ಮಂಗಳೂರು ಸ್ಫೋಟ: ಉಗ್ರ ಕೃತ್ಯ ಎಂದ ಸಿಎಂ, ತುಮಕೂರಿನಲ್ಲಿ ರೈಲ್ವೆ ಗ್ಯಾಂಗ್ಮನ್ ವಿಚಾರಣೆ
ಪ್ರಸ್ತುತ ತುಮಕೂರಿನಲ್ಲಿರುವ ಪ್ರೇಮರಾಜ್ ಹುಟಗಿ ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು.
ಬಳ್ಳಾರಿ / ತುಮಕೂರು: ಮಂಗಳೂರಿನ ಕಂಡನಾಡಿಯಲ್ಲಿ ಚಲಿಸುತ್ತಿದ್ದ ಆಟೊದಲ್ಲಿ ಸಂಭವಿಸಿದ ನಿಗೂಢ ಸ್ಫೋಟ ಕುರಿತು ಬಳ್ಳಾರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ‘ಇದೊಂದು ಉಗ್ರ ಕೃತ್ಯ ಎಂದು ಗೊತ್ತಾಗಿದೆ. ಶಂಕಿತನಿಗೆ ಭಯೋತ್ಪಾದಕರ ಸಂಪರ್ಕ ಇರುವ ಮಾಹಿತಿ ಇದೆ. ಕೇಂದ್ರೀಯ ತನಿಖಾ ದಳದ ಸಿಬ್ಬಂದಿ ಸಹ ರಾಜ್ಯಕ್ಕೆ ಆಗಮಿಸಿದ್ದು, ತನಿಖೆಗೆ ಮುಂದಾಗಿದೆ. ನಕಲಿ ಐಡಿ ಬಳಸಿ ಈ ಕೃತ್ಯ ನಡೆಸಲಾಗಿದೆ. ಈತ ಮಂಗಳೂರು, ಕೊಯಮತ್ತೂರು ನಗರಗಳಲ್ಲಿ ಓಡಾಡಿರುವ ಶಂಕೆಯಿದೆ. ಇದೊಂದು ವ್ಯವಸ್ಥಿತ ಜಾಲ, ಈ ಪ್ರಕರಣದಲ್ಲಿ ಯಾರೆಲ್ಲಾ ಶಾಮೀಲಾಗಿದ್ದಾರೆ ಎಂಬುದನ್ನು ಪತ್ತೆ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದರು.
ಪ್ರತ್ಯಕ್ಷದರ್ಶಿ ಹೇಳಿಕೆ
ಮಂಗಳೂರು ಆಟೊರಿಕ್ಷಾದಲ್ಲಿ ಸಂಭವಿಸಿರುವ ನಿಗೂಢ ಸ್ಫೋಟದ ಪ್ರತ್ಯಕ್ಷದರ್ಶಿ ರಾಮ್ಪ್ರಸಾದ್ ಶೆಟ್ಟಿ ‘ಟಿವಿ9’ಗೆ ಹೇಳಿಕೆ ನೀಡಿದ್ದಾರೆ. ‘ನನ್ನ ಅಂಗಡಿಯ ಮುಂಭಾಗದಲ್ಲೇ ಆಟೊ ಚಲಿಸುತ್ತಿದ್ದ ವೇಳೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಮೊದಲು ಆಟೊ ಟೈರ್ ಸ್ಫೋಟಿಸಿರಬಹುದು ಎಂದುಕೊಂಡೆವು. ಅಲ್ಲಿಗೆ ನಾವು ಓಡಿಹೋಗಿ ನೋಡಿದಾಗ, ಆಟೊ ಚಾಲಕ ಮತ್ತು ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿದ್ದು ಕಂಡು ಬಂತು. ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದೆವು. ಆದರೆ ಇದೊಂದು ಬಾಂಬ್ ಸ್ಫೋಟ ಎಂದು ಗೊತ್ತಾದ ಮೇಲೆ ಜನ ಆತಂಕಗೊಂಡಿದ್ದಾರೆ’ ಎಂದು ಅವರು ತಿಳಿಸಿದರು.
ಆಧಾರ್ ಕಾರ್ಡ್ ಗೊಂದಲಕ್ಕೆ ತೆರೆ
ಮಂಗಳೂರು ಆಟೊದಲ್ಲಿ ಸ್ಫೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಯಾದ ಆಧಾರ್ ಕಾರ್ಡ್ನಲ್ಲಿದ್ದ ಮೂಲ ವ್ಯಕ್ತಿಯ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಆಧಾರ್ ಕಾರ್ಡ್ನಲ್ಲಿದ್ದ ವ್ಯಕ್ತಿಯನ್ನು ಹುಬ್ಬಳ್ಳಿ ಮೂಲದ ಪ್ರೇಮರಾಜ್ ಹುಟಗಿ ಎಂದು ಗುರುತಿಸಲಾಗಿದೆ. ಇವರು ತುಮಕೂರಿನಲ್ಲಿ ರೈಲ್ವೆ ಇಲಾಖೆಯ ಟ್ರ್ಯಾಕ್ ಮೆಂಟೇನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಇವರು ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಇವರು ಎರಡು ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದಾರೆ. ಧಾರವಾಡದಿಂದ ಬೆಳಗಾವಿಗೆ ಬಸ್ನಲ್ಲಿ ಬರುವಾಗ ಒಮ್ಮೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಬಳಿಕ ಮತ್ತೊಮ್ಮೆ ಆಧಾರ್ ಕಾರ್ಡ್ ಪಡೆದಿದ್ದರು. ಆದರೆ ಆರು ತಿಂಗಳ ಹಿಂದೆ ಹುಬ್ಬಳ್ಳಿಯಿಂದ ಬಸ್ನಲ್ಲಿ ಬರುವಾಗ ಮತ್ತೊಮ್ಮೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು.
ಮೈಸೂರಿನಲ್ಲಿ ಪತ್ತೆಯಾದ ಆಧಾರ್ ಕಾರ್ಡ್ನ ಮಾಹಿತಿ ಸಂಗ್ರಹಿಸಿದ ಎಡಿಜಿಪಿ ಅಲೋಕ್ ಕುಮಾರ್, ಪ್ರೇಮರಾಜ್ ಹುಟಗಿಗೆ ನೇರವಾಗಿ ಕರೆ ಮಾಡಿ ಮಾತನಾಡಿ, ತಕ್ಷಣ ತುಮಕೂರು ಎಸ್ಪಿ ರಾಹುಲ್ ಕುಮಾರ್ ಅವರನ್ನು ಸಂಪರ್ಕಿಸುವಂತೆ ಸೂಚಿಸಿದ್ದರು. ಅದರಂತೆ ತುಮಕೂರು ಎಸ್ಪಿಯನ್ನು ಪ್ರೇಮರಾಜ್ ಹುಟಗಿ ಸಂಪರ್ಕಿಸಿದ್ದರು. ‘ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ನಿನ್ನೆಯೂ ನಮ್ಮ ಮನೆಗೆ ಪೊಲೀಸರು ಬಂದು ಪರಿಶೀಲನೆ ಮಾಡಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದರು.
Published On - 1:09 pm, Sun, 20 November 22