ತುಮಕೂರು: ಜಿಲ್ಲೆಯ ಪಳವಳ್ಳಿ ಬಳಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿ ತುಮಕೂರು ಜಿಲ್ಲಾಸ್ಪತ್ರೆಗೆ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದಾರೆ. ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿಕೆ ನೀಡಿದ್ದಾರೆ. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜ್ಞಾನೇಂದ್ರ ಪರಿಹಾರದ ಭರವಸೆ ನೀಡಿದ್ದಾರೆ. ನಿನ್ನೆ ಬೆಳಗ್ಗೆ ಪಾವಗಡ ಬಸ್ ಅಪಘಾತ ಪ್ರಕರಣದಲ್ಲಿ 6 ಜನ ಮೃತಪಟ್ಟಿದ್ದಾರೆ. ಕೆಲವರು ಗಾಯಾಳುಗಳಿದ್ದಾರೆ ಅವರನ್ನು ತುಮಕೂರು ಜಿಲ್ಲಾಸ್ಪತ್ರೆ, ಬೆಂಗಳೂರಿನ ಆಸ್ಪತ್ರೆಗಳು, ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗ್ತಿದೆ. ಗಾಯಾಳುಗಳಿಗೆ ಯಾವುದೇ ಔಷಧ ಬೇಕೆಂದರೂ ಹೊರಗಿನಿಂದ ತರಿಸಿ ಕೊಡಬೇಕು. ಗಾಯಾಳುಗಳಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ ಎಂದು ಸೂಚನೆ ಕೊಟ್ಟಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಸಂಪೂರ್ಣ ವೆಚ್ಚ ಸರ್ಕಾರ ಭರಿಸುತ್ತೆ. ಎರಡು ಮೂರು ಬಸ್ನಲ್ಲಿ ಹೋಗುವವರು ಒಂದೇ ಬಸ್ನಲ್ಲಿ ಹೋಗಿದ್ದಕ್ಕೆ ಈ ಘಟನೆ ಆಗಿದೆ. ಯಾವುದೇ ಬಸ್ಗಳು ಪರ್ಮಿಟ್ ಇದ್ದರೆ ಓಡಾಟ ಮಾಡಬೇಕು. ಯಾವುದೇ ಬಸ್ ಓಡಾಡಲಿಲ್ಲ ಅಂದರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಅಂತ ಸೂಚನೆ ಕೊಟ್ಟಿದ್ದೇನೆ. ಬಸ್ ಮೇಲೆ ಕೂತು ಪ್ರಯಾಣ ಮಾಡಿದವರಿಗೆ ಹೆಚ್ಚು ಹಾನಿ ಆಗಿದೆ. ತ್ವರಿತಗತಿಯಲ್ಲಿ ಇಲಾಖೆಯ ಅಧಿಕಾರಿಗಳು ಸ್ಪಂದಿಸಿದ್ದಾರೆ. ಇಲ್ಲದಿದ್ದರೆ ಸಾವುನೋವು ಹೆಚ್ಚಾಗುವ ಸಾದ್ಯತೆ ಇತ್ತು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಖಾಸಗಿ ಬಸ್ಗಳು ಒವರ್ ಲೋಡ್ ಹಾಕುವ ವಿಚಾರಕ್ಕೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಈಗಾಗಲೇ ಒವರ್ ಲೋಡ್ ಹಾಕುವುದಕ್ಕೆ ಕಾನೂನು ಇದೆ. ಆದ್ರೂ ಸರ್ಕಾರದ ಕಣ್ಣು ತಪ್ಪಿಸಿ ಒವರ್ ಲೋಡ್ ಹಾಕ್ತಾರೆ. ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ನಾವು ಇನ್ನಷ್ಟು ಕಾನೂನು ಕಠಿಣ ಮಾಡುತ್ತೇವೆ. ರೂಲ್ಸ್ ಬ್ರೇಕ್ ಮಾಡಿದ್ರೆ ಲೈಸೆನ್ಸ್ ರದ್ದು ಮಾಡುತ್ತೇವೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಬಹಳ ಜನರು ಗಾಯಗೊಂಡಿದ್ದಾರೆ. ಹಾಗಾಗಿ ಸ್ವಲ್ಪ ತೊಂದರೆ ಆಗಿದೆ. ಅವಶ್ಯಕತೆ ಬಿದ್ರೆ ಬೆಂಗಳೂರಿಗೆ ಗಾಯಳುಗಳನ್ನು ಕಳಿಸಲಾಗುತ್ತೆ. ಅದಕ್ಕೆ ಸೂಚನೆ ಕೂಡ ನೀಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಸೂಕ್ತ ಚಿಕಿತ್ಸೆಗಾಗಿ ಗಾಯಾಳು, ಪೋಷಕರ ಪರದಾಟ
ಈ ಮಧ್ಯೆ, ಅಪಘಾತದಲ್ಲಿ ಗಾಯಗೊಂಡವರ ಪರಿಸ್ಥಿತಿ ನರಕಯಾತನೆ ಎಂಬಂತಾಗಿದೆ. ಸ್ಪೈನಲ್ ಕಾರ್ಡ್‌ಗೆ ಗಂಭೀರ ಗಾಯ ಹಿನ್ನೆಲೆ ಗಾಯಾಳು ಮಹೇಂದ್ರನಿಗೆ ಚಿಕಿತ್ಸೆ ಕೊಡಿಸಲು ಪರದಾಡುವಂತಾಗಿದೆ. ಪೋಷಕರಾದ ಶ್ರೀನಿವಾಸ್, ಯಶೋಧಾ ಪರದಾಟ ಪಡುತ್ತಿದ್ದಾರೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಚಿಕ್ಕ ಕುಟುಂಬ ಇದೀಗ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಬೇಕಾಗಿರುವ ಕಾರಣ ಸಂಕಟ ಪಡುವಂತಾಗಿದೆ. ಚಿಕಿತ್ಸಾ ವೆಚ್ಚ ಭರಿಸಲಾಗದೆ ಪೋಷಕರು ಅಸಹಾಯಕರಾಗಿದ್ದಾರೆ. ತಮ್ಮ ಮಗನನ್ನು ಉಳಿಸಿಕೊಡಿ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆ ಮುಂದೆ ಹೆತ್ತವರ ಗೋಳಾಟ ಕಂಡುಬಂದಿದೆ. ನಿನ್ನೆ ಸೂಕ್ತ ಚಿಕಿತ್ಸೆ ಸಿಗದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಂತಾಗಿತ್ತು. ನಿನ್ನೆ ಮಹೇಂದ್ರನನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ಕರೆತಂದಿದ್ದರು. ಆಸ್ಪತ್ರೆಯಲ್ಲಿ ಬೆಡ್ ಇಲ್ಲವೆಂದು ಒಂದು ಗಂಟೆ ಕಾಯಿಸಿದ್ದರು. ನಂತರ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿತ್ತು. ಬಳಿಕ ಐಸಿಯು ಬೆಡ್ ಇಲ್ಲವೆಂದು ವಾಪಸ್ ಕಳಿಸಿದ್ದರು. ನಂತರ ಮತ್ತಿಕೆರೆಯ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದೆ. ಇದೀಗ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಪೋಷಕರ ಪರದಾಡುತ್ತಿದ್ದಾರೆ. ಮದುವೆಯಾಗಿ 7 ವರ್ಷದ ಬಳಿಕ ಮಗ ಮಹೇಂದ್ರ ಜನಿಸಿದ್ದ. ದಂಪತಿಗೆ ಒಬ್ಬನೇ ಮಗ,ದ್ವಿತೀಯ ಪಿಯುಸಿ ಓದ್ತಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪಾವಗಡ ಬಸ್ ಅಪಘಾತ ಕೇಸ್: ಚಾಲಕ ವಶಕ್ಕೆ, FIR ದಾಖಲು, ಇತ್ತ ಬೆಂಗಳೂರಿನಲ್ಲಿ ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ
ಇದನ್ನೂ ಓದಿ: ಪಾವಗಡ ಬಸ್ ಅಪಘಾತ: ವಿಧಿಯಾಟಕ್ಕೆ ಅಕ್ಕ- ತಂಗಿ ಇಬ್ಬರೂ ಬಲಿ; ಮೃತರ ಸಂಖ್ಯೆ 6ಕ್ಕೆ ಏರಿಕೆ
Published On - 12:22 pm, Sun, 20 March 22