ಇಲ್ಲಿಗೆ ಭೇಟಿ ಕೊಟ್ಟವರು ಸಿಎಂ ಕುರ್ಚಿ ಕಳೆದುಕೊಂಡ್ರು: ಈಗ ಸಿದ್ದರಾಮಯ್ಯಗೂ ಕಾಡುತ್ತಾ ಶನಿಕಾಟ?
ಚಾಮರಾಜನಗರಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತುಗಳ ನಡುವೆ ಸಿದ್ದರಾಮಯ್ಯ ಜಿಲ್ಲೆಗೆ ಹಲವು ಬಾರಿ ಭೇಟಿ ನೀಡಿದ್ದು, ಈ ಮೂಲಕ ಸಿಎಂ ಕುರ್ಚಿ ಕಳೆದುಕೊಳ್ಳುತ್ತಾರೆ ಎನ್ನುವ ನಂಬಿಕೆಯನ್ನು ಸುಳ್ಳಾಗಿಸಿದ್ದರು. ಇದೀಗ ತುಮಕೂರು ಜಿಲ್ಲೆಯ ಪಾವಗಡ ಸರದಿ. ಪಾವಗಡ ಪಟ್ಟಣಕ್ಕೆ ಭೇಟಿಕೊಟ್ಟ ಮುಖ್ಯಮಂತ್ರಿಗಳೆಲ್ಲಾ ಅಧಿಕಾರ ಕಳಕೊಂಡಿದ್ದಾರೆ. ಇದೀಗ ಇದನ್ನು ಸಹ ಸಿದ್ದರಾಮಯ್ಯ ಸುಳ್ಳಾಗಿಸುತ್ತಾರಾ? ಏನಿದು ಸಿಎಂ ಕುರ್ಚಿಗೆ ಶನಿದೇವರ ಕಾಟ?

ತುಮಕೂರು, ಜುಲೈ 20: ರಾಜ್ಯ ಕಾಂಗ್ರೆಸ್ನಲ್ಲಿ ಪವರ್ ಶೇರಿಂಗ್ ನಡುವೆ ಸಿಎಂ ಸಿದ್ದರಾಮಯ್ಯಗೆ (Siddaramaiah) ಶನಿದೇವರ ಕಾಟ ಕಾಡಲಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಸಿಎಂ ಸಿದ್ದರಾಮಯ್ಯ ಸೋಮವಾರ ಪಾವಗಡ (Pavagada) ಪಟ್ಟದ ಹೈಸ್ಕೂಲ್ ಮೈದಾನದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಶನಿಮಹಾತ್ಮ ದೇವರ ಕೋಪದಿಂದಾಗಿ ಪಾವಗಡ ಪಟ್ಟಣಕ್ಕೆ ಭೇಟಿ ಕೊಟ್ಟ ಮುಖ್ಯಮಂತ್ರಿಗಳೆಲ್ಲಾ ಅಧಿಕಾರ ಕಳಕೊಂಡಿದ್ದಾರೆ ಎಂಬ ನಂಬಿಕೆ ಇದೆ. ಈ ನಿಟ್ಟಿನಲ್ಲಿ ನಾಳೆ ಸಿಎಂ ತೆರಳುತ್ತಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಚಾಮರಾಜನಗರ ನಗರಕ್ಕೆ ಹೋಗಿ ಸೈ ಎನಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ನಾಳೆ ಪಾವಗಡಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ಎರಡು-ಮೂರು ಬಾರಿ ಪಾವಗಡ ತಾಲೂಕಿಗೆ ಭೇಟಿ ಕೊಟ್ಟಿದ್ದರೂ ಪಾವಗಡ ಪಟ್ಟಣಕ್ಕೆ ಸಿಎಂ ಹೋಗಿರಲಿಲ್ಲ. ಸದ್ಯ ಇದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಇಲ್ಲ: ಸಿಎಂ ಸಿದ್ದರಾಮಯ್ಯಗೆ ಸ್ಪಷ್ಟ ಸಂದೇಶ ರವಾನಿಸಿರುವ ಕಾಂಗ್ರೆಸ್ ಹೈಕಮಾಂಡ್
ನಿನ್ನೆ ಈ ಕುರಿತಾಗಿ ಮಾತನಾಡಿದ್ದ ಪಾವಗಡ ಶಾಸಕ ವೆಂಕಟೇಶ್, ಸಿಎಂ ಸಿದ್ಧರಾಮಯ್ಯ ಅವರಿಗೆ ಆ ಭಾವನೆ ಇಲ್ಲ. ಆ ನಂಬಿಕೆಗಳನ್ನು ಅವರು ನಂಬುವುದಿಲ್ಲ ಎಂದಿದ್ದರು.
ಅಧಿಕಾರ ಕಳೆದುಕೊಂಡವರು ಯಾರೆಲ್ಲಾ?
- 1980 ಆಗಸ್ಟ್ 21ರಂದು ಪಟ್ಟಣದ ಶ್ರೀ ಶನೇಶ್ವರ ಕಾರ್ಯನಿರ್ವಾಹಕ ಸಂಘದ ಅಥಿತಿ ಗೃಹ ಉದ್ಘಾಟಿಸಿದ ಆರ್ ಗುಂಡೂರಾವ್ ಮಧ್ಯದಲ್ಲೇ ಅಧಿಕಾರ ಕಳಕೊಂಡಿದ್ದರು.
- 1990 ಆಗಸ್ಟ್ 13ರಲ್ಲಿ ಅಂದಿನ ಸಿಎಂ ವೀರೇಂದ್ರ ಪಾಟೀಲ್ ಪಾವಗಡ ಪಟ್ಟಣದ ರೇಷ್ಮೆ ಇಲಾಖೆಯ ಕಟ್ಟಡ ಉದ್ಘಾಟನೆ ಮಾಡಿ ಹೋದ ಕೆಲವೇ ದಿನದಲ್ಲಿ ಅಧಿಕಾರ ಕಳಕೊಂಡಿದ್ದರು.
- 1992 ಜನವರಿ 20ರಲ್ಲಿ ಪಾವಗಡ ಪಟ್ಟಣಕ್ಕೆ ಭೇಟಿ ಕೊಟ್ಟಿದ್ದ ಮಾಜಿ ಸಿಎಂ ಬಂಗಾರಪ್ಪನವರೂ ಅಧಿಕಾರ ಪೂರ್ಣ ಪೂರೈಸದೇ ಪದವಿಯಿಂದ ಇಳಿದಿದ್ದರು.
- ಹೆಚ್ಡಿ ಕುಮಾರಸ್ವಾಮಿ ಕೂಡ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಸಿಎಂ ಆಗಿದ್ದಾಗ ಪಾವಗಡಕ್ಕೆ ಭೇಟಿ ಕೊಟ್ಟು ಕುರ್ಚಿಯಿಂದ ಕೆಳಗೆ ಇಳಿದಿದ್ದರು.
2350 ಕೋಟಿ ರೂ ವೆಚ್ಚದ ಯೋಜನೆಗೆ ನಾಳೆ ಉದ್ಘಾಟನೆ
ಇನ್ನು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ.
ಮೊಳಕಾಲ್ಮೂರು, ಚೆಳ್ಳಕೆರೆ ಜೊತೆಗೆ ಪಾವಗಡಕ್ಕೆ ಸುಮಾರು 2350 ಕೋಟಿ ರೂ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಇದಾಗಿದೆ. ತುಂಗಭದ್ರಾ ಹಿನ್ನೀರಿನಿಂದ ಪೈಪ್ ಲೇನ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಿಎಂ ಉದ್ಘಾಟನೆ ಬಳಿಕ ಪ್ರತಿ ಊರಿಗೂ ಕುಡಿಯುವ ನೀರು ಲಭ್ಯವಾಗಲಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಜತೆ ಮಾತುಕತೆಗೂ ಮುನ್ನ ತಾವೇ 5 ವರ್ಷ ಸಿಎಂ ಎಂದ ಸಿದ್ದರಾಮಯ್ಯ
ಸಿಎಂ ಜೊತೆ ಗೃಹ ಸಚಿವ ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಸಂತೋಷ್ ಲಾಡ್, ಜಯಚಂದ್ರ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗಿ ಆಗಲಿದ್ದಾರೆ. ಕಾರ್ಯಕ್ರಮಕ್ಕೆ 35 ಸಾವಿರಕ್ಕೂ ಅಧಿಕ ಜನ ಭಾಗಿಯಾಗುವ ನಿರೀಕ್ಷೆ ಇದ್ದು, ತುಮಕೂರು ಎಸ್ಪಿ ನೇತೃತ್ವದಲ್ಲಿ ಅಗತ್ಯ ಬಂದೊಬಸ್ತ್ ನಿಯೋಜನೆ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.