ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿ ತನಕ ಸಾಕಷ್ಟು ಜನರಿಗೆ ಅಕ್ಷರ ಕಲಿಸಿದ ಶಾಲೆ ಸ್ಥಿತಿ ಕೇಳೋರಿಲ್ಲ

ತುಮಕೂರು ಜಿಲ್ಲೆಯ ತಿಪಟೂರಿನ 90 ವರ್ಷಗಳ ಹಳೆಯ ಸರ್ಕಾರಿ ಮಾದರಿ ಬಾಲಕಿಯರ ಶಾಲೆ ಶಿಥಿಲಾವಸ್ಥೆಯಲ್ಲಿದೆ. 7 ಕೊಠಡಿಗಳು ಸಂಪೂರ್ಣ ಹಾಳಾಗಿವೆ, ಗೋಡೆಗಳು ಬಿರುಕು ಬಿಟ್ಟಿವೆ, ಚಾವಣಿ ಸೋರುತ್ತಿದೆ. 152 ಮಕ್ಕಳು ಅಪಾಯಕಾರಿ ಪರಿಸ್ಥಿತಿಯಲ್ಲಿ ಪಾಠ ಕೇಳುತ್ತಿದ್ದಾರೆ. ಅಡುಗೆ ಕೋಣೆಯೂ ಕಳಪೆಯಾಗಿದೆ. ಶೀಘ್ರ ದುರಸ್ತಿ ಅಥವಾ ಹೊಸ ಕಟ್ಟಡ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿ ತನಕ ಸಾಕಷ್ಟು ಜನರಿಗೆ ಅಕ್ಷರ ಕಲಿಸಿದ ಶಾಲೆ ಸ್ಥಿತಿ ಕೇಳೋರಿಲ್ಲ
ತಿಪಟೂರು ಸರ್ಕಾರಿ ಶಾಲೆ
Edited By:

Updated on: Mar 04, 2026 | 6:59 PM

ತಿಪಟೂರು, ಮಾ.4: ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾಗಿ, ಸಾವಿರಾರು ಬಡ ಮಕ್ಕಳ ಬದುಕಿಗೆ ದಾರಿದೀಪವಾಗಿದ್ದ ತುಮಕೂರು ಜಿಲ್ಲೆಯ ತಿಪಟೂರು (Tiptur) ನಗರದ ರೈಲ್ವೆ ರಸ್ತೆಯಲ್ಲಿರುವ ‘ಸರ್ಕಾರಿ ಮಾದರಿ ಬಾಲಕಿಯರ ಶಾಲೆ’ ಇಂದು ಅಕ್ಷರಶಃ ಪತನದ ಅಂಚಿನಲ್ಲಿದೆ. ಪ್ರತಿಭಾವಂತ ವಿದ್ಯಾರ್ಥಿಗಳ ಜೀವನಕ್ಕೆ ಈ ಶಾಲೆ ಆಸರೆಯಾಗಿತ್ತು. ದೇಶಕ್ಕೆ ಒಳ್ಳೆಯ ನಾಗರಿಕರನ್ನು ಹಾಗೂ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ನೀಡಿದ ಶಾಲೆಯ ಸ್ಥಿತಿ ಹೇಗಿದೆ ನೋಡಿ. 1935ರಲ್ಲಿ ಸ್ಥಾಪನೆಯಾದ ಈ ಶಾಲೆಗೆ ಈಗ 90 ವರ್ಷ, ಆದರೆ ಇದೀಗ ಅಭಿವೃದ್ಧಿ ಕಾಣದೆ ಈ ‘ಜ್ಞಾನ ದೇಗುಲ’ ಈಗ ಶಿಥಿಲಾವಸ್ಥೆಯ ಗೂಡಾಗಿದೆ. ಶಾಲೆಯಲ್ಲಿ ಒಟ್ಟು 9 ಕೊಠಡಿಗಳಿದ್ದು, ಅದರಲ್ಲಿ 7 ಕೊಠಡಿಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಗೋಡೆಗಳು ಬಿರುಕು ಬಿಟ್ಟಿದ್ದು, ಚಾವಣಿಯಿಂದ ಸಿಮೆಂಟ್ ಚಕ್ಕೆಗಳು ಉದುರುತ್ತಿವೆ.

ಮಳೆ ಬಂದರೆ ಸಾಕು, ಚಾವಣಿ ಸೋರಿ ಇಡೀ ಶಾಲೆ ಕೆರೆಯಂತಾಗುತ್ತದೆ. ಅದೇ ತೇವಾಂಶಭರಿತ ಕೋಣೆಗಳಲ್ಲಿ 152 ಮಕ್ಕಳು ಜೀವ ಕೈಯಲ್ಲಿ ಹಿಡಿದು ಪಾಠ ಕೇಳುವಂತಾಗಿದೆ. ಬಿಸಿಯೂಟ ತಯಾರಿಸುವ ಅಡುಗೆ ಕೋಣೆಯ ಸ್ಥಿತಿ ಇನ್ನೂ ಭೀಕರವಾಗಿದೆ. ಚಾವಣಿಯಿಂದ ಮಣ್ಣು ಉದುರುತ್ತಿದ್ದರೂ, ಅನಿವಾರ್ಯವಾಗಿ ಅಲ್ಲೇ ಅಡುಗೆ ಮಾಡಿ ಮಕ್ಕಳಿಗೆ ಬಡಿಸಲಾಗುತ್ತಿದೆ. ಆಹಾರ ದಾಸ್ತಾನು ಕೊಠಡಿಯೂ ಸಂಪೂರ್ಣ ಹಾಳಾಗಿದೆ.

ಇದನ್ನೂ ಓದಿ: ಇರಾನ್- ಇಸ್ರೇಲ್ ಯುದ್ಧದಿಂದ ತೈಲ ಬೆಲೆ ಏರಿಕೆ ಸುದ್ದಿ: ಭಟ್ಕಳದಲ್ಲಿ ಡೀಸೆಲ್, ಪೆಟ್ರೋಲ್​​ಗೆ ಮುಗಿಬಿದ್ದ ಜನ

ತಿಪಟೂರನ್ನು ಜಿಲ್ಲೆ ಮಾಡಬೇಕೆಂಬ ಕನಸು ಕಾಣುವ ಜನಪ್ರತಿನಿಧಿಗಳಿಗೆ, ನಗರದ ಮಧ್ಯಭಾಗದಲ್ಲಿರುವ ಈ ಶಾಲೆಯ ಅವಸ್ಥೆ ಕಾಣುತ್ತಿಲ್ಲವೇ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಕ್ಷಣದಲ್ಲಿ ಚಾವಣಿ ಬಿದ್ದು ಅನಾಹುತ ಸಂಭವಿಸುವ ಮುನ್ನ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ತಕ್ಷಣವೇ ಕಟ್ಟಡ ದುರಸ್ತಿಪಡಿಸಬೇಕು ಅಥವಾ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಸಾಮಾಜಿಕ ಹೋರಾಟಗಾರರು ಮತ್ತು ಪೋಷಕರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:59 pm, Wed, 4 March 26

Follow Us