣವೇ ಸರ್ಕಾರ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್​ ಪಡೆಯಲ್ಲ: ಪರಮೇಶ್ವರ್

2022ರ ಏಪ್ರಿಲ್‌ 16ರಂದು ನಡೆದ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಸುಮಾರು 40 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಈ ಪ್ರಕರಣವನ್ನು ಕೈಬಿಡುವ ಬಗ್ಗೆ ಪ್ರಕ್ರಿಯೆಗಳು ನಡೆಯತ್ತಿವೆ ಎಂಬ ಮಾತುಗಳ ನಡುವೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಗಲಭೆಯಲ್ಲಿ ಬಂಧಿತರಾಗಿರುವ ಅಮಾಯಕರನ್ನು ಬಿಡುಗಡೆ ಮಾಡುವ ಬಗ್ಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಗೃಹಸಚಿವ ಜಿ ಪರಮೇಶ್ವರ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಡಿಕೆ ಶಿವಕುಮಾರ್ ಪತ್ರ ಬರೆದಾಕ್ಷಣವೇ ಸರ್ಕಾರ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್​ ಪಡೆಯಲ್ಲ: ಪರಮೇಶ್ವರ್
ಡಾ.ಜಿ.ಪರಮೇಶ್ವರ ಮತ್ತು ಡಿ.ಕೆ.ಶಿವಕುಮಾರ್
Edited By: Rakesh Nayak Manchi

Updated on: Oct 03, 2023 | 3:31 PM

ತುಮಕೂರು, ಅ.3: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಅವರು ಪತ್ರ ಬರೆದ ತಕ್ಷಣವೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆಯುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ಹೇಳಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿದ ಅವರು, ಸಾಕಷ್ಟು ಶಾಸಕರು ಪತ್ರ ಬರೆಯುತ್ತಾರೆ. ನಾವು ಅಮಾಯಕರಿದ್ದೇವೆ, ಅಂತ ಅವರಿಗೆ ಅರ್ಜಿ ಕೊಟ್ಟಿರುತ್ತಾರೆ. ಆ ಕೇಸ್​ನಲ್ಲೂ ಸೇರಿಸಿದ್ದಾರೆ, ವಾಪಸ್ ತೆಗೆದುಕೊಳ್ಳಿ ಅಂತ ಮನವಿ ಮಾಡಿರುತ್ತಾರೆ. ಹಾಗಂತ ಯಾರಾದರು ಪತ್ರ ಬರೆದ ತಕ್ಷಣ ಪ್ರಕರಣವನ್ನು ವಾಪಸ್ ತೆಗೆದುಕೊಳ್ಳಲ್ಲ ಎಂದರು.

ಶಿವಕುಮಾರ್ ಅವರು ಪತ್ರ ಬರೆದ ತಕ್ಷಣವೇ ಸರ್ಕಾರ ಕೇಸ್ ವಾಪಸ್ ತೆಗೆದುಕೊಳ್ಳಲ್ಲ. ಅದಕ್ಕೊಂದು ಪದ್ಧತಿಯಿದೆ. ಸಚಿವ ಸಂಪುಟ ಉಪ ಸಮಿತಿ ಮಾಡಿದ್ದಾರೆ. ಗೃಹ ಇಲಾಖೆಯಲ್ಲಿ ಪರಿಶೀಲನೆ ನಡೆಸಿದ ನಂತರ ಪ್ರಸ್ತಾಪವನ್ನು ಸಮಿತಿ ಮುಂದೆ ಇಡುತ್ತೇವೆ. ಕಾನೂನು ಹಾಗೂ ಇಲಾಖೆಯ ತಜ್ಞರು ಚರ್ಚೆ ನಡೆಸುತ್ತಾರೆ. ಇವರು ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣವನ್ನು ತೆಗೆಯಬಹುದೇ ಅಥವಾ ತೆಗೆಯಬಾರದೇ ಎಂಬುದನ್ನು ತಿಳಿಸುತ್ತಾರೆ ಎಂದರು.

ಉಪ ಸಮಿತಿಯಲ್ಲಿಯೂ ಪ್ರಕರಣ ತೆಗೆಯಬಹುದು ಅಂತ ಸೂಚಿಸಿದರೆ ಮತ್ತೇ ಸಂಪುಟ ಸಭೆ ಮುಂದೆ ಇಡಲಾಗುತ್ತದೆ. ಇಲ್ಲಿ ಅಂತಿಮವಾದರೆ ಮಾತ್ರ ಪ್ರಕರಣವನ್ನು ಹಿಂಪಡೆಯಲಾಗಯತ್ತದೆ. ಇದು ಯಾವುದೇ ಸಮುದಾಯದ ಓಲೈಕೆ ಅಲ್ಲ. ಎಲ್ಲಾ ಸರ್ಕಾರದಲ್ಲೂ ಇದು ನಡೆಯುತ್ತ. ಹಿಂದೆ ಇದ್ದ ಸರ್ಕಾರ ನಾಲ್ಕು ವರ್ಷದಲ್ಲಿ ತೆಗೆದಿದ್ದಾರೆ. ಮುಗ್ಧರನ್ನು ತೆಗೆಯುವ ಕೆಲಸವನ್ನು ಎಲ್ಲಾ ಸರ್ಕಾರಗಳು ಮಾಡಿದೆ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ, ಪರಮೇಶ್ವರ್ ಕುಮ್ಮಕ್ಕಿನಿಂದಲೇ ಶಿವಮೊಗ್ಗದಲ್ಲಿ ಗಲಾಟೆ ನಡೆದಿದೆ: ಶೋಭಾ ಕರಂದ್ಲಾಜೆ ಆರೋಪ

ಶಿವಮೊಗ್ಗದ ರಾಗಿಗುಡ್ಡೆಯಲ್ಲಿ ನಡೆದ ಗಲಾಟೆಗೆ ಸಿದ್ದರಾಮಯ್ಯ ಮತ್ತು ಪರಮೇಶ್ವರ ಕಾರಣ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ, ಶೋಭಾ ಕರಂದ್ಲಾಜೆ ಕುಮ್ಮಕ್ಕಿನಿಂದ ಗಲಭೆ ಆಗಿದೆ ಅಂತ ಹೇಳಿ ಬಿಡಬಹುದಾ? ನಾನು ಜವಬ್ದಾರಿ ಸ್ಥಾನದಲ್ಲಿ ಇರುವವನು. ಹಾಗೆಲ್ಲ ಹೇಳಲ್ಲ. ಸುಲಭವಾಗಿ ಮಾತನಾಡೋದನ್ನ ನಿಲ್ಲಿಸಬೇಕು. ಅವರು ಜವಬ್ದಾರಿ ಸ್ಥಾನದಲ್ಲಿದ್ದಾರೆ, ತಿಳಿದು ಮಾತನಾಡೋದನ್ನ ಕಲಿತುಕೊಂಡರೆ ಬಹಳ ಒಳ್ಳೆದು ಎಂದರು.

ಘಟನೆ ನಡೆದಿದೆ, ಅದನ್ನು ನಿಯಂತ್ರಣ ಮಾಡಿದ್ದೇವೆ. ನಿಯಂತ್ರಣ ಮಾಡದಿದ್ದರೆ ದೊಡ್ಡದಾಗುತ್ತಿತ್ತು. ಅದನ್ನು ಮೊದಲೇ ತಿಳಿದು‌ ಪೊಲೀಸರು ನಿಯಂತ್ರಣ ಮಾಡಿದ್ದಾರೆ. ಅದಕ್ಕೆ ಅಭಿನಂದಿಸಬೇಕು ಎಂದರು. ನಿಗಮಮಂಡಳಿ ನೇಮಕ ವಿಚಾರವಾಗಿ ಮಾತನಾಡಿದ ಅವರು, ಆದಷ್ಟು ಶೀಘ್ರವಾಗಿ ನೇಮಕ‌ ಮಾಡುತ್ತೇವೆ. ಮುಖ್ಯಮಂತ್ರಿಗಳು ಅದನ್ನು ಗಮನಿಸಿದ್ದಾರೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us