ಹಳ್ಳ ಹಿಡಿಯಿತಾ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ?: ತುಮಕೂರು ನಗರದಲ್ಲಿ ಇಂದಿರಾ ಕ್ಯಾಂಟೀನ್​​ಗಳ ಬಾಗಿಲು ಬಂದ್​​!

Tumakuru News: ತುಮಕೂರು ನಗರದಲ್ಲಿ ಕಳೆದ ಎಂಟು ದಿನಗಳಿಂದ ಇಂದಿರಾ ಕ್ಯಾಂಟೀನ್‌ಗಳು ಸಂಪೂರ್ಣ ಬಂದ್ ಆಗಿದ್ದು, ಕೈಗೆಟುಕುವ ದರದಲ್ಲಿ ಊಟ ಸವಿಯುತ್ತಿದ್ದ ನೂರಾರು ಬಡವರು ಹಾಗೂ ಶ್ರಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲಾಡಳಿತದಿಂದ ಬಿಲ್ ಬಾಕಿ ಇರೋದೇ ಕ್ಯಾಂಟೀನ್​​ಗಳು ಕ್ಲೋಸ್​​ ಆಗಲು ಕಾರಣ ಎನ್ನಲಾಗ್ತಿದೆಯಾದರೂ, ಅಧಿಕಾರಿಗಳು ಮಾತ್ರ ಗುತ್ತಿಗೆದಾರರು ಕೆಲವು ರೂಲ್ಸ್ ಬ್ರೇಕ್ ಮಾಡಿರುವ ಆರೋಪ ಮಾಡಿದ್ದಾರೆ.

ಹಳ್ಳ ಹಿಡಿಯಿತಾ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ?: ತುಮಕೂರು ನಗರದಲ್ಲಿ ಇಂದಿರಾ ಕ್ಯಾಂಟೀನ್​​ಗಳ ಬಾಗಿಲು ಬಂದ್​​!
ಬಾಗಿಲು ಬಂದ್​​ ಆಗಿರುವ ಇಂದಿರಾ ಕ್ಯಾಂಟೀನ್​​
Image Credit source: Tv9 Kannada
Edited By:

Updated on: Jun 23, 2026 | 6:02 PM

ತುಮಕೂರು, ಜೂನ್​​ 23: ಬಡವರ ಹಸಿವು ನೀಗಿಸಲೆಂದೇ ಆರಂಭಿಸಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್​​ ಯೋಜನೆ ಹಳ್ಳ ಹಿಡಿದೆಯಾ ಎಂಬ ಅನುಮಾನವೀಗ ಸಾರ್ವಜನಿಕರನ್ನು ಕಾಡತೊಡಗಿದೆ. ಇದಕ್ಕೆ ಕಾರಣವಾಗಿರೋದು ಇಂದಿರಾ ಕ್ಯಾಂಟೀನ್​​ಗಳ ನಿರ್ವಹಣೆ ಸರಿಯಾಗಿ ಇಲ್ಲದಿರೋದು. ಒಂದೆರಡಲ್ಲ ಬರೋಬ್ಬರಿ ಎಂಟು ದಿನಗಳಿಂದ ತುಮಕೂರು ನಗರದಲ್ಲಿರುವ 6 ಇಂದಿರಾ ಕ್ಯಾಂಟೀನ್​​ಗಳು ಕ್ಲೋಸ್​​ ಆಗಿದ್ದು, ಇವುಗಳನ್ನೇ ನಂಬಿಕೊಂಡಿದ್ದ ನೂರಾರು ಮಂದಿಯೀಗ ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅಡುಗೆ ಕಾಂಟ್ರಾಕ್ಟ್ ವಹಿಸಿಕೊಂಡವರಿಗೆ ಜಿಲ್ಲಾಡಳಿತ ಹಣ ಪಾವತಿಸದಿರೋದೇ ಕ್ಯಾಂಟೀನ್​​ಗಳು ಬಾಗಿಲು ಮುಚ್ಚಲು ಕಾರಣ ಎನ್ನಲಾಗಿದೆ.

ಅಧಿಕಾರಿಗಳು ಹೇಳೋದೇನು?

ಹೌದು, ಬಡವರಿಗೆ ಕೈಗೆಟುಕುವ ಬೆಲೆಯಲ್ಲಿ ತಿಂಡಿ ಮತ್ತು ಊಟ ನೀಡುವ ಆಶಯದೊಂದಿಗೆ ಆರಂಭವಾದ ಇಂದಿರಾ ಕ್ಯಾಂಟೀನ್​​ಗಳಿಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ಅಡುಗೆ ಗುತ್ತಿಗೆ ಪಡೆದವರಿಗೆ ಜಿಲ್ಲಾಡಳಿತ ಹಣ ಪಾವತಿಸದ ಕಾರಣ ಕೆಲಸಗಾರರಿಗೂ ಕಳೆದ ಒಂದು ವರ್ಷದಿಂದ ಸಂಬಳ ಬಾಕಿಯಾಗಿದೆ ಎಂಬ ಮಾಹಿತಿ ಇದೆ. ಹಾಗಾಗಿ ಅವರೂ ಕೆಲಸ ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತರನ್ನು ಕೇಳಿದರೆ ಗುತ್ತಿಗೆದಾರರು ಕೆಲವು ರೂಲ್ಸ್ ಬ್ರೇಕ್ ಮಾಡಿದ್ದರು. ಅದಕ್ಕೆ ನೋಟಿಸ್​ ಕೊಟ್ಟಿದ್ದೇವೆ. ಆದರೆ ಅವರು ಉತ್ತರ ಕೊಟ್ಟಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ನಿವೃತ್ತ ಸೈನಿಕನಿಗೆ ಸೈಬರ್ ಶಾಕ್; ‘ಗಿಫ್ಟ್’ ಆಸೆಗೆ ಬಿದ್ದ ಯೋಧನಿಗೆ 2.82 ಲಕ್ಷ ರೂ. ವಂಚನೆ

ಆದರೆ ಮಾಹಿತಿ ಪ್ರಕಾರ ಗುತ್ತಿಗೆದಾರರು ಕ್ಯಾಂಟೀನ್​​ನ ದಿಢೀರ್ ಆಗಿಯೇನು ಮುಚ್ಚಿಲ್ಲ. ಹಲವು ಬಾರಿ ಅಧಿಕಾರಿಗಳಿಗೆ ಹಣಕ್ಕಾಗಿ ಮನವಿ ಮಾಡಿದ್ದಾರೆ. ಆರಂಭದಲ್ಲಿ ರಾತ್ರಿ ಊಟ ಬಂದ್ ಮಾಡಿದ್ದು, ತದನಂತರ ಬೆಳಗ್ಗಿನ ತಿಂಡಿ ಬಂದ್ ಮಾಡಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ ತಲೆಕೆಡಿಸಿಕೊಳ್ಳದ ಕಾರಣ ಈಗ ಸಂಪೂರ್ಣ ಕ್ಯಾಂಟೀನ್​​ ಬಂದ್​​ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಆದರೆ ಬಿಲ್​​ ಎಷ್ಟು ಬಾಕಿಯಿದೆ? ಎಷ್ಟು ತಿಂಗಳ ಹಣ ಬರಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನು ಗುತ್ತಿಗೆದಾರರಿಗೆ ಜಿಲ್ಲಾಡಳಿತ ಬಿಲ್​​ ಪಾವತಿಸಿಲ್ಲ ಎಂಬುದು ಸತ್ಯವೋ? ಗುತ್ತಿಗೆದಾರರು ಕೆಲವು ರೂಲ್ಸ್ ಬ್ರೇಕ್ ಮಾಡಿದ್ದಾರೆ ಎಂಬ ಆರೋಪ ನಿಜವೋ? ಗೊತ್ತಿಲ್ಲ. ಆದರೆ ಇಂದಿರಾ ಕ್ಯಾಂಟೀನ್​​ಗಳು ಬಂದ್​​ ಆಗಿರುವುದರಿಂದ ಬಡವರಂತೂ ಸಂಕಷ್ಟಕ್ಕೆ ಸಿಲುಕಿರುವುದು ಸತ್ಯ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:57 pm, Tue, 23 June 26

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us