ತಾಯಿ ಸಾವಿನ ನೋವಲ್ಲಿ ಎಂಜಿನಿಯರ್​​ ಆತ್ಮಹತ್ಯೆ: ಬೆಟ್ಟದ ಮೇಲಿಂದ ಜಿಗಿದು ದಾರುಣ ಅಂತ್ಯ

ತುಮಕೂರಿನ ಪಿಡಬ್ಲ್ಯೂಡಿ ಎಂಜಿನಿಯರ್ ಓರ್ವರು, ತಾಯಿಯ ಅಗಲಿಕೆಯ ತೀವ್ರ ನೋವಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ದೇವರಾಯನದುರ್ಗ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ದುಡಿಕಿನ ನಿರ್ಧಾರದಿಂದ 20 ದಿನಗಳ ಪುಟ್ಟ ಮಗು ಇರುವ ಪತ್ನಿ ದಿಕ್ಕುತೋಚದ ಸ್ಥಿತಿ ತಲುಪಿದ್ದು, ಈ ದುರಂತ ಘಟನೆಯಿಂದ ಕುಟುಂಬ ಮತ್ತು ಸ್ನೇಹಿತರಿಗೆ ಬರಸಿಡಿಲು ಬಡಿದಂತಾಗಿದೆ.

ತಾಯಿ ಸಾವಿನ ನೋವಲ್ಲಿ ಎಂಜಿನಿಯರ್​​ ಆತ್ಮಹತ್ಯೆ: ಬೆಟ್ಟದ ಮೇಲಿಂದ ಜಿಗಿದು ದಾರುಣ ಅಂತ್ಯ
ಮೃತ ಮಂಜುಪ್ರಸಾದ್​
Image Credit source: Tv9 Kannada
Edited By:

Updated on: May 12, 2026 | 6:18 PM

ತುಮಕೂರು, ಮೇ 12: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪಿಡಬ್ಲ್ಯೂಡಿ ಎಂಜಿನಿಯರ್​​ ಓರ್ವ 20 ದಿನಗಳ ಮಗು ಮತ್ತು ಪತ್ನಿಯನ್ನು ಬಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಲ್ಲಿ (Tumakuru) ನಡೆದಿದೆ. ಮಂಜುಪ್ರಸಾದ್ ಮೃತ ವ್ಯಕ್ತಿಯಾಗಿದ್ದು, ದೇವರಾಯನದುರ್ಗ ಬೆಟ್ಟದ ಮೇಲಿಂದ ಜಿಗಿದು ದುರಂತ ಅಂತ್ಯ ಕಂಡಿದ್ದಾರೆ. ತಾಯಿಯ ಅಗಲುವಿಕೆಯ ನೋವಿನಲ್ಲಿ ಅವರಿದ್ದರು ಎನ್ನಲಾಗಿದ್ದು, ಮಂಜುಪ್ರಸಾದ್ ಸಾವು ಪತ್ನಿ ಸೇರಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಸ್ನೇಹಿತರಿಗೂ ಆಘಾತ ತಂದಿದೆ.

ಮೂಲತಃ ತುಮಕೂರಿನ ಸತ್ಯಮಂಗಲದ ನಿವಾಸಿಯಾದ ಮಂಜುಪ್ರಸಾದ್ ಎಂಟೆಕ್​​ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ತಾಯಿಯ ಕನಸಿನಂತೆ ಕಳೆದ ಮೂರು ವರ್ಷಗಳ ಹಿಂದೆ ಪಿಡಬ್ಲ್ಯೂಡಿ ಎಂಜಿನಿಯರ್ ಆಗಿ ಕೆಲಸಗಿಟ್ಟಿಸಿಕೊಂಡಿದ್ದರು. ಪ್ರಸ್ತುತ ಪಾವಗಡ ಪಿಡಬ್ಲ್ಯೂಡಿ ಎಂಜಿನಿಯರ್ ಆಗಿ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ತಾಯಿ ಮತ್ತು ಹೆಂಡತಿ ಜೊತೆಗೆ ಸುಖವಾಗಿದ್ದ ಮಂಜುಪ್ರಸಾದ್ ಒಂದುವರೆ ವರ್ಷದ ಹಿಂದೆ ಅಮ್ಮ ಮೃತಪಟ್ಟ ಬಳಿಕ ಮಾನಸಿಕವಾಗಿ ತೀವ್ರ ನೊಂದಿದ್ದರು. ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದ ಇವರಿಗೆ ತಾಯಿ ಮೇಲೆ ಅಪಾರ ಪ್ರೀತಿ ಇತ್ತು. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಬೆಟ್ಟದಷ್ಟು ಕನಸು ಕೂಡ ಕಂಡಿದ್ದರು. ಆದರೆ ದುರದೃಷ್ಟವಶಾತ್​​ ಅನಾರೋಗ್ಯದಿಂದ ಅವರ ತಾಯಿ ಮೃತಪಟ್ಟಿದ್ದರು. ಆಕೆಯ ಅಗಲಿಕೆಯ ನೋವು ಸಹಿಸಲಾಗದ ಮಂಜುಪ್ರಸಾದ್ ಮನೆ ಮುಂದೆಯೇ ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ್ದರು. ಆ ಬಳಿಕ ಪ್ರತಿದಿನವೂ ಬೆಳಿಗ್ಗೆ ಎದ್ದ ಬಳಿಕ ಆಕೆಯ ಸಮಾಧಿಯನ್ನು ಮಂಜುಪ್ರಸಾದ್ ನೋಡುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಇದನ್ನೂ ಓದಿ: ನಾಪತ್ತೆಯಾಗಿದ್ದ ದಲಿತ ಮಹಿಳೆ ಮೂರು ದಿನದ ಬಳಿಕ ಶವವಾಗಿ ಪತ್ತೆ; ಸಾವಿನ ಸುತ್ತ ಹತ್ತಾರು ಅನುಮಾನ

ಮಗುವಾದ ಕ್ಷಣದಲ್ಲಿ ಖುಷಿಯಾಗಿದ್ದ ಮಂಜುಪ್ರಸಾದ್, ತಾಯಿಯನ್ನು ಮಗುವಿನಲ್ಲಿ ನೋಡೊ ಪ್ರಯತ್ನ ಮಾಡಿದ್ದರು. ಆ ಮಗುವಿಗೂ ತಾಯಿ ಹೆಸರಾದ ಪುಟ್ಟಮ್ಮ ಎಂದೇ ಕರೆಯುತಿದ್ದರು. ಮೊನ್ನೆ ದೇವಸ್ಥಾನಕ್ಕೆ ಹೊಗಿದ್ದು, ದೇವರಿಗೆ ಮುಡಿ ಕೊಟ್ಟು ನಿನ್ನೆ ಬೆಳಿಗ್ಗೆ ಪತ್ನಿಯ ಕೊರಟಗೆರೆ ನಿವಾಸಕ್ಕೆ ಬಂದ ಮಂಜು, ನಂತರ ಕೆಲಸ ಇದೆ ಬರ್ತಿನಿ ಎಂದು ಹೊದವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಈ ದುಡುಕಿನ ನಿರ್ಧಾರದಿಂದಾಗಿ ನಾಲ್ಕು ವರ್ಷಗಳ ಹಿಂದೆ ಕೈಹಿಡಿದಿದ್ದ ಪತ್ನಿ ದಿಕ್ಕುತೋಚದ ಸ್ಥಿತಿಗೆ ತಲುಪಿದ್ದಾರೆ. 20 ದಿನಗಳ ಪುಟ್ಟ ಕಂದಮ್ಮನಿಗೂ ತಂದೆ ಇಲ್ಲದಂತಾಗಿದ್ದು, ಈ ಸಾವು ಸ್ನೇಹಿತರಿಗೂ ಕಣ್ಣೀರು ತರಿಸಿದೆ.

ಅಸಲಿಗೆ ತಾಯಿ ಕಳೆದುಕೊಂಡಿದ್ದ ಮಂಜುಪ್ರಸಾದ್ ಈ ಹಿಂದೆ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಎರಡು ತಿಂಗಳ ಹಿಂದೆ ಸಹ ಹುಬ್ಬಳ್ಳಿಗೆ ತೆರಳಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಇನ್ನು ಮಾನಸಿಕ ಸಮಸ್ಯೆಯಿಂದ ಬಳಲುತಿದ್ದ ಮಂಜು ವೈದ್ಯರ ಬಳಿ ಚಿಕಿತ್ಸೆ ಸಹ ಪಡೆಯುತಿದ್ದರು. ಆದರೆ ಈ ನಡುವೆ ಅದೇನಾಯ್ತೋ ಗೊತ್ತಿಲ್ಲ ಏಕಾಏಕಿ ಬೆಟ್ಟದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ಸಂಬಂಧಿಕರ ಮಾತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:13 pm, Tue, 12 May 26

Follow Us