ರಾಜ್ಯ ರಾಜಕಾರಣದಲ್ಲಿ ಮತ್ತೆ ಹನಿಟ್ರ್ಯಾಪ್ ಸಂಚಲನ: ಕಾಂಗ್ರೆಸ್ ಶಾಸಕ, ಪುತ್ರನ ಆಡಿಯೋ ರಿಲೀಸ್

ತುಮಕೂರು ಜಿಲ್ಲೆಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಆರೋಪ ಹೊಸ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಶಾಸಕ ಮತ್ತು ಪುತ್ರನ ವಿರುದ್ಧ ಜೆಡಿಎಸ್ ಮುಖಂಡ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಚಲನವಲನದ ಮೇಲೆ ಗೂಢಚಾರಿಕೆ ನಡೆಸಲಾಗುತ್ತಿದೆ ಮತ್ತು ಹನಿಟ್ರ್ಯಾಪ್ ಮೂಲಕ ತನ್ನನ್ನು ಕೆಣಕಲು ಯತ್ನಿಸಲಾಗುತ್ತಿದೆ ಎಂದಿದ್ದಾರೆ. ಈ ವಿಚಾರ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯ ರಾಜಕಾರಣದಲ್ಲಿ ಮತ್ತೆ ಹನಿಟ್ರ್ಯಾಪ್ ಸಂಚಲನ: ಕಾಂಗ್ರೆಸ್ ಶಾಸಕ, ಪುತ್ರನ ಆಡಿಯೋ ರಿಲೀಸ್
JDS ಮುಖಂಡ ನಾಗರಾಜ್, ಶಾಸಕ ಎಸ್.ಆರ್.ಶ್ರೀನಿವಾಸ್
Image Credit source: tv9 kannada
Edited By:

Updated on: May 22, 2026 | 9:59 PM

ತುಮಕೂರು, ಮೇ 22: ಜಿಲ್ಲಾ ರಾಜಕೀಯದಲ್ಲಿ ಇದೀಗ ಹನಿಟ್ರ್ಯಾಪ್ ಆರೋಪದ ಮಾತು ಹೊಸ ಸಂಚಲನ ಸೃಷ್ಟಿಸಿದೆ. ಗುಬ್ಬಿ ಕಾಂಗ್ರೆಸ್ ಶಾಸಕ ಎಸ್​ಆರ್ ಶ್ರೀನಿವಾಸ್ (SR Srinivas) ಹಾಗೂ ಪುತ್ರ ದುಷ್ಯಂತ್ ವಿರುದ್ಧ ಜೆಡಿಎಸ್ (JDS) ಮುಖಂಡ ನಾಗರಾಜು ಗಂಭೀರ ಆರೋಪ ಮಾಡಿದ್ದಾರೆ. ತನ್ನ ಚಲನವಲನದ ಮೇಲೆ ಗೂಢಚಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಅವರು ಈ ಸಂಬಂಧ ಕೆಲ ಆಡಿಯೋ ಬಿಡುಗಡೆ ಕೂಡ ಮಾಡಿದ್ದಾರೆ. ಸದ್ಯ ಈ ವಿಚಾರ ಜಿಲ್ಲೆಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಮುಖ್ಯಾಂಶಗಳು

  • ತುಮಕೂರು ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಹನಿಟ್ರ್ಯಾಪ್, ಗೂಢಚಾರಿಕೆ
  • ಗುಬ್ಬಿ ಕಾಂಗ್ರೆಸ್ ಶಾಸಕ ಎಸ್​ಆರ್ ಶ್ರೀನಿವಾಸ್​​ ಮತ್ತು ಪುತ್ರನ ವಿರುದ್ಧ ಆರೋಪ
  • ನನಗೇನಾದರೂ ಆದರೆ ಅದಕ್ಕೆ ಅವರೇ ನೇರ ಹೊಣೆ ಎಂದ ಜೆಡಿಎಸ್ ಮುಖಂಡ

ನನ್ನ ವಿರುದ್ಧ ಗೂಢಾಚಾರಿಕೆ, ಹನಿಟ್ರ್ಯಾಪ್ ಸಂಚು: ನಾಗರಾಜು ಆಕ್ರೋಶ

ತುಮಕೂರು ನಗರದ ಜೆಡಿಎಸ್ ಕಚೇರಿಯಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ಮುಖಂಡ ಸಿ.ಎಸ್. ಪುರ ನಾಗರಾಜು, ‘ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನನ್ನನ್ನು ಟ್ರಾಪ್ ಮಾಡಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ. ನನ್ನ ವೈಯಕ್ತಿಕ ಚಲನವಲನಗಳ ಮೇಲೆ ಗೂಢಾಚಾರಿಕೆ ನಡೆಸಲಾಗುತ್ತಿದೆ’ ಎಂದು ಆರೋಪಿಸಿದರು. ಚಾಲಕ ಸಂತೋಷ್ ಹಾಗೂ ಆಪ್ತ ಸಹಾಯಕ ಚಂದು ಅವರನ್ನು ಹಣದ ಆಮಿಷವೊಡ್ಡಿ ಸಂಪರ್ಕ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ನನ್ನ ಚಲನವಲನದ ಮೇಲೆ ಗೂಢಚಾರಿಕೆ ನಡೆಸಲಾಗುತ್ತಿದೆ ಎಂದು ನಾಗರಾಜು ಆರೋಪಿಸಿದ್ದು, ಬೆಂಗಳೂರಿನಲ್ಲಿರುವ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಫ್ಲ್ಯಾಟ್‌ಗೆ ನನ್ನ ಚಾಲಕನನ್ನು ಕರೆಸಿಕೊಂಡು ಮಾಹಿತಿ ಕಲೆಹಾಕುವ ಪ್ರಯತ್ನ ನಡೆದಿದೆ. ‘ನನಗೆ ಎಲ್ಲಾದರೂ ಅಕ್ರಮ ಸಂಬಂಧ ಇದೆಯಾ? ಎಂದು ಚಾಲಕನನ್ನು ವಿಚಾರಿಸಿದ್ದಾರೆ. ನನ್ನ ವ್ಯವಹಾರಗಳನ್ನು ಕಟ್ಟಿಹಾಕಿ, ಬ್ಯುಸಿನೆಸ್ ಲಾಸ್ ಮಾಡಿಸಿ ನನ್ನನ್ನು ಬೀದಿಗೆ ನಿಲ್ಲಿಸಬೇಕೆಂಬುದು ಇವರ ಕುತಂತ್ರ’ ಎಂದು ನಾಗರಾಜು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೇರಿದ ರಾಜಣ್ಣ: ಹಿರಿಯೂರು ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣು, ಉಪಚುನಾವಣೆ ಅಖಾಡಕ್ಕೆ ರಂಗು

ಇದೇ ವೇಳೆ ಶಾಸಕರ ಪುತ್ರ ದುಷ್ಯಂತ್​​​​ರದ್ದು ಎನ್ನಲಾದ ಆಡಿಯೋ ಒಂದನ್ನು ನಾಗರಾಜು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ‘ನನಗೇನಾದರೂ ಆದರೆ ಅದಕ್ಕೆ ಶಾಸಕ ಶ್ರೀನಿವಾಸ್ ಅವರೇ ನೇರ ಹೊಣೆ’ ಎಂದಿದ್ದಾರೆ.

ಕಾಂಗ್ರೆಸ್ ನಾಯಕರ ವಿರುದ್ಧ ಹೊನ್ನಗಿರಿಗೌಡ ವಾಗ್ದಾಳಿ

ಇನ್ನು ಇದೇ ವೇಳೆ ಜೆಡಿಎಸ್ ಮುಖಂಡ ಹೊನ್ನಗಿರಿಗೌಡ ಸಹ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ‘ಗೆದ್ದಿದ್ದಾರೆಂದು ಎದುರಾಳಿ ಅಭ್ಯರ್ಥಿಗೆ ತೊಂದರೆ ಕೊಡುವುದು ಸರಿಯಲ್ಲ. ಹನಿಟ್ರ್ಯಾಪ್ ರಾಜಕಾರಣ ರಾಜ್ಯದಲ್ಲಿ ಅಪಾಯಕಾರಿ ಬೆಳವಣಿಗೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪ್ರಜ್ವಲ್ ರೇವಣ್ಣ ಹಾಗೂ ರಮೇಶ್ ಜಾರಕಿಹೊಳಿ ಪ್ರಕರಣಗಳನ್ನೂ ಉಲ್ಲೇಖಿಸಿದ ಹೊನ್ನಗಿರಿಗೌಡ, ‘ಕೀಳು ಮಟ್ಟದ ರಾಜಕಾರಣ ನಿಲ್ಲಬೇಕು’ ಎಂದು ಆಗ್ರಹಿಸಿದರು.

ಇದನ್ನೂ ಓದಿ: ಜಿಟಿ ದೇವೇಗೌಡಗೆ ಬಿಗ್ ಶಾಕ್: ಸ್ವಪಕ್ಷದ ಶಾಸಕರನ್ನ ದೂರವಿಟ್ಟು ಜೆಡಿಎಸ್​​ ಸಮಾವೇಶ

ಸದ್ಯ ಗುಬ್ಬಿಯ ಜೆಡಿಎಸ್ ಮುಖಂಡ ಸಿಎಸ್ ಪುರ ನಾಗರಾಜು ಆರೋಪ ಬೆನ್ನಲ್ಲೇ ತುಮಕೂರಿನ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಇನ್ನು ನಾಗರಾಜು ಮಾಡಿದ ಈ ಆರೋಪಗಳಿಗೆ ಇನ್ನಷ್ಟೇ ಶಾಸಕ ಶ್ರೀನಿವಾಸ್ ಪ್ರತಿಕ್ರಿಯೆ ನೀಡಬೇಕಾಗಿದ್ದು, ಈ ಬೆಳವಣಿಗೆ ಮುಂದೆ ಯಾವ ತಿರುವು ಪಡೆದುಕೊಳ್ಳತ್ತೆ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Jagadisha B

ಜಗದೀಶ್​ ಬಸವರಾಜು ಟಿವಿ9 ಕನ್ನಡದ ವರದಿಗಾರರಲ್ಲಿ ಒಬ್ಬರು. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ.

Read More
Follow Us