ತುಮಕೂರು ಸಂಸದ ಬಸವರಾಜು ನಪುಂಸಕ ಎಂದ ಗುಬ್ಬಿ ಶಾಸಕ ಎಸ್ಆರ್ ಶ್ರೀನಿವಾಸ್
ತುಮಕೂರು ಬಿಜೆಪಿ ಸಂಸದ ಬಸವರಾಜು ವಿರುದ್ಧ ಗುಬ್ಬಿ ಶಾಸಕ ಎಸ್ಆರ್ ಶ್ರೀನಿವಾಸ್ ನಾಲಗೆ ಹರಿಬಿಟ್ಟಿದ್ದಾರೆ. ತುಮಕೂರಿನಲ್ಲೊಬ್ಬ ನಪುಂಸಕ ಸಂಸದ ಇದ್ದಾನೆ. ಯಾವ ಪುರುಷಾರ್ಥಕ್ಕಾಗಿ ಅಂತಹವರನ್ನ ನೀವು ಗೆಲ್ಲಿಸಿ ಕಳಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಿಂದ ಬಡವರ ಹೊಟ್ಟೆ ತುಂಬುದಿಲ್ಲ ಎಂದಿದ್ದಾರೆ.
ತುಮಕೂರು, ಮಾ.24: ಬಿಜೆಪಿ ಸಂಸದ ಜಿಎಸ್ ಬಸವರಾಜು (GS Basavaraju) ವಿರುದ್ಧ ನಾಲಗೆ ಹರಿಬಿಟ್ಟ ಗುಬ್ಬಿ ಶಾಸಕ ಎಸ್ಆರ್ ಶ್ರೀನಿವಾಸ್ (SR Srinivas), ತುಮಕೂರಿನಲ್ಲೊಬ್ಬ (Tumkur) ನಪುಂಸಕ ಸಂಸದ ಇದ್ದಾನೆ. ಸಂಸದ ಬಸವರಾಜು ಸಂಸತ್ನಲ್ಲಿ ಒಂದೇ ಒಂದು ದಿನ ಮಾತನಾಡಿಲ್ಲ. ಯಾವ ಪುರುಷಾರ್ಥಕ್ಕಾಗಿ ಅಂತಹವರನ್ನ ನೀವು ಗೆಲ್ಲಿಸಿ ಕಳಿಸುತ್ತೀರಾ ಎಂದು ಪ್ರಶ್ನಿಸಿ, ನಪುಂಸಕರು ನಮಗೆ ಬೇಕಾಗಿಲ್ಲ. ರಾಜ್ಯದ ಅಭಿವೃದ್ಧಿ ಆಗಬೇಕು ಅಂದರೆ ಮುದ್ದಹನುಮೇಗೌಡ ಅವರನ್ನು ಗೆಲ್ಲಿಸಬೇಕು. ಮುದ್ದಹನುಮೇಗೌಡರು ಸಂಸತ್ನಲ್ಲಿ ಮಾತನಾಡಿದ್ದಾರೆ. ಇಂತಹವರು ಬೇಕಾಗಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿಯ 26 ಸಂಸದರಿದ್ದಾರೆ, ಎಲ್ಲರೂ ಮೋದಿಗೆ ಹೆದರುತ್ತಾರೆ. ಮೋದಿ ಎದುರು ಬಂದರೆ ಗಢಗಢ ನಡುಗಿ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಾರೆ ಎಂದರು. ಇವತ್ತು ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಈ ಬರಗಾಲ ಎದುರಿಸಲು ಕೇಂದ್ರದ ಬಳಿ 18 ಸಾವಿರ ಪರಿಹಾರ ಕೇಳಲಾಗಿದೆ. ಇದುವರೆಗೂ ಒಂದು ಪೈಸ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಕೇಂದ್ರದ ಬಳಿ ಬೇಡುವ ಸ್ಥಿತಿಗೆ ಮೋದಿ ತಂದಿದ್ದಾರೆ ಎಂದರು.
ಇದನ್ನೂ ಓದಿ: ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಬದಲಾಗ್ತಾರಾ ಸಿಎಂ?ಶಾಸಕ S.R ಶ್ರೀನಿವಾಸ್ ಸ್ಫೋಟಕ ಹೇಳಿಕೆ
ನರೇಂದ್ರ ಮೋದಿಯಿಂದ ಕರ್ನಾಟಕ ರಾಜ್ಯಕ್ಕೆ ಮೋಸವಾಗಿದೆ. ಇದುವರೆಗೂ ರಾಜ್ಯಕ್ಕೆ ಕೇಂದ್ರ ಬರ ಪರಿಹಾರ ಬಿಡುಗಡೆ ಮಾಡಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರಿಗೂ ಪಾಲು ಕೊಡೋದು ಕೇಂದ್ರದ ಕರ್ತವ್ಯ. ಕರ್ತವ್ಯ ನಿರ್ವಹಣೆ ಮಾಡೋದ್ರಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸಬೇಕು ಅಂದ್ರೆ ಕಾಂಗ್ರೆಸ್ ಗೆಲ್ಲಿಸಿ ಎಂದರು.
ರಾಮ ಮಂದಿರದಿಂದ ಬಡವನ ಹೊಟ್ಟೆ ತುಂಬಲ್ಲ
ಜಾತಿ-ಜಾತಿ, ಧರ್ಮ-ಧರ್ಮಗಳ ಸಂಘರ್ಷ ಉಂಟು ಮಾಡುವುದುದು, ದೇವರನ್ನ ತೋರಿಸುವುದೇ ಬಿಜೆಪಿಯವರ ಅಜಂಡಾವಾಗಿದೆ. ಶ್ರೀರಾಮಮಂದಿರದಿಂದ ಬಡವನ ಹೊಟ್ಟೆ ತುಂಬಲ್ಲ ಎಂದ ಶ್ರೀನಿವಾಸ್, ಈ ಚುನಾವಣೆಯಲ್ಲಿ ಬಿಜೆಪಿಯವರು ಶ್ರೀರಾಮನನ್ನು ತೋರಿಸುತ್ತಿದ್ದಾರೆ. ನಾವು ರಾಮನ ಭಕ್ತರೇ, ಹನುಮನ ರೀತಿ ಎದೆಬಗೆದು ತೋರಿಸುತ್ತಿಲ್ಲ. ಅಲ್ಲಿ ರಾಮಮಂದಿರ ನಿರ್ಮಿಸಿದರೆ ಇಲ್ಲಿರುವ ಬಡವನ ಹೊಟ್ಟೆ ತುಂಬಲ್ಲ. ಸಿದ್ದರಾಮಯ್ಯ ಕೊಟ್ಟ 5 ಕೆಜಿ ಅಕ್ಕಿಯಿಂದ ಬಡವನ ಹೊಟ್ಟೆ ತುಂಬುತ್ತದೆ. ಸಿದ್ದರಾಮಯ್ಯ ಬಡವರ ಪರ, ಹಿಂದುಳಿದವರ ಪರ ಕೆಲಸ ಮಾಡುತ್ತಿದ್ದಾರೆ ಎಂದರು.
ವಾಸಣ್ಣ ಆ ಗುಂಪು ಈ ಗುಂಪು ಅಂತಾರೆ, ಆದರೆ ನಮ್ಮ ತಾಯಾಣೆಗೂ ನಾನು ಕಾಂಗ್ರೆಸ್ ಗುಂಪು ಎಂದು ಶ್ರೀನಿವಾಸ್ ಹೇಳಿದರು. ಶ್ರೀನಿವಾಸ್ ಹರಿಯುವ ನೀರಿದ್ದಂತೆ ಎಂಬ ತುಮಕೂರು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿಕೆಗೆ ತಿರುಗೇಟು ನೀಡಿದ ಶ್ರೀನಿವಾಸ್, ಸೋಮಣ್ಣ ಕೊಡುಗೆ ಏನು? ಸ್ವಾಮೀಜಿ ಕಾಲಿಗೆ ಬಿದ್ದಿದ್ದು ಬಿಟ್ಟರೆ ಬೇರೆನೂ ಇಲ್ಲ. ಸೋಮಣ್ಣ ನಾನು ನಿಂತ ನೀರಲ್ಲ ಹರಿಯುವ ನೀರು ಅಂದರು. ಆದರೆ, ನೀವು ಎಲ್ಲಿಗೆ ಹರಿಯುತ್ತಿರಾ? ನೀವು ಚಾಮರಾಜಪೇಟೆಯಲ್ಲಿ ಹುಟ್ಟಿ ಚಾಮರಾಜನಗರಕ್ಕೆ ಹರಿದು ಬಂದಿದ್ದೀರಿ, ಅಲ್ಲಿಂದ ಸಿದ್ದರಾಮಯ್ಯ ಅವರ ಕ್ಷೇತ್ರ ವರುಣಗೆ ಹೋದೆ. ಈಗ ತುಮಕೂರಿಗೆ ಹರಿದುಕೊಂಡು ಬಂದು ಬಿಟ್ಟಿದ್ಯಾ? ಎಂದು ಟಾಂಗ್ ಕೊಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ