ಸ್ವತಃ ತಹಶೀಲ್ದಾರ್ ನಾಹೀದ ಕುಟುಕು ಕಾರ್ಯಾಚರಣೆ ನಡೆಸಿದರು, ಕೊರಟಗೆರೆ ಆಂಬ್ಯುಲೆನ್ಸ್ ಸಿಬ್ಬಂದಿಯ ಬೇಜವಾಬ್ದಾರಿತನ ಬಯಲಿಗೆ ಬಿತ್ತು!
ತುಮಕೂರು ಜಿಲ್ಲೆಯಲ್ಲಿ 108 ಸಮಸ್ಯೆ ಇದೇ ಮೊದಲಲ್ಲ. 108 ಸಿಬ್ಬಂದಿಗೆ ಜಡತ್ವ ಹಿಡಿದಿದೆ. ಕಳೆದ ಮೂರು ತಿಂಗಳಲ್ಲಿ ಇಂತಹ ಮೂರು ಪ್ರಕರಣ ನಡೆದಿದೆ. ನಿಷ್ಕ್ರಿಯವಾಗಿರೊ ಈ ಸಿಬ್ಬಂದಿಗೆ ಆರೋಗ್ಯ ಇಲಾಖೆ ಸೂಕ್ತ ಚಿಕಿತ್ಸೆ ಕೊಡಬೇಕಾಗಿದೆ.
ಆರೋಗ್ಯದಲ್ಲಿ ತುರ್ತು ಸಂದರ್ಭ ಅಂತಾ ಬಂದ್ರೆ ಮೊದಲು ನೆನಪಾಗೋದೆ 108 ಆಂಬ್ಯುಲೆನ್ಸ್… ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಜನರ ಜೀವ ಉಳಿಸ್ಬೇಕಾದ ಸಿಬ್ಬಂದಿ.. ತಮ್ಮ ಕರ್ತವ್ಯ ಮರೆತು ಜನರ ಜೀವದ ಜೊತೆ ಚೆಲ್ಲಾಟವಾಡ್ತಿದ್ರು.. 108 ಸಿಬ್ಬಂದಿಯ ಕಳ್ಳಾಟವನ್ನ ಸ್ವತಃ ತಹಶಿಲ್ದಾರ್ ಅವ್ರೇ ಕುಟುಕು ಕಾರ್ಯಾಚರಣೆ (Reality Check) ನಡೆಸಿ ಬಟಾಬಯಲು ಮಾಡಿದ್ದಾರೆ.. ಅದು ತುಮಕೂರು ನಗರಕ್ಕೆ ಕೂಗಳತೆ ದೂರದಲ್ಲಿರುವ ತಾಲೂಕು ಕೊರಟಗೆರೆ. ಆ ತಾಲೂಕಿನ ತಹಶೀಲ್ದಾರ್ (tahasildar) ಹೆಸರು ನಾಹೀದಾ ಜಮ್ ಜಮ್.. ಒಂದು ಕಾರ್ಯಾಚರಣೆಗಾಗಿ ತಮ್ಮ ಹೆಸರನ್ನು ರಾಮಕ್ಕ ಎಂದು ಬದಲಿಸಿಕೊಂಡು ಕಳ್ಳಾಟ ಆಡುತಿದ್ದ ತುರ್ತು ಸೇವೆ 108 ಆಂಬ್ಯುಲೆನ್ಸ್ ಸಿಬ್ಬಂದಿಯ (Koratagere ambulance problem) ಬಣ್ಣ ಬಯಲು ಮಾಡಿದ್ದಾರೆ..
ತುಮಕೂರು ಜಿಲ್ಲೆ ಕೊರಟಗೆರೆ ತಹಶೀಲ್ದಾರ್ ನಾಹೀದಾ ಜಮ್ ಜಮ್.. ತಮ್ಮ ಹೆಸರು ಬದಲಿಸಿಕೊಂಡು ಕಾಲ್ ಮಾಡಿ 108 ಆಂಬ್ಯಲೆನ್ಸ್ ಸಿಬ್ಬಂದಿಯ ಕಳ್ಳಾಟ ಬಯಲು ಮಾಡಿದ್ದಾರೆ. ಈ ಮೂಲಕ ಆಪರೇಷನ್ ನಡೆಸಿ ಆಂಬ್ಯುಲೆನ್ಸ್‌ನ ‘ ಕೃತಕ ಸಮಸ್ಯೆ’ಯನ್ನು ಬಯಲಿಗೆಳೆದಿದ್ದಾರೆ. ಮೊನ್ನೆ ಬೆಳಗ್ಗೆ ತಾಲೂಕಿನ ಇರಕಸಂದ್ರ ಕಾಲೊನಿಯಲ್ಲಿ ಚಿರತೆ ದಾಳಿಯಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಸೇವೆ ಸಕಾಲದಲ್ಲಿ ಸಿಗದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ತಾಲೂಕಿನಲ್ಲಿ ಆಂಬ್ಯುಲೆನ್ಸ್ ಇದ್ದರೂ ಸೇವೆ ಏಕೆ ಲಭ್ಯವಾಗಿಲ್ಲ ಎಂದು ಯೋಚಿಸಿದ ತಹಸೀಲ್ದಾರ್ ನಹೀದಾ ರಿಯಾಲಿಟಿ ಚೆಕ್ ಗೆ ಮುಂದಾದರು.
ಅದರಂತೆ ಸಂಜೆ 5 ಗಂಟೆಗೆ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ನಾಹೀದಾ ಆಂಬ್ಯುಲೆನ್ಸ್ ಸೇವೆ ಅವ್ಯವಸ್ಥೆ ಬಗ್ಗೆ ರೋಗಿಗಳ ಬಳಿ ದೂರು ಕೇಳಿದ್ರು.. ತಮ್ಮ ಫೊನ್ ಅನ್ನು ಕೈಯಲ್ಲಿ ಹಿಡಿದು ಹೆಸರು ಬದಲಿಸಿಕೊಂಡ ತಹಶೀಲ್ದಾರ್ ಮೇಡಂ ಸಂಜೆ 5 ಗಂಟೆ 2 ನಿಮಿಷಕ್ಕೆ ರಾಮಕ್ಕ ಹೆಸರಲ್ಲಿ 108 ಕ್ಕೆ ಕರೆ ಮಾಡಿದ್ದಾರೆ. ವಡಗೆರೆ ಕ್ರಾಸ್ ಬಳಿ ಅಪಘಾತವಾಗಿದೆ ಎಂದು 108 ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಗೆ ಮಾಹಿತಿ ನೀಡಿದರು.
ನಂತರ ಕರೆ ಆಂಬ್ಯುಲೆನ್ಸ್ ಸಿಬ್ಬಂದಿಗೆ ವರ್ಗಾವಣೆ ಆಯಿತು. ಸಿಬ್ಬಂದಿ ಉಮಾದೇವಿ ಅವರು ರಾಮಕ್ಕ ಜತೆ 8 ನಿಮಿಷ ಮಾತನಾಡಿದ್ರು. ಬಳಿಕ ಆಂಬ್ಯುಲೆನ್ಸ್ ತೋವಿನಕೆರೆ ಬಳಿ ಇದೆ. ಅಲ್ಲಿಂದ ಬರುವುದು 1 ಗಂಟೆ ತಡವಾಗುತ್ತದೆ. ಅಲ್ಲಿಯವರೆಗೆ ಕಾಯಿರಿ ಅಥವಾ ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿ ಎಂದು 108 ಆಂಬ್ಯುಲೆನ್ಸ್ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದಾರೆ.
ಇನ್ನು ತೋವಿನಕೆರೆಯಿಂದ ಕೊರಟಗೆರೆ ಪಟ್ಟಣಕ್ಕೆ ಬರಲು 15-20 ನಿಮಿಷ ಸಾಕು. ಆದರೆ ತಹಶೀಲ್ದಾರ್ ಕರೆ ಮಾಡಿದ ಬಳಿಕ ಆಂಬ್ಯುಲೆನ್ಸ್ ಬಂದಿದ್ದು 1 ಗಂಟೆ ತಡವಾಗಿ.. ಅಷ್ಟೊತ್ತಿಗೆ ತಹಶೀಲ್ದಾರ್ ಸ್ಥಳದಿಂದ ಹಿಂತಿರುಗಿದ್ದಾರೆ.. ಈ ವೇಳೆ ತುರ್ತು ಸೇವೆ ನೀಡ್ಬೇಕಿದ್ದ 108 ಆಂಬ್ಯುಲೆನ್ಸ್ ಸಿಬ್ಬಂದಿ ಕಳ್ಳಾಟ ಬಯಲಾಗಿದೆ.
108 ಆಂಬ್ಯುಲೆನ್ಸ್ ಸಿಬ್ಬಂದಿಯ ಈ ಕಾರ್ಯವೈಖರಿ ಬಗ್ಗೆ ಕೊರಟಗೆರೆ ತಹಶೀಲ್ದಾರ್ ನಹೀದಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದಾರೆ. ಕೊರಟಗೆರೆ ತಾಲೂಕು ಆಸ್ಪತ್ರೆಯಲ್ಲಿ ಇರುವ 108 ಕೆಟ್ಟು ನಿಂತಿತ್ತು. ಹಾಗಾಗಿ ಗ್ರಾಹಕ ಸೇವಾ ಸಿಬ್ಬಂದಿ ತೋವಿನ ಕೆರೆ 108 ಗೆ ಮಾಹಿತಿ ನೀಡಿದ್ರು.
ತೋವಿನ ಕೆರೆಯಿಂದ ಕೊರಟಗೆರೆ ಸುಮಾರು 18 ಕಿ.ಮಿ. ದೂರ ಆಗುತ್ತದೆ. ಆಂಬ್ಯಲೆನ್ಸ್ ಸೈರನ್ ಹಾಕಿಬಂದರೆ 15 ನಿಮಿಷದಲ್ಲಿ ತಲುಪಬಹುದು. ಇದರಲ್ಲೂ ನಿರ್ಲಕ್ಷ್ಯ ತೋರಿದ್ದಾರೆ. ತಹಶೀಲ್ದಾರ್ ನೀಡಿದ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಡಿಎಚ್ ಒ ಡಾ. ಮಂಜುನಾಥ್ ತಪ್ಪಿತಸ್ಥ ಸಿಬ್ಬಂದಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸು ಮಾಡೋದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮೈಸೂರಲ್ಲಿ ಚಿರತೆ ಭೀತಿ ಮಧ್ಯೆ ಹುಲಿ ದಾಳಿ: ಓರ್ವ ರೈತನಿಗೆ ಗಾಯ
ಇನ್ನು ತುಮಕೂರು ಜಿಲ್ಲೆಯಲ್ಲಿ 108 ಸಮಸ್ಯೆ ಇದೇ ಮೊದಲಲ್ಲ. 108 ಸಿಬ್ಬಂದಿಗೆ ಜಡತ್ವ ಹಿಡಿದಿದೆ. ಕಳೆದ ಮೂರು ತಿಂಗಳಲ್ಲಿ ಇಂತಹ ಮೂರು ಪ್ರಕರಣ ನಡೆದಿದೆ. ಮಧುಗಿರಿಯಲ್ಲಿ 108 ಸಕಾಲಕ್ಕೆ ಬಾರದೆ ಓರ್ವ ವೃದ್ದೆ ಸಾವನ್ನಪ್ಪಿದ್ದರು.
ಆದಾದ ಬಳಿಕ ನೀರಿನ ಸಂಪಿಗೆ ಬಿದ್ದ ಮಗು ಕೂಡ ಅಸುನೀಗಿತ್ತು. ಈ ಎಲ್ಲಾ ಘಟನೆ ಮೆಲುಕು ಹಾಕಿದ್ರೆ 108 ಲೆಕ್ಕಕುಂಟು ಆಟಕ್ಕಿಲ್ಲ ಎಂಬಂತಾಗಿದೆ. ನಿಷ್ಕ್ರಿಯವಾಗಿರೊ ಈ ಸಿಬ್ಬಂದಿಗೆ ಆರೋಗ್ಯ ಇಲಾಖೆ ಸೂಕ್ತ ಚಿಕಿತ್ಸೆ ಕೊಡಬೇಕಾಗಿದೆ. (ವರದಿ: ಮಹೇಶ್, ಟಿವಿ 9, ತುಮಕೂರು)
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ