ಸಂಕಷ್ಟಕ್ಕೆ ಸಿಲುಕಿಸಿದ ಪರಪುರುಷನ ಸಹವಾಸ: ಬ್ಲ್ಯಾಕ್ಮೇಲ್ಗೆ ಹೆದರಿ ಪುಟ್ಟ ಮಗನ ಜತೆ ಮಹಿಳೆ ಆತ್ಮಹತ್ಯೆ
ತುಮಕೂರಿನ ಕಳ್ಳಂಬೆಳ್ಳದಲ್ಲಿ 8 ವರ್ಷದ ಮಗನ ಜೊತೆಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಈಗ ರೋಚಕ ತಿರುವು ದೊರೆತಿದೆ. ಪತಿ ಮೃತಪಟ್ಟ ಬಳಿಕ ಆತನ ಸಹೋದರನ ಜತೆಗೇ ವಿವಾಹವಾಗಿದ್ದ ಮಹಿಳೆ, ಪರ ಪುರುಷನ ಸಂಪರ್ಕ ಮಾಡಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಪರಪುರುಷನ ಸಹವಾಸದ ಬಗ್ಗೆ ಬ್ಲ್ಯಾಕ್‌ಮೇಲ್ ನಡೆದಿದ್ದು, ಅದಕ್ಕೆ ಹೆದರಿ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ತಿಳಿದುಬಂದಿದೆ.

ತುಮಕೂರು, ಡಿಸೆಂಬರ್ 29: ತುಮಕೂರು (Tumkur) ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳದಲ್ಲಿ ತಾಯಿ–ಮಗ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೀಗ ಸ್ಫೋಟಕ ತಿರುವು ದೊರೆತಿದೆ. ಮಹಿಳೆ ಪರ ಪುರುಷನ ಸಹವಾಸ ಮಾಡಿದ್ದೇ ಆಕೆಗೆ ಮುಳುವಾಗಿದೆ ಎಂಬುದು ತಿಳಿದುಬಂದಿದೆ. ದೂರವಾಣಿ ಸಂಭಾಷಣೆ, ವಿಡಿಯೋ ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಮನನೊಂದು ಮಹಿಳೆ ಸಾವಿನ ಮೊರೆ ಹೋಗಿರುವುದು ಬಹಿರಂಗವಾಗಿದೆ.
ಮೃತರನ್ನು ಹಂಸಲೇಖ (32) ಹಾಗೂ ಆಕೆಯ 8 ವರ್ಷದ ಪುತ್ರ ಗುರುಪ್ರಸಾದ್ ಎಂದು ಗುರುತಿಸಲಾಗಿದೆ. ಮಲ್ಲಿಕಾರ್ಜುನ ಎಂಬಾತನೊಂದಿಗೆ ಹಂಸಲೇಖ ಸಂಪರ್ಕ ಹೊಂದಿದ್ದಳು ಎನ್ನಲಾಗಿದೆ. ಆತ ತನ್ನ ಬಳಿ ಇರುವ ಸಂಭಾಷಣೆಗಳು ಮತ್ತು ವಿಡಿಯೋಗಳನ್ನು ಆಧಾರವಾಗಿ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಭಯಗೊಂಡ ಹಂಸಲೇಖ, ಮಗನೊಂದಿಗೆ ಮನೆ ತೊರೆದು ಶುಕ್ರವಾರ ಸ್ನೇಹಿತೆಯ ಮನೆಯಲ್ಲಿ ಉಳಿದುಕೊಂಡಿದ್ದಳು.
ಶನಿವಾರ ಬೆಳಗ್ಗೆ ಕಳ್ಳಂಬೆಳ್ಳ ಕೆರೆಯಲ್ಲಿ ತಾಯಿ–ಮಗ ಇಬ್ಬರೂ ನೀರಿಗೆ ಹಾರಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಈ ಪ್ರಕರಣದ ಹಿನ್ನೆಲೆ ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಬ್ಲ್ಯಾಕ್‌ಮೇಲ್ ಆರೋಪದ ಕುರಿತು ತನಿಖೆ ಆರಂಭಿಸಿದ್ದಾರೆ. ಘಟನೆ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ತುಮಕೂರು: 8 ವರ್ಷದ ಮಗನ ಜೊತೆಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ
ಹಂಸಲೇಖ ಭೂಪಸಂದ್ರ ಗ್ರಾಮದ ನಾಗೇಶ್ ಜೊತೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಕೆಲವು ವರ್ಷಗಳ ಹಿಂದೆ ಹಂಸಲೇಖ ಪತಿ ನಾಗೇಶ್ ಅನಾರೋಗ್ಯದಿಂದ ಮೃತಪಟ್ಟಿದ್ದರು. 3 ವರ್ಷದ ಹಿಂದೆ ನಾಗೇಶ್ ಸಹೋದರ ಲೋಕೇಶ್ ಜತೆ ಹಂಸಲೇಖಗೆ ಮದುವೆ ಮಾಡಲಾಗಿತ್ತು. ಆದಾಗ್ಯೂ ಪರ ಪುರುಷನ ಸಹವಾಸ ಮಾಡಿದ್ದು, ಮುಳುವಾಗಿದೆ. ಪರಿಣಾಮವಾಗಿ ಮಗನೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.



