ತುಮಕೂರು: ಗಾಂಜಾ ಚಟ ಕರುನಾಡಿನ ಕೆಲವೆಡೆ ಮಾತ್ರವಲ್ಲ, ಕಲ್ಪತರು ನಾಡಿನಲ್ಲೂ ತನ್ನ ಕಬಂದಬಾಹುಗಳನ್ನ ಚಾಚಿದೆ. ಇದಕ್ಕೆ ತಾಜಾ ಉದಾಹರಣೆ, ತುಮಕೂರು ಜಿಲ್ಲೆಯಲ್ಲಿ ಹೆಚ್ಚಾಗ್ತಿರೋ ಗಾಂಜಾ ವ್ಯಸನಿಗಳು. ಹೀಗೆ ಕದ್ದು ಮುಚ್ಚಿ ವ್ಯಾವಹಾರ ನಡೆಸುತ್ತಿದ್ದ ಡ್ರಗ್ ಪೆಡ್ಲರ್ಗಳನ್ನ ಖಾಕಿ ಪಡೆ ಖೆಡ್ಡಾಗೆ ಕೆಡವಿದೆ.
ಹೀಗೆ ಕಡ್ಲೇ ಮಿಠಾಯಿ ಥರ ಕಟ್ಟಿರೋ ಸೊಪ್ಪು ನೀವು ಅಡುಗೆಗೆ ಬಳಸೋ ಸೊಪ್ಪು ಅಲ್ಲ. ಅಷ್ಟಕ್ಕೂ ಯಾವ ಸೊಪ್ಪಿನ ವಿಷಯ ಕೇಳಿದ್ರೆ ಸಾಮಾನ್ಯ ಜನ ಬೆಚ್ಚಿ ಬೀಳ್ತಾರೋ, ಯಾವ ಸೊಪ್ಪಿನ ಚಟದಿಂದ ಯುವಕರು ಸಮಾಜಕ್ಕೆ ಕಂಟಕವಾಗ್ತಿದ್ದಾರೋ ಅದೇ ವಸ್ತು ಕಣ್ರೀ ಇದು. ಅಂದಹಾಗೆ ಇದು ಗಾಂಜಾ.
ಕೆ.ಜಿ. ಗಟ್ಟಲೆ ಗಾಂಜಾ ಸಾಗಿಸುತ್ತಿದ್ದವರು ಅಂದರ್..!
ಗಾಂಜಾ ಅಥವಾ ಗಾಂಜಾ ವ್ಯಸನಿಗಳನ್ನ ಕಂಡ್ರೆ ಸಾಕು ಜನರು ಹೌಹಾರುವ ಸ್ಥಿತಿಯಿದೆ. ಯಾಕಂದ್ರೆ, ಗಾಂಜಾ ಹೊಡ್ಕೊಂಡು ಕೆಲವರು ಕೊಡ್ತಿರೋ ಕ್ವಾಟ್ಲೆ ಅಷ್ಟಿಷ್ಟಲ್ಲ. ಈ ಸ್ಥಿತಿ ರಾಜ್ಯದ ಕೆಲವು ಭಾಗಕ್ಕೆ ಸೀಮಿತವಾಗಿಲ್ಲ. ರಾಜ್ಯದ ಉದ್ದಗಲಕ್ಕೂ ಗಾಂಜಾ ಜಾಲ ಚಾಚಿದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಸಿಟಿ ತುಮಕೂರಲ್ಲೂ ಗಾಂಜಾ ಅನ್ನೋ ಹೆಮ್ಮಾರಿ ಎಡೆಬಿಡದೆ ಕಾಡ್ತಿದೆ.. ನೆಮ್ಮದಿಯಾಗಿ ಓಡಾಡಲು ಆಗದಂಥಾ ಸ್ಥಿತಿ ಇದೆ. ಆದ್ರೆ, ಇದಕ್ಕೆಲ್ಲಾ ಕಾರಣರಾಗ್ತಿದ್ದ ಡ್ರಗ್ ಪೆಡ್ಲರ್ಗಳನ್ನ ಪೊಲೀಸ್ರು ಹೆಡೆಮುರಿ ಕಟ್ಟಿ, ಕಂಬಿಹಿಂದೆ ತಳ್ಳಿದ್ದಾರೆ. ತುಮಕೂರು ನಗರದ ಮೊಕ್ದುಂ ಷರೀಫ್, ನಜೀಮ್ ಅಹಮದ್, ಕಮೀಲ್ ಪಾಷ ಎಂಬ ಮೂವರನ್ನ ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.
ಸಿನಿಮೀಯ ಸ್ಟೈಲ್ನಲ್ಲಿ ಆರೋಪಿಗಳು ಲಾಕ್..!
ಅಂದಹಾಗೆ ಕೊರಟಗೆರೆ-ತುಮಕೂರು ರಸ್ತೆಯ ರಾಜ್ಯ ಹೆದ್ದಾರಿ 33 ರ ಪ್ರಿಯದರ್ಶಿನಿ ಕಾಲೇಜು ಮಂಭಾಗ ಕೊರಟಗೆರೆ ಪಿಎಸ್ಐ ಮಂಜುನಾಥ್ ನೇತೃತ್ವದ ತಂಡ ವಾಹನ ತಪಾಸಣೆ ವೇಳೆ ಕೆಂಪುಬಣ್ಣದ ಕಾರನ್ನ ನಿಲ್ಲಿಸಿದ್ದಾರೆ. ಪರಿಶೀಲಿಸಿದಾಗ ತಕ್ಷಣ ಇಬ್ಬರು ಕಾರಿಂದ ಇಳಿದು ಸಿನಿಮೀಯ ಶೈಲಿಯಲ್ಲಿ ಎಸ್ಕೇಪ್ ಆಗಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ತಪಾಸಣೆ ನಡೆಸಿದ ಬಳಿಕ ಅದೇ ಕಾರಿನಲ್ಲಿ ಮಾರಕಾಸ್ತ್ರ ಸೇರಿದಂತೆ 50 ಕೆ.ಜಿ. ಗಾಂಜಾ ಸಿಕ್ಕಿದೆ.
ಬಂಧಿತರನ್ನ ವಿಚಾರಣೆ ನಡೆಸುತ್ತಿರುವ ಪೊಲೀಸರು, ಮತ್ತಷ್ಟು ಮಾಹಿತಿ ಹೊರ ಬೀಳುವ ನಿರೀಕ್ಷೆಯಲ್ಲಿದ್ದಾರೆ. ಕಲ್ಪತರು ನಾಡಿನ ಕಾಲೇಜು ಯುವಕರ ಕೈಗೆ ಗಾಂಜಾ ಸೊಪ್ಪು ತಲುಪುತ್ತಿದ್ದು ಹೇಗೆ ಅನ್ನೋದನ್ನ ರಿವೀಲ್ ಮಾಡಲು ತನಿಖೆ ಮುಂದುವರಿದಿದೆ. ಈ ದಂಧೆಯ ಹಿಂದಿರುವ ಪ್ರಬಲ ಶಕ್ತಿಗಳ ಬಂಡವಾಳ ಬಯಲು ಮಾಡಬೇಕಿದೆ.