ತುಮಕೂರು ಜಿಲ್ಲೆ ಮಧುಗಿರಿ ಪುರಸಭೆಯ (Madhugiri Town Municipal Corporation) ಅಂಗಡಿ ಮಳಿಗೆಗಳು (commercial shops) ವರ್ಷಾನುಗಟ್ಟಲೇ ಹರಾಜು ಮಾಡದೇ ಹಾಗೇ ಉಳಿದಿದೆ. ಮರು ಹರಾಜು (Auction) ಮಾಡುವಂತೆ ಹೈಕೋರ್ಟ್ ಆದೇಶ ಇದ್ದರೂ ಸಹ ಹರಾಜು ಪ್ರಕ್ರಿಯೆ ನಡೆಸದೇ ಹೈಕೋರ್ಟ್ ಆದೇಶವನ್ನು ಗಾಳಿಗೆ ತೂರಿರೋ ಮಾತು ಕೇಳಿಬಂದಿದೆ. ಈ ನಡುವೆ ಒಂದು ಕೋಟಿಗೂ ಅಧಿಕ ಬಾಡಿಗೆ (Rent) ಹಣ ವಸೂಲಿಯಾಗಬೇಕಿದೆ (Loss). ತುಮಕೂರು ಜಿಲ್ಲೆ ಮಧುಗಿರಿ ಪುರಸಭೆ ವಿರುದ್ದ ಹೈಕೋರ್ಟ್ ಆದೇಶ ಉಲ್ಲಂಘಿಸಿರೋ ಆರೋಪ ಕೇಳಿಬಂದಿದೆ. ಕಳೆದ 40 ವರ್ಷಗಳಿಂದ ಪುರಸಭೆಗೆ ಸೇರಿದ ಸುಮಾರು 110 ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸದೆ ಹಾಗೇ ಇದೆ. ಈ ಹಿಂದೆ ಹರಾಜು ಪಡೆದಿದ್ದ ಅಂಗಡಿಗಳ ಮಾಲೀಕರು ಸರಿಯಾಗಿ ಬಾಡಿಗೆ ಪಾವತಿಸದೇ ಒಂದು ಕೋಟಿಯಷ್ಟು ಹಣ ಬಾಕಿ ಉಳಿಸಿಕೊಂಡಿದ್ದಾರೆ.
2019 ರಲ್ಲಿ ಅಂಗಡಿಗಳನ್ನ ಮರು ಹರಾಜು ಮಾಡುವಂತೆ ಅಂದಿನ ಜಿಲ್ಲಾಧಿಕಾರಿ ಆದೇಶ ಮಾಡಿದ್ದರೂ ಈವರೆಗೂ ಹರಾಜು ಮಾಡಿಲ್ಲ. ಕೊರೊನಾ ನೆಪವೊಡ್ಡಿ ಈ ಹಿಂದಿನ ಅಂಗಡಿ ಮಾಲೀಕರಿಗೆ ಮರುಹರಾಜು ಮಾಡುವ ಪ್ರಕ್ರಿಯೆ ನಡೆಸಿರೋ ಪುರಸಭಾ ಸದಸ್ಯರು ಅದನ್ನ ಅಂಗೀಕರಿಸುವಂತೆ ಎಸಿ ಕೋರ್ಟ್ ನ ಮೊರೆಹೋಗಿದ್ದರು. ಆದರೆ ಈ ಪ್ರಕ್ರಿಯೆಯನ್ನ ಮಧುಗಿರಿ ಎಸಿ ಕೋರ್ಟ್ ವಜಾಗೊಳಿಸಿತ್ತು. ಇದನ್ನ ಪ್ರಶ್ನಿಸಿ ಮತ್ತೆ ಪುರಸಭೆಯ ಸದಸ್ಯರು ಹೈಕೋರ್ಟ್ ಮೊರೆಹೋಗಿದ್ದರು. ಇದೀಗ ಹೈಕೋರ್ಟ್ ಕೂಡ ಈ ಪ್ರಕ್ರಿಯೆಯನ್ನ ವಜಾಗೊಳಿಸಿ ನಿಯಮದ ಪ್ರಕಾರ ಟೆಂಡರ್ ಕರೆದು ಅಂಗಡಿ ಮಳಿಗೆಗಳನ್ನ ಹರಾಜು ಮಾಡುವಂತೆ ಚಾಟಿ ಬೀಸಿದೆ.
ಇದನ್ನೂ ಓದಿ:
ಮರು ಹರಾಜು ಮಾಡುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ಸಹ ಈವರೆಗೂ ಪುರಸಭೆ ಆ ಪ್ರಕ್ರಿಯೆ ನಡೆಸಿಲ್ಲ. ಜೊತೆಗೆ ಇತ್ತೀಚೆಗೆ ನಿರ್ಮಾಣ ಮಾಡಿ ಬಾಡಿಗೆಗೆ ನೀಡಿರೋ ಮಳಿಗೆಗಳಲ್ಲಿ ರೋಸ್ಟರ್ ಪ್ರಕಾರ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿ ನೀಡಿಲ್ಲ ಅನ್ನೋ ಆರೋಪವೂ ಕೇಳಿಬಂದಿದೆ. 40 ವರ್ಷಗಳ ಹಿಂದೆ ಬಾಡಿಗೆ ಪಡೆದಿದ್ದವರೇ ಈಗಲೂ ಇದ್ದು, ಪುರಸಭೆಗೆ ಕಡಿಮೆ ಬಾಡಿಗೆ ಪಾವತಿಸಿ, ಅವರು ಬೇರೆಯವರಿಗೆ ಹೆಚ್ಚಿನ ಹಣಕ್ಕೆ ಬಾಡಿಗೆ ನೀಡಿದ್ದಾರೆ ಅಂತಾ ಸ್ಥಳೀಯರು ದೂರಿದ್ದಾರೆ.
ಹೈಕೋರ್ಟ್ ನಲ್ಲಿ ಪುರಸಭೆ ಅರ್ಜಿ ವಜಾ ಆದ ಬಳಿಕ ಮಧುಗಿರಿ ಪುರಸಭೆ ಮುಖ್ಯಾಧಿಕಾರಿ ನಜ್ಮಾ ಅವರು ಅಂಗಡಿಯವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ಪಡೆದ 7 ದಿನಗಳ ಒಳಗೆ ಅಂಗಡಿ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.. ಇನ್ನು ಈ ನೋಟಿಸ್ ಜಾರಿ ವಿಚಾರ ಪುರಸಭೆ ಅಧ್ಯಕ್ಷ ತಿಮ್ಮರಾಜು ಅವರಿಗೆ ಗೊತ್ತಿಲ್ಲವಂತೆ. ಈ ಮೂಲಕ ಪುರಸಭೆಯ ಅಧ್ಯಕ್ಷರ ಹಾಗೂ ಮುಖ್ಯಾಧಿಕಾರಿಗಳ ನಡುವಿನ ತಿಕ್ಕಾಟ ಬಹಿರಂಗಗೊಂಡಿದೆ.
ಸದ್ಯ ಅಂಗಡಿಗಳ ಬಹಿರಂಗ ಹರಾಜು ನಡೆಸಲು ಕೋರ್ಟ್ ಆದೇಶ ಮಾಡಿದೆ. ಆದರೆ ಒಂದು ಕಡೆ ಬಾಕಿ ಉಳಿದಿರುವ ಬಾಡಿಗೆ ಹಣ ಪಡೆದು ಬಳಿಕ ಪ್ರಕ್ರಿಯೆ ನಡೆಸಲು ಪುರಸಭೆ ಅಧ್ಯಕ್ಷ ಸದಸ್ಯರು ತೀರ್ಮಾನಿಸಿದ್ದರೆ ಅತ್ತ ಮುಖ್ಯಾಧಿಕಾರಿಗಳು 7 ದಿನದೊಳಗೆ ಖಾಲಿ ಮಾಡಿ ಅಂತಾ ನೋಟಿಸ್ ನೀಡಿದ್ದಾರೆ. ಇದು ಇನ್ನೂ ಎಲ್ಲಿಯವರೆಗೆ ಎಳೆಯುತ್ತದೋ ಕಾದುನೋಡಬೇಕಿದೆ.
ವರದಿ: ಮಹೇಶ್, ಟಿವಿ 9, ತುಮಕೂರು
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ